Saturday, 10th June 2023

ಚೆಕ್ ಬೌನ್ಸ್ ಪ್ರಕರಣ: ಪಾಲಿಕೆ ಮಾಜಿ ಸದಸ್ಯನಿಗೆ ಮೂರು ತಿಂಗಳ ಜೈಲು ಶಿಕ್ಷೆ

ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡನಾಗಿದ್ದ ಶ್ರೀಕಾಂತ ತಿರಕಪ್ಪ ಜಮನಾಳಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ಧಾರವಾಡ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.

ಮಂಜುನಾಥ ಗುರುಸಂಗಪ್ಪ ದನ್ನೂರ ಅಂಬವರ ಆರೋಪದ ಮೇರೆಗೆ ಶ್ರೀಕಾಂತ ತಿರಕಪ್ಪ ಜಮನಾಳ ವಿರುದ್ಧ 2018ರಲ್ಲಿ ದೂರು ಸಲ್ಲಿಸಲಾಗಿತ್ತು. ಈ ಹಿಂದೆ ಜಮನಾಳ, ಪಿರ್ಯಾದಿದಾರರಿಂದ ಐದು ಲಕ್ಷ ಹಣ ಪಡೆದುಕೊಂಡು ಮರಳಿ‌ ನೀಡದೆ ಚೆಕ್ ಕೊಟಿದ್ದರು.

ಬಳಿಕ ಚೆಕ್‌ ಅನ್ನು ಬ್ಯಾಂಕ್‌ನಲ್ಲಿ ಹಾಕಿದಾಗ ಚೆಕ್ ಬೌನ್ಸ್‌ ಆಗಿದ್ದು, ಪಿರ್ಯಾದಿದಾರರು ಆರೋಪಿತನ ಮೇಲೆ ನ್ಯಾಯಾಲಯ ದಲ್ಲಿ ದೂರು‌ ದಾಖಲಿಸಿದ್ದರು.

2019ರಲ್ಲಿ ಜಮನಾಳ, ಫಿರ್ಯಾದಿದಾರರಿಗೆ ಐದು ಲಕ್ಷ ಹಣ ಕೊಡುವುದಾಗಿ ನ್ಯಾಯಾಲಯದಲ್ಲಿ ರಾಜಿ ಮಾಡಿಕೊಂಡಿದ್ದರು.

ಆದರೆ, ಇಲ್ಲಿಯವರೆಗೆ ಹಣ ನೀಡದೆ ತಲೆ ಮರೆಸಿಕೊಂಡಿದ್ದ ಆರೋಪಿ ಶ್ರೀಕಾಂತ ಜಮನಾಳ ವಿರುದ್ಧ ನ್ಯಾಯಾಲಯವು ಪತ್ತೆಗಾಗಿ ದಸ್ತಗಿರಿ ವಾರಂಟ್ ಹೊರಡಿಸಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಗಿರೀಶ್‌ ಆರ್.ಬಿ ಅವರು ಆರೋಪಿತನಿಗೆ ಮೂರು ತಿಂಗಳ ಕಾರಾಗೃಹ ವಾಸ ಶಿಕ್ಷೆಯನ್ನು ವಿಧಿಸಿ ಆದೇಶಿಸಿದರು.

error: Content is protected !!