Saturday, 27th July 2024

ವಿವಾಹವಾಗುವ ಉದ್ದೇಶದಿಂದ ಮತಾಂತರ ಹುನ್ನಾರ ಸಹಿಸಲಾಗದು: ಸಿಎಂ ಯಡಿಯೂರಪ್ಪ ಎಚ್ಚರಿಕೆ

ಮಂಗಳೂರು: ಕೇವಲ ವಿವಾಹವಾಗುವ ಉದ್ದೇಶದಿಂದ ಮತಾಂತರ ಹುನ್ನಾರವನ್ನು ರಾಜ್ಯದಲ್ಲಿ ಸಹಿಸಲಾಗದು, ಅಂತಹ ಸಂಚನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿ ಗುರುವಾರ ರಾಜ್ಯ ಕಾರ್ಯಕಾರಿಣಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಬೇರೆ ರಾಜ್ಯದಲ್ಲಿ ಏನು ಮಾಡುತ್ತಾರೊ ಗೊತ್ತಿಲ್ಲ, ಆದರೆ ನಮ್ಮಲ್ಲಿ ಸಣ್ಣವಯಸ್ಸಿನ ಹೆಣ್ಣು ಮಕ್ಕಳನ್ನು ಹಣದ ಆಮಿಷವೊಡ್ಡಿ, ಪ್ರೇಮದ ನಾಟಕವಾಡಿ ಮತಾಂತರ ಗೊಳಿಸಿ ಮದುವೆಯಾಗುವ ಪ್ರಕರಣ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ.

ಕರೊನಾದಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು, ಆದರೆ ಈಗ ಸುಧಾರಣೆ ಆಗುತ್ತಿದೆ, ಶಾಸಕರ 50 ಲಕ್ಷ ರೂ ಅನುದಾನ ಬಿಡುಗಡೆ ಮಾಡಲಾಗಿದೆ, ಮಂಗಳೂರು ಮಹಾನಗರಪಾಲಿಕೆ ಸೇರಿದಂತೆ 10 ಮಹಾನಗರಪಾಲಿಕೆಗಳಿಗೆ 125 ಕೋಟಿ ರೂ. ಬಿಡು ಗಡೆ ಮಾಡಲಾಗುತ್ತದೆ. ಈಗಾಗಲೇ 50 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದರು.

ಸಭೆಯಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಡಿ.ವಿ. ಸದಾನಂದಗೌಡ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಕೆ.ಎಸ್.ಈಶ್ವರಪ್ಪ, ಜಗದೀಶ ಶೆಟ್ಟರ್‌, ಆರ್. ಅಶೋಕ, ಕೋಟ ಶ್ರೀನಿ ವಾಸ ಪೂಜಾರಿ, ರಾಜ್ಯ ಘಟಕದ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಭಾಗವಹಿಸಿದರು.

ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಿದ್ದಾರೆ. ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯ ದರ್ಶಿಗಳು, ಪ್ರಭಾರಿಗಳು ಭಾಗವಹಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!