Friday, 13th December 2024

ಬಾಂಬ್ ಬೆದರಿಕೆ ಸಂದೇಶ ಪ್ರಕರಣ: ಎಂದಿನಂತೆ ತರಗತಿಗಳು ಆರಂಭ

ಬೆಂಗಳೂರು: ಶುಕ್ರವಾರ ಬಾಂಬ್ ಬೆದರಿಕೆಯ ಇ-ಮೇಲ್​ ಬಂದಿದ್ದ ಶಾಲೆಗಳು ಶನಿವಾರ ತೆರೆದಿದ್ದು, ಎಂದಿನಂತೆ ತರಗತಿಗಳು ಆರಂಭವಾಗಿವೆ.

ಕಳೆದ ಶುಕ್ರವಾರ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಸೇರಿ 60 ಶಾಲೆಗಳಿಗೆ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಇ- ಮೇಲ್​ ಬಂದಿತ್ತು. ಹಾಗಾಗಿ ಶಾಲೆಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬೆಳಗ್ಗೆ ಎಂದಿನಂತೆ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಂದರು.

ಪೂರ್ಣಪ್ರಜ್ಞ ಶಾಲೆಯ ಶಿಕ್ಷಕಿ ಮಾತನಾಡಿ, “ಬಾಂಬ್ ಬೆದರಿಕೆ ಸಂದೇಶ ಬಂದಿದ್ದರಿಂದ ಸ್ವಲ್ಪ ಆತಂಕದ ವಾತಾವರಣವಿತ್ತು. ಜಾಗೃತರಾಗಿ ಎಚ್ಚರಿಕೆ ವಹಿಸಿ ಮಕ್ಕಳನ್ನು ಪೋಷಕರ ಜೊತೆ ಕಳುಹಿಸಿಕೊಟ್ಟಿದ್ದೆವು. ಇವತ್ತು ಯಾವುದೇ ತೊದರೆಯಾಗುವುದಿಲ್ಲ ಎಂದು ಶಾಲೆಯ ವತಿಯಿಂದ ಆಶ್ವಾಸನೆ ನೀಡಲಾಗಿತ್ತು. ಆದ್ದರಿಂದ ಮಕ್ಕಳು ನಿರಾತಂಕವಾಗಿ ಬಂದಿದ್ದಾರೆ” ಎಂದು ಹೇಳಿದರು.

“ನಿನ್ನೆ ಮತ್ತು ಇವತ್ತು ಪರಿಸ್ಥಿತಿ ನಿಭಾಯಿಸುವುದರಲ್ಲಿ ಪೋಷಕರ ಸಹಕಾರ ಬಹಳಷ್ಟಿದೆ. ಆದರೆ ಈ ರೀತಿಯ ಬೆದರಿಕೆ ಸಂದೇಶ ಆತಂಕ ತರುವ ವಿಚಾರವಾಗಿದೆ. ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ದುಃಖಕರ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಸಹ ಈ ತರಹದ ಸೈಬರ್ ಕ್ರೈಮ್ ಪ್ರಕರಣವನ್ನು ಹಗುರವಾಗಿ ತೆಗೆದುಕೊಳ್ಳಬಾರದು ಎಂದು ಹೇಳಿದರು.

“ಇವತ್ತು ಶಾಲೆಗೆ ಬಂದು ಎಂದಿನಂತೆ ತರಗತಿಗಳಿಗೆ ಹಾಜರಾಗಿದ್ದೇವೆ. ಬಾಂಬ್ ಆತಂಕ ಎದುರಾಗಿದ್ದರಿಂದ ಎಲ್ಲರನ್ನೂ ಆಟದ ಮೈದಾನಕ್ಕೆ ಕರೆತರಲಾಗಿತ್ತು. ನಂತರ ಎಲ್ಲ ಪೋಷಕರು ಬಂದು ಅವರವರ ಮಕ್ಕಳನ್ನು ಕರೆದುಕೊಂಡು ಮನೆಗೆ ತೆರಳಿದರು. ಮೊದಲು ನಮಗೆಲ್ಲ ವಿಚಾರ ತಿಳಿದಾಗ ಇದು ಸುಳ್ಳು ಸುದ್ದಿ ಎನ್ನಿಸಿತ್ತು. ಆದರೆ ಮನೆಗೆ ಹೋಗಿ ಸುದ್ದಿಗಳನ್ನು ನೋಡಿದ ನಂತರ ನಿಜ ವಿಚಾರ ಗೊತ್ತಾಯಿತು” ಎಂದು ಪೂರ್ಣಪಜ್ಞ ಶಾಲಾ ವಿದ್ಯಾರ್ಥಿಗಳು ಹೇಳಿದರು.

ಪೋಷಕರಾದ ಪುಟ್ಟಲಾಬಾಯಿ ಮಾತನಾಡಿ, “ಆರ್.ಟಿ ನಗರದಲ್ಲಿ ನಮ್ಮ ನಿವಾಸವಿದೆ. ನಮ್ಮ ಮೊಮ್ಮಗಳು ಪೂರ್ಣಪ್ರಜ್ಞಾ ನರ್ಸರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಘಟನೆ ಭಯ ಸೃಷ್ಟಿಸಿತ್ತು. ಶಾಲೆಯಿಂದ ಸಂದೇಶ ಬಂದ ತಕ್ಷಣ ಮೊಮ್ಮಗಳನ್ನು ಮನೆಗೆ ಕರೆದುಕೊಂಡು ಬಂದೆವು. ಈ ರೀತಿ ಮುಂದೆ ಆಗದಂತೆ ಸರ್ಕಾರ ಕ್ರಮಗಳನ್ನು ತಗೆದುಕೊಳ್ಳಬೇಕು” ಎಂದು ಹೇಳಿದರು.