Saturday, 27th July 2024

ವನ್ಯ ಜೀವಿ ಸಪ್ತಾಹ: ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ 

ತುಮಕೂರು: ಅರಣ್ಯ ಇಲಾಖೆ,ಸಾರ್ವಜನಿಕ ಶಿಕ್ಷಣ ಇಲಾಖೆ,ತುಮಕೂರು ವಿಜ್ಞಾನ ಕೇಂದ್ರ ಮತ್ತು ಪರಿಸರಾಸಕ್ತ ಸಂಘ ಸಂಸ್ಥೆ ಗಳ ಸಹಯೋಗದಲ್ಲಿ ವನ್ಯ ಜೀವಿ ಸಪ್ತಾಹದ ಅಂಗವಾಗಿ ಶಾಲಾ ಮಕ್ಕಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಎಂಪ್ರೆಸ್ ಶಾಲೆಯಲ್ಲಿ  ಶನಿವಾರ ಆಯೋಜಿಸಲಾಗಿತ್ತು.
ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ  ಎಚ್.ಅನುಪಮ,  ಚಿತ್ರಬಿಡಿಸುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ನಮ್ಮ ಪರಿಸರದಲ್ಲಿರುವ ಜೀವ ವೈವಿಧ್ಯತೆಯನ್ನು ಜನರಿಗೆ, ಅದರಲ್ಲಿಯೂ ಭವಿಷ್ಯದ ಪ್ರಜೆಗಳಾದ ಮಕ್ಕಳಿಗೆ ತಿಳಿಸುವ ನಿಟ್ಟಿ ನಲ್ಲಿ ಈ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.ನಗರದ ನಲವತ್ತಕ್ಕೂ ಹೆಚ್ಚು ಶಾಲೆಗಳ 500ಕ್ಕೂ ಹೆಚ್ಚು ಮಕ್ಕಳು ಈ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಸ್ಪರ್ಧೆ ಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದರು.
ಭಾರತದಲ್ಲಿ ಬೌಗೋಳಿಕವಾಗಿ ವೈವಿದ್ಯಮಯ ಪರಿಸರ ಮತ್ತು ಜೀವರಾಶಿಗಳನ್ನು ಕಾಣಬಹುದು.ಜನರಿಗೆ ವನ್ಯಜೀವಿಗಳ ಬಗ್ಗೆ ತಿಳುವಳಿಕೆ ನೀಡುವ ಉದ್ದೇಶದಿಂದ ಪ್ರತಿವರ್ಷ ಸೆಪ್ಟಂಬರ್ ತಿಂಗಳಿನಲ್ಲಿ ವನ್ಯಜೀವಿ ಸಪ್ತಾಹ ಆಚರಿಸಲಾಗುತ್ತಿದೆ.ಈ ವರ್ಷ ಸೆಪ್ಟಂಬರ್ 23 ರಿಂದ 28ರವರೆಗೆ ನಮ್ಮ ಜಿಲ್ಲೆಯಲ್ಲಿ ಸಪ್ತಾಹ ಕಾರ್ಯಕ್ರಮವಿದೆ.ಸೆಪ್ಟಂಬರ್ 27ರಂದು ಶಾಲಾ ಶಿಕ್ಷಕರಿಗೆ ವನ್ಯಜೀವಿಗಳು ಮತ್ತು ಪರಿಸರ ಸಂರಕ್ಷಣೆ ಕುರಿತಂತೆ ಕಾರ್ಯಾಗಾರ ಆಯೋಜಿಸಲಾಗಿದೆ.ಅಲ್ಲದೆ ಶಾಲಾ ಕಾಲೇಜು ಗಳಲ್ಲಿ ಇರುವ ಇಕೋ ಕ್ಲಬ್‌ಗಳಿಗೆ ಪರಿಸರ ಸಂರಕ್ಷಣೆ ಕುರಿತಂತೆ ಕಾರ್ಯಕ್ರಮವಿದೆ.ಅಲ್ಲದೆ ವೇದಿಕೆ ಕಾರ್ಯಕ್ರಮ ವನ್ನು ಸಹ ಆಯೋಜಿಸ ಲಾಗುತ್ತಿದೆ ಎಂದು ತಿಳಿಸಿದರು.
ಡಿಡಿಪಿಐ ರಂಗಧಾಮಯ್ಯ ಮಾತನಾಡಿ,ಯಾವುದೇ ಸ್ಪರ್ಧೆಗಳಾಗಲಿ ಭಾಗವಹಿಸುವುದು ಮುಖ್ಯ.ಮಕ್ಕಳಿಗೆ ವನ್ಯ ಜೀವಿಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಒಂದು ಒಳ್ಳೆಯ ಪ್ರಯತ್ನವಾಗಿದೆ.ಅರಣ್ಯ ಇಲಾಖೆಯ ಈ ಕಾರ್ಯಕ್ರಮ ಮಕ್ಕಳಿಗೆ ಜೀವ ವೈದ್ಯತೆ ಯನ್ನು ಅರಿಯಲು ಸಹಕಾರಿಯಾಗಿದೆ ಎಂದರು.
ಚಿತ್ರ ಬಿಡಿಸುವ ಮೂಲಕ ಮಕ್ಕಳಿಗೆ ವನ್ಯಜೀವಿಗಳ ಪರಿಚಯಿಸಿದ ರವೀಂದ್ರ ಕಲಾನೀಕೇತನದ ಡಾ.ಸಿ.ಡಿ.ಹರಸೂರ್, ಮಕ್ಕಳು ಅರಣ್ಯ ಇಲಾಖೆ, ವನ್ಯಜೀವಿ ಸಪ್ತಾಹದ ಅಂಗವಾಗಿ ನೀಡಿರುವ ವನ್ಯಜೀವ ಸಂರಕ್ಷಣೆ-ನಮ್ಮೆಲ್ಲರ ಹೊಣೆ ಎಂಬ ಘೋಷವಾಕ್ಯ ವನ್ನು ಅರ್ಥಮಾಡಿಕೊಂಡು, ಅದಕ್ಕೆ ಅನುಗುಣವಾಗಿ ಚಿತ್ರ ಬಿಡಿಸಬೇಕು.ವಿಷಯದ ಹೊರತಾಗಿ ಎಷ್ಟೇ ಸುಂದರವಾಗಿ ಚಿತ್ರ ಬಿಡಿಸಿದರೂ ಪ್ರಯೋಜನವಿಲ್ಲ. ಹಾಗಾಗಿ ಎಲ್ಲರೂ ವಿಷಯವನ್ನು ಮನನ ಮಾಡಿಕೊಂಡು ಚಿತ್ರ ರಚಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಾದ  ಪವಿತ್ರ,ಕೊರಟಗೆರೆ ಉಪವಿಭಾಗದ ಸುರೇಶ್, ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ರಬ್ಬಾನಿ, ಎಂಪ್ರೆಸ್ ಉಪ ಪ್ರಾಂಶುಪಾಲ ಮನೋಹರ್, ಉಪನ್ಯಾಸಕರಾದ ಉಮೇಶ್, ಇಸ್ಮಾಯಿಲ್, ರಾಮಣ್ಣ, ಅರಣ್ಯ ಇಲಾಖೆಯ ಸಿಬ್ಬಂದಿಗಳು,ವಿವಿಧ ಶಾಲೆಗಳ ಶಿಕ್ಷಕರು, ಮಕ್ಕಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!