Friday, 13th December 2024

ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣಗೆ ಕಿರುಕುಳ..!

ಬೆಂಗಳೂರು: ರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣಗೆ ಬೆಂಗಳೂರಿನಲ್ಲಿ ಕುಟುಂಬದ ಜೊತೆ ಊಟ ಮುಗಿಸಿ ಬರುವಾಗ ಕೆಲವು ಕಿಡಿಗೇಡಿಗಳು ಅವರಿಗೆ ಕಿರುಕುಳ ನೀಡಿದ್ದಾರೆ.
ಪೊಲೀಸರು ಸಹಾಯಕ್ಕೆ ಬಂದಿಲ್ಲ ಎಂದು ಆರೋಪಿಸಿದ್ದಾರೆ.

ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇತ್ತೀಚೆಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ತಮಗಾದ ಭಯಾನಕ ಅನುಭವ ಹಂಚಿಕೊಂಡಿದ್ದಾರೆ. ‘ನಮ್ಮ ಬೆಂಗಳೂರಿನಲ್ಲಿ ನಾವು ಸ್ಥಳೀಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ನನಗೆ ಮೂಡಿದೆ’ ಎಂದು ಅವರು ಪೋಸ್ಟ್ ಆರಂಭಿಸಿದ್ದಾರೆ.

‘ಒಂದೆರಡು ದಿನಗಳ ಹಿಂದೆ ಫ್ರೇಜರ್ ಟೌನ್ ಪ್ರದೇಶದ ಸಮೀಪವಿರುವ ಪುಲಿಕೇಶಿ ನಗರದ ಮಸೀದಿ ರಸ್ತೆಯಲ್ಲಿರುವ ಕರಾಮಾ ಎಂಬ ರೆಸ್ಟೊರೆಂಟ್‌ನಲ್ಲಿ ಸಂಜೆ ಕುಟುಂಬದೊಂದಿಗೆ ಊಟ ಮಾಡಲು ತೆರಳಿದ್ದೆ. ಭೋಜನ ಮುಗಿಸಿದ ನಂತರ ನಾವು ವಾಲೆಟ್ ಪಾರ್ಕಿಂಗ್‌ನಿಂದ ನಮ್ಮ ವಾಹನ ಸ್ವೀಕರಿಸಿ ಹೊರಡುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಡ್ರೈವರ್ ಸೀಟ್ ಕಿಟಕಿಯ ಬಳಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡು, ನಿಮ್ಮ ವಾಹನವು ತುಂಬಾ ದೊಡ್ಡದಾಗಿದೆ, ಇದ್ದಕ್ಕಿದ್ದಂತೆ ಚಲಿಸಿದಲ್ಲಿ ಅದು ನಮಗೆ ತಾಗಬಹುದು ಎಂದು ವಾದಿಸಲು ಪ್ರಾರಂಭಿಸಿದರು’ ಎಂದು ಬರೆದಿರುವ ಹರ್ಷಿಕಾ ಮುಂದೇನಾಯಿತು ಎಂಬುದನ್ನು ವಿವರಿಸಿದ್ದಾರೆ.

‘ಇನ್ನೂ ವಾಹನ ಮೂವ್ ಮಾಡಿಲ್ವಲ್ಲ ಸೈಡು ಬಿಡಿ ಎಂದು ನನ್ನ ಪತಿ ಹೇಳಿದರು. ಅವರ ಮಾತಿನಲ್ಲಿ ಅರ್ಥವಿರಲಿಲ್ಲ. ನಾವು ವಾಹನವನ್ನು ಸ್ವಲ್ಪ ಮುಂದಕ್ಕೆ ಸರಿಸಿದೆವು, ಅಷ್ಟರೊಳಗೆ ಈ ಇಬ್ಬರು ವ್ಯಕ್ತಿಗಳು ನಮ್ಮನ್ನು ಅವರ ಭಾಷೆಯಲ್ಲಿ ನಿಂದಿಸಲು ಪ್ರಾರಂಭಿಸಿದರು. ಈ ಲೋಕಲ್ ಕನ್ನಡಿಗರಿಗೆ ಪಾಠ ಕಲಿಸಬೇಕು ಎಂದು ಹೇಳಿ ನನ್ನ ಪತಿಗೆ ಹೊಡೆಯಲು ಸಹ ಪ್ರಯತ್ನಿಸಿದರು’ ಎಂದು ಘಟನೆ ಬಗ್ಗೆ ಹರ್ಷಿಕಾ ವಿವರಿಸಿದ್ದಾರೆ.

ಭುವನ್ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಳ್ಳುವವರಂತೆ. ಆದರೆ, ಈ ಬಾರಿ ಅವರು ಹೆಚ್ಚು ಪ್ರತಿಕ್ರಿಯಿಸಿಲ್ಲ.

‘ನನ್ನ ಪತಿ ತುಂಬಾ ತಾಳ್ಮೆಯಿಂದಿದ್ದರು, ಅವರು ಹೆಚ್ಚು ಪ್ರತಿಕ್ರಿಯಿಸಲಿಲ್ಲ. 2- 3 ನಿಮಿಷಗಳಲ್ಲಿ ಅದೇ ಗ್ಯಾಂಗ್‌ನ 20-30 ಸದಸ್ಯರ ಗುಂಪು ಜಮಾಯಿಸಿತು.

‘ನಮ್ಮ ವಾಹನದಲ್ಲಿ ಮಹಿಳೆಯರು ಮತ್ತು ಕುಟುಂಬದವರು ಇದ್ದ ಕಾರಣ ನನ್ನ ಪತಿ ಹೆಚ್ಚು ಪ್ರತಿಕ್ರಿಯಿಸಲಿಲ್ಲ. ಅಲ್ಲದೆ ನಾನು ಗಮನಿಸಿದ್ದು ಏನೆಂದರೆ ಇವರಿಗೆ ನಾವು ಕನ್ನಡದಲ್ಲಿ ಮಾತನಾಡುತ್ತಿದ್ದೇವೆ ಎಂಬುದು ಸಮಸ್ಯೆ ಆಗಿತ್ತು. ನೀವು ನಮ್ಮ ಪ್ರದೇಶಕ್ಕೆ ಬಂದಿದ್ದೀರಾ, ನಿಮಗೆ ಬೇಕಾದ ಭಾಷೆಗಳಲ್ಲಿ ಮಾತನಾಡುವುದನ್ನು ನಿಲ್ಲಿಸಿ, ಯೇ ಲೋಕಲ್ ಕನ್ನಡ್ ವಾಲಾ ಹೇ (ಈ ವ್ಯಕ್ತಿಗಳು ಸ್ಥಳೀಯ ಕನ್ನಡ ಜನರು) ಎನ್ನುತ್ತಿದ್ದರು. ನನ್ನ ಗಂಡ ಮತ್ತು ನಾನು ಕನ್ನಡದಲ್ಲಿ ಮಾತ್ರ ಮಾತನಾಡಿದಾಗ ಅದು ಅವರನ್ನು ಹೆಚ್ಚು ಕೆರಳಿಸಿತು.

‘ನಾವು ಸಮೀಪದಲ್ಲಿ ಗಸ್ತು ಪೊಲೀಸ್ ವಾಹನವನ್ನು ಕಂಡು ಘಟನೆಯನ್ನು ಹತ್ತಿರದ ಪೊಲೀಸ್ ಠಾಣೆಯ ASI ಉಮೇಶ್ ಅವರಿಗೆ ವಿವರಿಸಿದೆವು. ಅವರು ನಮಗೆ ಸಹಾಯ ಮಾಡಲು ಆಸಕ್ತಿ ತೋರಲಿಲ್ಲ. ಇಲಾಖೆಯ ಮೇಲಧಿಕಾರಿಗಳ ಜತೆ ಮಾತನಾಡ ಬೇಕು ಎಂದ ಅವರು, ಬಂದು ಏನಾಯಿತು ಎಂದು ತಿಳಿದುಕೊಳ್ಳುವ ಸೌಜನ್ಯವೂ ಇಲ್ಲ. ಕೇವಲ 2 ಕಟ್ಟಡಗಳ ಮುಂದಿರುವ ರೆಸ್ಟೊರೆಂಟ್‌ನ ಮುಂದೆ ಮೂಸಂಬಿ ಜ್ಯೂಸ್ ಕುಡಿಯುತ್ತ ಕಾರ್​ನಲ್ಲಿ ಅವರು ಕುಳಿತಿದ್ದರು’ ಎಂದು ಆರೋಪಿಸಿದ್ದಾರೆ ಹರ್ಷಿಕಾ.