Thursday, 18th July 2024

ಸಚಿವ ಸಂಪುಟದಿಂದ ಮೊದಲ ವಿಕೆಟ್ ಪತನ ?

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಿಂದ ಮೊದಲ ವಿಕೆಟ್ ಪತನವಾಗುವ ಕುರಿತು ವದಂತಿ ಬುಧವಾರ ದಟ್ಟವಾಗಿ ಕೇಳಿಬರುತ್ತಿದೆ.

ಖಾತೆ ಹಂಚಿಕೆಯಾದ ಬಳಿಕ ತಮಗೆ ಸಿಕ್ಕಿದ ಖಾತೆ ಬಗ್ಗೆ ಖ್ಯಾತೆ ತೆಗೆದಿದ್ದ ಆನಂದ್ ಸಿಂಗ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು ಮುಖ್ಯಮಂತ್ರಿಗಳು ಮತ್ತು ಮಾಜಿ ಮುಖ್ಯಂತ್ರಿ ಯಡಿಯೂರಪ್ಪ ನವರಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ ಎನ್ನಲಾಗಿದೆ. ಮಂಗಳವಾರ ಶಾಸಕರ ಭವನದಿಂದ ಅವರು ತಮ್ಮ ಕಾರ್ಯಾಲಯ ತೆರವುಗೊಳಿಸಿದ್ದಾರೆ, ಅಲ್ಲಿ ಅವರ ನಾಮಫಲಕವು ಮಾಯವಾಗಿದೆ.

ಆನಂದ್ ಸಿಂಗ್ ಅವರು ಆರಂಭದಲ್ಲಿ ಇಂಧನ ಅಥವಾ ಲೋಕೋಪಯೋಗಿ ಇಲಾಖೆ ಸಚಿವ ಖಾತೆ ಕೇಳಿದ್ದರು, ಆದರೆ ಅವರಿಗೆ ಸಿಕ್ಕಿದ್ದು ಪ್ರವಾಸೋದ್ಯಮ, ಪರಿಸರ ಮತ್ತು ಅರಣ್ಯ ಖಾತೆ. ತಮಗೆ ಸಿಕ್ಕಿದ ಖಾತೆ ಬಗ್ಗೆ ಬಹಿರಂಗವಾಗಿಯೇ ವಾರದ ಹಿಂದೆ ಆನಂದ್ ಸಿಂಗ್ ಅಸಮಾಧಾನ ತೋಡಿಕೊಂಡಿದ್ದರು.

ಇದೀಗ ಆನಂದ್ ಸಿಂಗ್ ಅವರು ಹೊಸಪೇಟೆಯ ವೇಣುಗೋಪಾಲಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಕುಟುಂಬಸ್ಥರೊಂದಿಗೆ ಭಾಗಿಯಾಗಿದ್ದು ಇನ್ನು ಕೆಲವೇ ಹೊತ್ತಿನಲ್ಲಿ ಬೆಂಗಳೂರಿಗೆ ಆಗಮಿಸ ಲಿದ್ದಾರೆ.

ಸಚಿವ ಆನಂದ್ ಸಿಂಗ್ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿಯವರ ತೀರ್ಮಾನವೇ ಅಂತಿಮ, ಎಲ್ಲವನ್ನೂ ಅವರಿಗೆ ಬಿಟ್ಟಿದ್ದೇನೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!