Thursday, 19th September 2024

DK Suresh: ಮುನಿರತ್ನ ಮೋದಿಯವರ ತಾಯಿಯನ್ನು ಅವಹೇಳನ ಮಾಡಿದ್ದನ್ನು ಬಿಜೆಪಿ ಸಹಿಸಬಹುದು, ನಾವು ಸಹಿಸಲ್ಲ: ಡಿ.ಕೆ. ಸುರೇಶ್!

DK Suresh

ಬೆಂಗಳೂರು: ಒಕ್ಕಲಿಗರು ಯಾರ ಋಣದಲ್ಲಿಲ್ಲ. ನಮ್ಮ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿದರೆ ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ. ಮುನಿರತ್ನ ಮೋದಿಯವರ ತಾಯಿ ಬಗ್ಗೆ ಮಾತನಾಡಿದ್ದನ್ನು ಬಿಜೆಪಿಯವರು (BJP) ಸಹಿಸಿಕೊಳ್ಳಬಹುದು, ಆದರೆ ನಮ್ಮ ಸಹೋದರಿಯರು ಹಾಗೂ ಹೆಣ್ಣು ಕುಲಕ್ಕೆ ಆದ ಅಪಮಾನವನ್ನು ಸಹಿಸುವುದಿಲ್ಲ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ (DK Suresh) ವಾಗ್ದಾಳಿ ನಡೆಸಿದರು.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಗುರುವಾರ ಮಾತನಾಡಿದರು, ಮುನಿರತ್ನ ಅವರ ಆಡಿಯೋ ಪ್ರಕರಣದಲ್ಲಿ ಬಿಜೆಪಿ ನಾಯಕರ ಸಮರ್ಥನೆ ಹಾಗೂ ಒಕ್ಕಲಿಗ ನಾಯಕರು ಡಿಸಿಎಂ ಭೇಟಿ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆ ಸಭೆಗೆ ನಾನು ಹೋಗುತ್ತೇನೆ. ನಮ್ಮ ಸಮಾಜದ ಹಿತದೃಷ್ಟಿಗೆ ಹಾಗೂ ಅವರ ಹೇಳಿಕೆ ವಿರುದ್ಧ ಮುಂದಿನ ದಿನಗಳಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಎಂದು ಚರ್ಚೆ ಮಾಡುತ್ತೇವೆ. ಈ ವಿಚಾರ ಇಲ್ಲಿಗೆ ಬಿಟ್ಟರೆ ನಾಳೆ ಮತ್ತೊಬ್ಬರು ಮಾತನಾಡುತ್ತಾರೆ.

ಈ ಸುದ್ದಿಯನ್ನೂ ಓದಿ | Munirathna Case : ಶಾಸಕ ಮುನಿರತ್ನಗೆ ಜಾಮೀನು, ಆದರೂ ಮತ್ತೆ ಜೈಲು ಸೇರುವ ಸಾಧ್ಯತೆ

ಮೋದಿ ತಾಯಿ ಬಗ್ಗೆ ಮುನಿರತ್ನ ಮಾತನಾಡಿದಾಗ ಅದನ್ನು ಸಹಿಸಿಕೊಳ್ಳುವ ಶಕ್ತಿ ಬಿಜೆಪಿಯವರಿಗೆ ಇರಬಹುದು. ಆದರೆ ನಾವು ಸಹಿಸಲ್ಲ. ನಾವು ಪ್ರಧಾನಿ ಮೋದಿ ಅವರ ಬಗ್ಗೆ ಟೀಕೆ, ಟಿಪ್ಪಣಿ ಮಾಡಿದರೂ ಅವರಿಗೆ ಅವರ ಸ್ಥಾನಕ್ಕೆ ನೀಡಬೇಕಾದ ಗೌರವ ನೀಡುತ್ತೇವೆ. ಅವರ ತಾಯಿಯನ್ನೂ ಗೌರವಿಸುತ್ತೇವೆ ಎಂದು ಹೇಳಿದರು.

ನನ್ನ ಜೀವನದಲ್ಲಿ ಎಲ್ಲಾ ಜಾತಿ, ಧರ್ಮದ ಜನರ ಜತೆ ಒಡನಾಟ ಇಟ್ಟುಕೊಂಡು ಬಂದಿದ್ದೇನೆ. ಇಂತಹ ಪದಗಳನ್ನು ನಾನು ಕೇಳಿಯೇ ಇಲ್ಲ. ಅದನ್ನು ನೀವು ಸಮರ್ಥಿಸಿಕೊಂಡರೆ ಇದಕ್ಕಿಂತ ದೌರ್ಭಾಗ್ಯ ಇನ್ನೇನಿದೆ. ಯಾವ ಕಾರಣಕ್ಕೆ ಇದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಅವರಿಗೆ ನಾಚಿಕೆಯಾಗಬೇಕು. ಒಕ್ಕಲಿಗ ಸಮಾಜ ಇರಲಿ, ಇಡೀ ಹೆಣ್ಣು ಕುಲಕ್ಕೆ ಅಪಮಾನ ಮಾಡಲಾಗಿದೆ ಎಂದು ಕಿಡಿಕಾರಿದರು.

ಈ ಸುದ್ದಿಯನ್ನೂ ಓದಿ | DK Shivakumar: ಒಂದು ರಾಷ್ಟ್ರ, ಒಂದು ಚುನಾವಣೆ ಬಿಜೆಪಿ ರಾಜಕೀಯ ಲಾಭದ ನಿರ್ಧಾರ; ಶಿವಕುಮಾರ್ ಆರೋಪ

ಒಕ್ಕಲಿಗ ಸಮಾಜ ಎಲ್ಲವನ್ನು ಗಮನಿಸುತ್ತಿದೆ

ಮುನಿರತ್ನ ಅವರ ವಿರುದ್ಧ ರಾಜಕೀಯ ದ್ವೇಷ ಮಾಡಲಾಗುತ್ತಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದು ಮುನಿರತ್ನ ಅವರ ಧ್ವನಿ ಎಂದು ಅವರಿಗೂ ಗೊತ್ತು. ಕೇವಲ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ರೀತಿ ಅವರು ಮಾತನಾಡುತ್ತಾರೆ. ಅಶೋಕ್ ಅವರ ಬಗ್ಗೆ ಯಾವ ರೀತಿ ಪದ ಬಳಕೆ ಮಾಡಿದ್ದಾರೆ ಎಂದು ಅವರ ಸ್ನೇಹಿತರನ್ನು ಕೇಳಿದರೆ ಹೇಳುತ್ತಾರೆ. ತಮ್ಮ ಪಕ್ಷದಲ್ಲಿದ್ದಾರೆ ಎಂದು ಅವರು ಈ ವಿಚಾರಗಳನ್ನು ಮುಚ್ಚಿಕೊಳ್ಳುತ್ತಿರಬಹುದು. ಒಕ್ಕಲಿಗ ಸಮಾಜ ಇದೆಲ್ಲವನ್ನು ಗಮನಿಸುತ್ತಿದೆ. ಇಲ್ಲಿ ಯಾರೂ ಕೂಡ ಅವರಿಗೆ ಪುಗಸಟ್ಟೆಯಾಗಿಲ್ಲ. ಅವರ ಋಣದಲ್ಲಿ ಒಕ್ಕಲಿಗರಿಲ್ಲ. ಒಕ್ಕಲಿಗರ ಋಣದಲ್ಲಿ ಅವರಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರವೃತ್ತಿ

ಬಿಜೆಪಿ ನಾಯಕರಿಗೆ ಈ ವಿಚಾರದಲ್ಲೂ ಪಕ್ಷವೇ ಮುಖ್ಯವಾಯಿತಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ತಮ್ಮ ಹೇಳಿಕೆಗಳಿಗೆ ಮುಂದೊಂದು ದಿನ ಪಶ್ಚಾತಾಪ ಪಡುತ್ತಾರೆ. ಬಿಜೆಪಿಯವರು ಮಾಡುವುದೆಲ್ಲಾ ಮಾಡಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾರೆ. ಕಳೆದ ಐದಾರು ವರ್ಷಗಳಲ್ಲಿ ಯಾವೆಲ್ಲಾ ಪ್ರಕರಣಗಳಾಗಿವೆ ಎಂದು ಪಟ್ಟಿ ಮಾಡುತ್ತಾ ಬನ್ನಿ. ಬೆಂಗಳೂರು, ಬೆಳಗಾವಿ, ಶಿವಮೊಗ್ಗ ಜಿಲ್ಲೆ ನಾಯಕರು ಸೇರಿದಂತೆ ಎಲ್ಲರ ವಿಚಾರ ಪಟ್ಟಿ ಮಾಡಿ. ಹಾಸನ ವಿಚಾರವಾಗಲಿ. ಇದರ ಹಿನ್ನೆಲೆ ಯಾರು ಎಂದು ನೋಡಿ. ಅವರು ಮಾಡಿರುವ ಕೃತ್ಯಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಾ ಬಂದಿದ್ದಾರೆ. ಇದು ಅವರ ಪ್ರವೃತ್ತಿ ಎಂದು ಆರೋಪಿಸಿದರು.

ಈ ಸುದ್ದಿಯನ್ನೂ ಓದಿ | Water Supply Cut: ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ಸೆ.21ರಂದು ಕಾವೇರಿ ನೀರು ಪೂರೈಕೆಯಾಗದು!

ನಾನು ಸದಾ ಒಳ್ಳೆಯದು ಬಯಸುತ್ತೇನೆ

ನಾನು ಸದಾ ಒಳ್ಳೆಯದು ಬಯಸುತ್ತೇನೆ. ಯಾರಿಗೂ ಕೆಟ್ಟದನ್ನು ಬಯಸುವುದಿಲ್ಲ. ಹಾಗೆಯೇ ಎಂತಹುದೇ ಸಂದರ್ಭ ಬಂದರೂ ಯಾರಿಗೂ ಹೆದರುವ ಪರಿಸ್ಥಿತಿಯಲ್ಲಿ ನಾವಿಲ್ಲ. ಸಮಾಜಕ್ಕೆ ನಾವು ಯಾವ ರೀತಿಯ ಸಂದೇಶ ನೀಡುತ್ತಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಇಲ್ಲಿನ ಒಳಮರ್ಮಗಳು ನನಗೆ ಅರ್ಥವಾಗುತ್ತಿಲ್ಲ. ನಾನು ಆ ವ್ಯಕ್ತಿಗೆ ಯಾವತ್ತೂ ಕೆಟ್ಟದ್ದನ್ನು ಬಯಸಿಲ್ಲ. ಒಳ್ಳೆಯ ದಾರಿಯಲ್ಲಿ ಕೆಲಸ ಮಾಡಲು ಪ್ರೋತ್ಸಾಹ ನೀಡಿದ್ದೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್‌ ತಿಳಿಸಿದರು.