Saturday, 27th July 2024

ಭಾರಿ ಮಳೆ ಮುನ್ಸೂಚನೆ; ಶಾಲಾ-ಕಾಲೇಜಿಗೆ ರಜೆ, ಪದವಿ ಪರೀಕ್ಷೆಗಳು ಮುಂದೂಡಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಮಂಗಳವಾರ ಕೊಂಚ ತಗ್ಗಿದೆ.

ಆದರೆ ಪ್ರವಾಹದ ಪರಿಸ್ಥಿತಿ ಕಡಿಮೆ ಆಗಿಲ್ಲ. ಭಾರಿ ಮಳೆಯಾಗುವ ಮುನ್ಸೂಚನೆ ಹಿನ್ನೆಲೆ ಯಲ್ಲಿ ಹವಾಮಾನ ಇಲಾಖೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

ಕಡಬ, ಪಾಣೆಮಂಗಳೂರಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 50ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. 19ಕ್ಕೂ ಅಧಿಕ ಮನೆಗಳು ಹಾನಿಗೀಡಾಗಿವೆ. ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ ಪ್ರವಾಹದಿಂದ ಸಂಪರ್ಕ ಕಡಿತಗೊಂಡಿದ್ದರೆ, ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ತೀವ್ರ ಮಳೆಯಿಂದ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ.

ಭಾರಿ ಗಾಳಿ, ಮಳೆಯಿಂದಾಗಿ ಅಲ್ಲಲ್ಲಿ ವಿದ್ಯುತ್ ಕಂಬಗಳು ಉರುಳಿಬಿದ್ದರೆ, ಗ್ರಾಮಾಂತರ ದಲ್ಲಿ ತೋಟಗಾರಿಕಾ ಬೆಳೆ, ಕೃಷಿಗೆ ತೀವ್ರ ಹಾನಿ ಉಂಟಾಗಿದೆ. ನದಿ ಪಾತ್ರದ ತೋಟ, ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ. 10ಕ್ಕೂ ಅಧಿಕ ಟ್ರಾನ್ಸ್‌ಫಾರ್ಮರ್ ಕೆಟ್ಟು ಹೋಗಿ ಹೆಚ್ಚಿನ ಕಡೆಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಿದೆ. ಮರಗಳು ಉರುಳಿ ಹಲವೆಡೆ ಸಂಚಾರಕ್ಕೆ ಅಡ್ಡಿಯಾಗಿದ್ದು, ತೆರವು ಗೊಳಿಸಲಾಗಿದೆ.

ನೇತ್ರಾವತಿ ನದಿ 7.9 ಮೀ. (ಅಪಾಯದ ಮಟ್ಟ 8.5ಮೀ.) ಎತ್ತರಕ್ಕೆ ಹರಿಯುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪಾಣೆ ಮಂಗಳೂರು, ಆಲಡ್ಕ, ಬಡ್ಡಕಟ್ಟೆ, ಜಕ್ರಿಬೆಟ್ಟು ಕಂಚಿಕಾರಪೇಟೆ ಪ್ರದೇಶದ 20ಕ್ಕೂ ಅಧಿಕ ಕುಟುಂಬವನ್ನು ಸ್ಥಳಾಂತರ ಮಾಡಲು ಜಿಲ್ಲಾಡಳಿತ ಉದ್ದೇಶಿಸಿದ್ದರೂ ಕೆಲವರು ತಮ್ಮ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ಕಡಬದಲ್ಲಿ 10 ಮಂದಿಯನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

ಪದವಿ ಪರೀಕ್ಷೆ ಮುಂದೂಡಿಕೆ: ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಡಗು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜು.25ರಂದು ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾಲಯದ ಎಲ್ಲ ಪದವಿ ಪರೀಕ್ಷೆಗಳನ್ನು ಮುಂದೂಡ ಲಾಗಿದೆ.

Leave a Reply

Your email address will not be published. Required fields are marked *

error: Content is protected !!