Saturday, 27th July 2024

ರಾಜಭವನದಲ್ಲಿ ಗುಜರಾತಿಗಳ ದರ್ಬಾರು

ಆಯಕಟ್ಟಿನ ಹುದ್ದೆಗಳಲ್ಲಿ ಗುಜರಾತ್ ಮೂಲದವರಿಗೆ ಆದ್ಯತೆ

ರಾಜ್ಯಪಾಲರಾಗಿ ಏಳು ವರ್ಷ ಪೂರೈಸಿರುವ ವಿ.ಆರ್.ವಾಲಾ

ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು

ಸಾಂವಿಧಾನಿಕ ಕೇಂದ್ರ ಸ್ಥಾನವಾಗಿರುವ ಕರ್ನಾಟಕದ ರಾಜಭವನದಲ್ಲಿ ಕಳೆದ ಏಳು ವರ್ಷಗಳಿಂದ ಗುಜರಾತಿಗಳ ದರ್ಬಾರು ನಡೆಯುತ್ತಿದ್ದು, ರಾಜ್ಯದ ಜನರಿಗೆ ರಾಜ್ಯಪಾಲರಾಗಲಿ, ಅಲ್ಲಿನ ಅಧಿಕಾರಿಗಳಾಗಲಿ ಸಿಗುತ್ತಿಲ್ಲ. ರಾಜ್ಯಪಾಲರಾಗಿ ವಿ.ಆರ್.
ವಾಲಾ ಅವರು ಬಂದಾಗಿನಿಂದ ರಾಜಭವನದಲ್ಲಿ ಕನ್ನಡಿಗರಿಗಿಂತ ಹೆಚ್ಚಾಗಿ ಗುಜರಾತ್ ಮೂಲದವರೇ ಇದ್ದಾರೆ ಎನ್ನುವ
ಆರೋಪ ಕೇಳಿಬಂದಿದೆ.

೨೦೧೪ರಲ್ಲಿ ರಾಜ್ಯ ಪಾಲರಾಗಿ ಆಗಮಿಸಿರುವ ವಿ.ಆರ್.ವಾಲಾ ಅವರ ಅವಧಿ 2019 ಸೆಪ್ಟೆಂಬರ್‌ನಲ್ಲಿಯೇ ಮುಗಿದಿದೆ. ಇದೀಗ
ಅವರನ್ನು ಎರಡನೇ ಅವಧಿಗೆ ಕೇಂದ್ರ ಸರಕಾರ ವಿಸ್ತರಿಸಿಯೂ ಇಲ್ಲ. ಬೇರೆಯವರನ್ನು ಆ ಸ್ಥಾನಕ್ಕೆ ನೇಮಿಸಿಯೂ ಇಲ್ಲ. ಆದ್ದ ರಿಂದ ಅಧಿಕೃತ ಆದೇಶವೇ ಇಲ್ಲದೇ ಅವಧಿ ಮುಗಿದ ಎರಡು ವರ್ಷಗಳ ಬಳಿಕವೂ ವಾಲಾ ಅವರು ರಾಜ್ಯಪಾಲರಾಗಿ ಮುಂದು ವರಿದಿದ್ದಾರೆ.

ಈ ಅವಧಿಯಲ್ಲಿ ರಾಜಭವನದ ಆಯಕಟ್ಟಿನ ಸ್ಥಳದಲ್ಲಿ ಗುಜರಾತ್ ಮೂಲದ ಅಧಿಕಾರಿಗಳನ್ನೇ ನೇಮಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಹಿಂದೆ ಅನಾರೋಗ್ಯಕ್ಕೆ ಒಳಗಾದ ಕಾರಣ, ಅನಾರೋಗ್ಯದಿಂದ ಚೇತರಿಸಿಕೊಳ್ಳುವ ತನಕ ಅವರನ್ನು
ಮುಂದುವರಿಸಲು ನಿರ್ಧರಿಸಲಾಗಿತ್ತು. ಆದರೆ ಚೇತರಿಸಿಕೊಂಡು ವರ್ಷಗಳೇ ಕಳೆಯುತ್ತಾ ಬಂದರೂ ಅವರನ್ನು ಬದಲಾಯಿ ಸಿದೇ ಅಥವಾ ಅವರನ್ನೇ ಮುಂದುವರಿಸಲಾಗಿದೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ನೀಡದಿರುವುದು ಇದೀಗ ಚರ್ಚೆಗೆ ಗ್ರಾಸ ವಾಗಿದೆ.

ಸಾರ್ವಜನಿಕರೊಂದಿಗೆ ಸಂಪರ್ಕವೇ ಇಲ್ಲ: ಕರ್ನಾಟಕದಲ್ಲಿ ಈ ಹಿಂದೆ ರಾಜ್ಯಪಾಲರಾಗಿರುವ ಅನೇಕರು ಸಾರ್ವಜನಿಕ ರೊಂದಿಗೆ ಬೆರೆಯುತ್ತಿದ್ದರು. ರಮಾದೇವಿ ಅವರ ಕಾಲದಲ್ಲಿ ರಾಜಭವನಕ್ಕೆ ಮುಕ್ತ ಅವಕಾಶವಿತ್ತು. ಆದರೆ ವಾಲಾ ಅವರ ಸಮಯದಲ್ಲಿ ರಾಜಭವನಕ್ಕೆ ಸಾರ್ವಜನಿಕರಲ್ಲ, ಸಚಿವರು ಹೋಗುವುದಕ್ಕೂ ಸಮಸ್ಯೆ ಯಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಇದರೊಂದಿಗೆ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮಗಳನ್ನು ಹೊರತುಪಡಿಸಿದರೆ, ರಾಜ್ಯಪಾಲರು
ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದೇ ಇಲ್ಲ. ಈ ಹಿಂದಿನ ರಾಜ್ಯಪಾಲರುಗಳು ಜನರೊಂದಿಗೆ ಬೆರೆಯುತ್ತಿದ್ದರು. ಆದರೆ ವಾಲಾ ಅವರು ಬಂದ ಬಳಿಕ ರಾಜಭವನಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

ಅಭೇದ್ಯ ಕೋಟೆಯಾದ ರಾಜಭವನ: ಸರಕಾರಿ ಕಟ್ಟಡವಾಗಿರುವ ರಾಜಭವನಕ್ಕೆ ಈ ಹಿಂದಿನ ರಾಜ್ಯಪಾಲರುಗಳು
ಸಾರ್ವಜನಿಕರಿಗೆ ಅವಕಾಶ ನೀಡುತ್ತಿದ್ದರು. ಆದರೆ ಇವರು ಅಽಕಾರಕ್ಕೆ ಬಂದ ಬಳಿಕ, ಹಂತಹಂತವಾಗಿ ಪ್ರವೇಶವನ್ನು
ನಿರ್ಬಂಧಿಸಿದ್ದಾರೆ. ಸಾರ್ವಜನಿಕರ ಬಳಿಕ ಮಾಧ್ಯಮದವರಿಗೂ ಅವಕಾಶ ನಿರಾಕರಿಸಿದ್ದಾರೆ. ಈ ಹಿಂದೆ ಹಂಸರಾಜ್ ಭಾರಧ್ವಾಜ್ ಅವರ ಅಧಿಕಾರಾವಧಿಯಲ್ಲಿ, ನಿತ್ಯ ಪತ್ರಕರ್ತರೊಂದಿಗೆ ಮಾತನಾಡುವ ವ್ಯವಸ್ಥೆಯಿತ್ತು. ಇದಕ್ಕೂ ಮೊದಲು 2002ರಲ್ಲಿ ಅಧಿಕಾರದಲ್ಲಿದ್ದ ಟಿ.ಎನ್.ಚರ್ತುವೇದಿ ಅವರು ಸಾಹಿತ್ಯ, ಸಂಸ್ಕೃತಿ ವಿಷಯಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದರು. ಆದರೆ ವಾಲ ಅವರ ಕಾಲದಲ್ಲಿ ಈ ಎಲ್ಲಕ್ಕೂ ಬ್ರೇಕ್ ಹಾಕಿದ್ದು, ರಾಜಭವನ ಒಂದು ಅಭೇದ್ಯ ಕೋಟೆಯಾಗಿದೆ.

ಎರಡನೇ ಬಾರಿಯ ನೇಮಕಕ್ಕೆ ಇರುವ ನಿಯಮವೇನು?
ರಾಜ್ಯಪಾಲರನ್ನು ಕೇಂದ್ರ ಗೃಹ ಇಲಾಖೆಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ಆಯ್ಕೆ ಮಾಡುತ್ತಾರೆ. ಸಂವಿಧಾನದಲ್ಲಿ ರಾಜ್ಯಪಾಲರ ಅವಧಿ ಐದು ವರ್ಷ ಎಂದು ಸ್ಪಷ್ಟವಾಗಿದ್ದರೂ, ಆದೇಶ ಹೊರಡಿಸುವಾಗ ‘ಮುಂದಿನ ಆದೇಶದವರೆಗೆ’ ಎಂದು
ನಮೂದಿಸಿರುತ್ತಾರೆ. ಆದ್ದರಿಂದ ಇನ್ನೊಬ್ಬರನ್ನು ರಾಜ್ಯಪಾಲರನ್ನಾಗಿ ಘೋಷಿಸುವ ತನಕ ಇವರೇ ಇರುತ್ತಾರೆ. ಘೋಷಣೆಯಾದ
ಬಳಿಕ 15 ದಿನಗಳ ಕಾಲ ಅವಕಾಶವಿರುತ್ತದೆ. ಆದ್ದರಿಂದ ವಾಲಾ ಅವರಿಗೆ ಎರಡನೇ ಬಾರಿಗೆ ಮುಂದುವರಿಸಿರುವ ಬಗ್ಗೆ ಯಾವುದೇ ಅಧಿಕೃತ ಆದೇಶ ಇಲ್ಲ.

ಆರೋಪಗಳೇನು?
*ರಾಜ್ಯಪಾಲರು ಜನರೊಂದಿಗೆ ಬೆರೆಯುವುದಿಲ್ಲ
*ಆಯಕಟ್ಟಿನ ಜಾಗದಲ್ಲಿ ಗುಜರಾತಿಗರದ್ದೇ ದರ್ಬಾರು
*ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ. ಭೇಟಿಗೆ ಅವಕಾಶ ನೀಡಿದರೂ ಕಾರಿಡಾರ್ ನೋಡಲು ಮಾತ್ರ.
*ಕರ್ನಾಟಕದ ರಾಜಭವನದಲ್ಲಿ ಕನ್ನಡಿಗರ ನಿರ್ಲಕ್ಷ್ಯ

Leave a Reply

Your email address will not be published. Required fields are marked *

error: Content is protected !!