Tuesday, 23rd April 2024

ನೆಟ್ಟಾರು ಕುಟುಂಬಕ್ಕೆ ನೂತನ ಮನೆ ನಿರ್ಮಾಣ: ಏ.27ರಂದು ಗೃಹ ಪ್ರವೇಶ

ಮಂಗಳೂರು: ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ನಡೆದು ಎಂಟು ತಿಂಗಳ ಒಳಗಾಗಿ ಬಿಜೆಪಿ ವತಿಯಿಂದ ನೆಟ್ಟಾರು ಕುಟುಂಬಕ್ಕೆ ನೂತನ ಮನೆ ನಿರ್ಮಿಸಿಕೊಡಲಾಗಿದೆ. ಈ ಮೂಲಕ ಚುನಾವಣೆ ಹೊತ್ತಲ್ಲಿ ಕರಾವಳಿಯಲ್ಲಿ ಬಿಜೆಪಿ ಮತ್ತೊಂದು ಹೊಸ ಅಸ್ತ್ರ ಪ್ರಯೋಗಿಸಿದೆ.

ಚುನಾವಣೆ ಸಮಯದಲ್ಲೇ ಪ್ರವೀಣ್ ನೆಟ್ಟಾರು ಹೊಸ ಮನೆ ಗೃಹ ಪ್ರವೇಶಕ್ಕೆ ಮುಹೂರ್ತ ನಿಗದಿಯಾಗಿದ್ದು, ಏ.27ರಂದು ಸುಳ್ಯ ತಾಲೂಕಿನ ಬೆಳ್ಳಾರೆಯ ನೆಟ್ಟಾರುನಲ್ಲಿ ಗೃಹ ಪ್ರವೇಶ ನಡೆಯಲಿದೆ. ಚುನಾವಣೆ ಹೊತ್ತಲ್ಲಿ ಪ್ರವೀಣ್ ನೆಟ್ಟಾರು ಮನೆಯ ಗೃಹ ಪ್ರವೇಶ ನಡೆಯುತ್ತಿದ್ದು, ಅಸಮಾಧಾನಿತ ಕಾರ್ಯಕರ್ತರನ್ನು ಸಮಾಧಾನ ಗೊಳಿಸಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.

ರಾಜ್ಯ ಬಿಜೆಪಿ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮನೆ ನಿರ್ಮಾಣವಾಗುತ್ತಿದ್ದು, ಬಹುತೇಕ 90% ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 2022 ನವೆಂಬರ್‌ 2ರಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ರಿಂದ ಪ್ರವೀಣ್‌ ನೆಟ್ಟಾರು ಮನೆಯ ಗುದ್ದಲಿ ಪೂಜೆ ನಡೆದಿತ್ತು.

ಸದ್ಯ ವೇಗವಾಗಿ ಮನೆ ನಿರ್ಮಾಣ ಪೂರ್ತಿಗೊಳ್ಳುತ್ತಿದ್ದು, ಕೇವಲ ನಾಲ್ಕು ತಿಂಗಳಲ್ಲಿ ಕಾಮಗಾರಿ ಮುಗಿದು ಏ‌.27ರಂದು ಗೃಹ ಪ್ರವೇಶವಾಗುತ್ತಿದೆ.

ಪ್ರವೀಣ್ ‌ನೆಟ್ಟಾರು ಕನಸಿನ 60 ಲಕ್ಷ ರೂಪಾಯಿ ವೆಚ್ಚದ ಮನೆ ನಿರ್ಮಾಣ ಕಾರ್ಯ ಪೂರ್ಣವಾಗಿದ್ದು, 2,700 ಚದರ ಅಡಿಯ ಮನೆಯನ್ನು ಮುಗ್ರೋಡಿ ಕನ್ಸ್ಟ್ರಕ್ಷನ್ ಪೂರ್ಣಗೊಳಿಸಿದೆ.

ಪ್ರವೀಣ್ ಕುಟುಂಬಕ್ಕೆ ಸರ್ಕಾರದ ಕಡೆಯಿಂದ 25ಲಕ್ಷ ರೂಪಾಯಿ ಪರಿಹಾರ ನೀಡಲಾಗಿತ್ತು.

error: Content is protected !!