Saturday, 27th July 2024

ಲಸಿಕೆ ಪಡೆದವರಿಗೂ ಕರೋನಾ ಕಾಟ ತಪ್ಪಿದ್ದಲ್ಲ, ಎಚ್ಚರಿಕೆ ವಹಿಸಿ: ಡಾ.ಸಿ.ಎನ್.ಮಂಜುನಾಥ್

ಬೆಂಗಳೂರು: ಕೋವಿಡ್ ಲಸಿಕೆ ಪಡೆದವರೂ ನಿರುಮ್ಮಳರಾಗಕೂಡದು. ಅವರಿಗೂ ಸೋಂಕು ಹರಡುವ ಸಾಧ್ಯತೆ ಇದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

ಲಸಿಕೆ ಪಡೆದವರಿಗೆ ಸೋಂಕು ಬಂದರೂ ಅದರ ತೀವ್ರತೆ ಕಡಿಮೆ ಇದ್ದು, ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುತ್ತದೆ. ಲಸಿಕೆ ಪಡೆದಿದ್ದೇವೆ ಎಂದು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ಸರ್ಕಾರ ಜಾರಿ ಮಾಡಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ಎಂದರು.

ಸರ್ಕಾರ ಕಾಲಕಾಲಕ್ಕೆ ಜಾರಿ ಮಾಡುವ ಮಾರ್ಗಸೂಚಿ ಮತ್ತು ನಿಯಮಗಳನ್ನು ಪಾಲಿಸಲು ಜನರು ಸಹಕರಿಸಬೇಕು. ಇಲ್ಲದಿದ್ದರೆ ಕೋವಿಡ್ ಮೂರನೆ ಅಲೆ ಬೇಗ ಬರಲು ಆಹ್ವಾನ ಮಾಡಿದಂತೆ ಆಗುತ್ತದೆ ಎಂದು ಹೇಳಿದರು. ಕೋವಿಡ್ ನಿಯಂತ್ರಣದ ವಿಚಾರದಲ್ಲಿ ಸರ್ಕಾರದಷ್ಟೇ ಸಾಮಾಜಿಕ ಜವಾಬ್ದರಿ ಪ್ರತಿಯೊಬ್ಬ ಪ್ರಜೆಗೂ ಇರಬೇಕು. ಮಕ್ಕಳಿಗೆ ಲಸಿಕೆ ನೀಡದ ಕಾರಣ ಸೋಂಕು ಹೆಚ್ಚು ಹರಡಬಹುದೆಂಬ ಅಭಿಪ್ರಾಯವಿದೆ. ಈಗಾಗಲೇ ಶೇ.5ರಿಂದ 6ರಷ್ಟು ಮಕ್ಕಳಿಗೆ ಕೋವಿಡ್ ಬಂದು ಹೋಗಿದೆ. ಮುಂಬೈನಲ್ಲಿ ಈ ಬಗ್ಗೆ ಅಧ್ಯಯನವೂ ನಡೆದಿದ್ದು, ಎರಡರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಬಂದಿದೆ.

ಇಂಗ್ಲೆಂಡ್, ಸ್ಪೇನ್, ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಕೋವಿಡ್ ಎರಡನೆ ಅಲೆ ಬಂದ ಮೂರ್ನಾಲ್ಕು ತಿಂಗಳ ಅಂತರದಲ್ಲಿ ಮೂರನೇ ಅಲೆ ಬಂದಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಆಗಬಹುದೆಂಬ ಅಂದಾಜಿದೆ. ದೆಹಲಿ, ಕೇರಳ, ಮಹಾರಾಷ್ಟ್ರದಲ್ಲಿ ಸೋಂಕು ಮೊದಲು ಕಂಡು ಬರುತ್ತದೆ. ಕೋವಿಡ್ ಮೊದಲ ಮತ್ತು ಎರಡನೆ ಅಲೆಯ ಸೋಂಕುಗಳು ಈ ರಾಜ್ಯಗಳಲ್ಲೇ ಮೊದಲು ಕಂಡುಬಂದವು. ಈ ರಾಜ್ಯಗಳಲ್ಲಿ ಸೋಂಕು ಶುರುವಾದ ಎರಡು ತಿಂಗಳ ಅಂತರದಲ್ಲಿ ನಮ್ಮ ರಾಜ್ಯದಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಡಾ.ಸಿ.ಎನ್.ಮಂಜುನಾಥ್ ಹೇಳಿದರು.

ಮದುವೆಗಳಿಗೂ 40ರಿಂದ 60 ಮಂದಿಗೆ ಮಾತ್ರ ಸೀಮಿತಗೊಳಿಸಬೇಕು. ಮಾಸ್ಕ್ ಧರಿಸುವುದು, ವ್ಯಕ್ತಿಗತ ಅಂತರ ಕಾಪಾಡುವುದು ನಮ್ಮ ದಿನಚರಿಯಾಗ ಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ಮುಂದೆ ನಾಲ್ಕನೇ ಅಲೆ ಬರುತ್ತೋ ಇಲ್ಲವೋ ಗೊತ್ತಿಲ್ಲ ಎಂದರು.

ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಯಾವುದೇ ವದಂತಿಗಳಿಗೆ ಕಿವಿಗೊಡದೆ ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು. ಈಗ ನೀಡುತ್ತಿರುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಸುರಕ್ಷಿತವಾಗಿವೆ.

ಲಸಿಕೆ ಪಡೆದಾಗ ಸಣ್ಣ ಪ್ರಮಾಣದ ಜ್ವರ, ನೋವು ಕಾಣಿಸಿಕೊಳ್ಳುವುದು ಅಡ್ಡಪರಿಣಾಮವಲ್ಲ. ಲಸಿಕೆ ಕಾರ್ಯನಿರ್ವಹಿಸುತ್ತಿರುವುದರ ಪರಿಣಾಮ ಎಂದ ಅವರು, ಇದುವರೆಗೆ ದೇಶದಲ್ಲಿ 25 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಹೀಗಾಗಿ ಲಸಿಕೆ ವಿಚಾರದಲ್ಲಿ ಯಾವುದೇ ರೀತಿಯ ವದಂತಿಗಳಿಗೆ ಕಿವಿಕೊಡದೆ ಸಕಾಲದಲ್ಲಿ ಲಸಿಕೆ ಪಡೆಯುವುದರಿಂದ ಕೋವಿಡ್‍ನಿಂದ ರಕ್ಷಣೆ ಪಡೆಯಬಹುದಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!