Wednesday, 29th May 2024

ಮೂರು ಬಾರಿ ಪುರಸಭಾ ಸದಸ್ಯನಾದರೂ ಇಲ್ಲ ಸೂರು !

ಕಾರ್ಮಿಕನಾಗಿ ಜೀವನ ದೂಡುತ್ತಿರುವ ಸಣ್ಣಯ್ಯ 

ಇಳಿ ವಯಸ್ಸಿನಲ್ಲೂ ಸಾಮಿಲ್‌ನಲ್ಲಿ ಕಾಯಕ

ಮಂಡ್ಯ: ಪ್ರಸ್ತುತ ದಿನಗಳಲ್ಲಿ ಕೆಲವರಿಗೆ ಅಧಿಕಾರ ಸಿಕ್ಕಿದರೆ ಸಾಕು, ವರ್ಷದೊಳಗೆ ಕಾರು ಬಂಗಲೆ, ಕೋಟಿ ಕೋಟಿ ಆಸ್ತಿಯ ಒಡೆಯರಾಗಿ ಬಿಡುತ್ತಾರೆ. ಅಂಥ ಅದೆಷ್ಟೋ ನಿದರ್ಶನಗಳೂ ಸಹ ನಮ್ಮ ಕಣ್ಣ ಮುಂದೆಯೇ ಇವೆ. ಆದರೆ ಇದಕ್ಕೆ ತದ್ವಿರುದ್ಧ ವೆಂಬಂತೆ ಮಂಡ್ಯದ ವ್ಯಕ್ತಿಯೊಬ್ಬರು ಮೂರು ಬಾರಿ ಪುರಸಭಾ ಸದಸ್ಯನಾದರೂ ಸ್ವಂತ ಸೂರು ಮಾಡಿಕೊಂಡಿಲ್ಲ.

ಕೂಲಿ ಕಾಯಕ ಮಾಡಿಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಆಶ್ಚರ್ಯವೆನಿಸಿದರೂ ಇದು ಸತ್ಯ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪುರಸಭೆಗೆ ಮೂರು ಬಾರಿ ಸದಸ್ಯನಾಗಿ ಆಯ್ಕೆಯಾದ ಸಣ್ಣಯ್ಯ ಅವರಿಗೆ ವಾಸಿಸಲು ಸ್ವಂತ ಮನೆಯಿಲ್ಲ. ಇಂದಿಗೂ ಸಾಮಾನ್ಯ ಕೂಲಿ ಕಾರ್ಮಿಕನಂತೆ ಸಾಮಿಲ್‌ವೊಂದರಲ್ಲಿ ಕಾಯಕ ಮಾಡುತ್ತಲೇ ಜೀವನ ದೂಡುತ್ತಿದ್ದಾರೆ.

ಗುಡಿಸಲಿನಲ್ಲಿ ಜೀವನ: ಸಣ್ಣಯ್ಯ ಅವರು ಪಟ್ಟಣದ ಅಂಬೇಡ್ಕರ್ ನಗರದ ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದಾರೆ. ಕೆ.ಆರ್. ಪೇಟೆಯ ಚನ್ನರಾಯಪಟ್ಟಣ- ಮೈಸೂರು ರಸ್ತೆಯಲ್ಲಿರುವ ಕರ್ನಾಟಕ ಸಾಮಿಲ್‌ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ದುಡಿಮೆ ಮಾಡಿದರೆ ಮಾತ್ರ ಆ ದಿನದ ಊಟಕ್ಕೆ ಆಧಾರ. ಇಲ್ಲದಿದ್ದರೆ ಹಸಿವಿನಿಂದ ಬಳಲಬೇಕಾದ ದಯನೀಯ ಸ್ಥಿತಿ ಸಣ್ಣಯ್ಯ ಅವರದ್ದಾಗಿದೆ.

600 ರುಪಾಯಿ ವೃದ್ಧಾಪ್ಯ ವೇತನದ ಗೌರವ ಧನ ಹಾಗೂ ಕೂಲಿ ಮಾಡಿ ಬರುವ ಅಲ್ಪಸ್ವಲ್ಪ ಹಣದಿಂದ ಬದುಕಿನ ಬಂಡಿ ಯನ್ನು ನಡೆಸುತ್ತಿರುವ ಸಣ್ಣಯ್ಯ ಸರಕಾರದಿಂದ ಏನಾದರೂ ಸಹಾಯ ದೊರೆಯಬಹುದೇ ಎಂಬ ಆಶಾ ಭಾವನೆ ಯಲ್ಲಿಯೇ ದಿನ ಕಳೆಯುತ್ತಿದ್ದಾರೆ.

ಏಕಾಂಗಿ ಜೀವನ: ಪುರಸಭಾ ಮಾಜಿ ಸದಸ್ಯ ಸಣ್ಣಯ್ಯ ಅವರ ಕುರಿತು ಮಾತನಾಡಿರುವ, ಕರ್ನಾಟಕ ಸಾಮಿಲ್ ಮಾಲೀಕ ಉಮ್ಮರ್ ಬೇಗ್, ನಮ್ಮಲ್ಲಿ ಕೆಲಸ ಮಾಡುತ್ತಿರುವ ಸಣ್ಣಯ್ಯ ಸಜ್ಜನ ವ್ಯಕ್ತಿ. ಪತ್ನಿಯನ್ನು ಕಳೆದುಕೊಂಡು ಏಕಾಂಗಿಯಾಗಿ ಜೀವನ
ನಡೆಸುತ್ತಿದ್ದಾರೆ. ಸಣ್ಣಯ್ಯ ಅವರೀಗ ಸರಕಾರದ ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ. ಕ್ಷೇತ್ರದ ಶಾಸಕರೂ ಆದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಅವರು ಸಣ್ಣಯ್ಯ ಅವರಿಗೆ ಸ್ವಂತ ಸೂರಿನ ಸೌಲಭ್ಯ ಕಲ್ಪಿಸಿಕೊಡಬೇಕು.
ಪುರಸಭೆಯ ವತಿಯಿಂದಲಾದರೂ ನಿವೇಶನ ಕೊಡಿಸಿ ಮನೆಯನ್ನು ನಿರ್ಮಿಸಿಕೊಡುವ ಮೂಲಕ ಆಸರೆಯಾಗಬೇಕು ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!