Saturday, 27th July 2024

ಹುಬ್ಬಳ್ಳಿ-ದೆಹಲಿ ರೈಲಿಗೆ ನಾಳೆ ಸಚಿವ ಅಶ್ವಿನಿ ವೈಷ್ಣವ್ ಚಾಲನೆ

ಹುಬ್ಬಳ್ಳಿ: ಹುಬ್ಬಳ್ಳಿ-ದೆಹಲಿ ರೈಲಿಗೆ ಮಂಗಳವಾರ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಚಾಲನೆ ನೀಡಲಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಸಚಿವರು ಪಾಲ್ಗೊಳ್ಳಲಿದ್ದಾರೆ.

ಹುಬ್ಬಳ್ಳಿ-ದೆಹಲಿ (ನಿಜಾಮುದ್ದೀನ್) ರೈಲು ಈ ಭಾಗದ ಜನರ ಬಹಳ ದಿನಗಳ ಬೇಡಿಕೆ ಯಾಗಿತ್ತು. ಈ ರೈಲಿನ ಮೂಲಕ ರಾಷ್ಟ್ರ ರಾಜಧಾನಿಗೆ ನೇರ ಸಂಪರ್ಕ ಕಲ್ಪಿಸಲು ಸಾಧ್ಯ ವಾಗುತ್ತದೆ. ಈ ರೈಲಿನ ಮೂಲಕ ಆರ್ಥಿಕ ಚಟುವಟಿಕೆಗೂ ಉತ್ತೇಜನ ಸಿಗುವ ನಿರೀಕ್ಷೆ ಇದೆ.

ಈ ರೈಲು ಕೋಪರಗಾವ್‌ನಲ್ಲಿ ನಿಲುಗಡೆ ಹೊಂದಿದೆ. ಶಿರಡಿ ಸಾಯಿಬಾಬಾ ಭಕ್ತರಿಗೆ ಸಹ ಅನುಕೂಲವಾಗಲಿದೆ. ಹುಬ್ಬಳ್ಳಿಯಿಂದ ಹೊರಡುವ ರೈಲು ಬೆಳಗಾವಿ, ಪುಣೆ, ಅಹಮದ್ ನಗರ, ಇಟಾರ್ಸಿ, ಭೋಪಾಲ್, ಆಗ್ರಾ ಮೂಲಕ ದೆಹಲಿ ತಲುಪಲಿದೆ.

ಭಾರತೀಯ ರೈಲ್ವೆ ಕೋವಿಡ್ ಸಮಯದಲ್ಲಿ ಗೋವಾ ಲಿಂಕ್ ಎಕ್ಸ್‌ಪ್ರೆಸ್ ( ರೈಲು ಸಂಖ್ಯೆ 17305) ಸ್ಥಗಿತಗೊಳಿಸಿತ್ತು. ಬಳಿಕ ಹುಬ್ಬಳ್ಳಿ-ದೆಹಲಿ ನಡುವಿನ ರೈಲಿಗೆ ಬೇಡಿಕೆ ಹೆಚ್ಚಿತ್ತು.

ಸದ್ಯ ಹುಬ್ಬಳ್ಳಿ-ನಿಜಾಮುದ್ದೀನ್ ರೈಲು ವಾರಕ್ಕೊಮ್ಮೆ ಸಂಚಾರ ನಡೆಸಲಿದೆ. ರೈಲುಗಳ ವೇಳಾಪಟ್ಟಿ ಪರಿಷ್ಕರಣೆ ಮಾಡಲು ಪ್ರಯತ್ನ ನಡೆಸಲಾಗುತ್ತದೆ ಎಂದು ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಮಂಗಳವಾರ ಕೇಂದ್ರ ರೈಲ್ವೆ ಸಚಿವರು ಹುಬ್ಬಳ್ಳಿ-ಧಾರವಾಡ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಸಚಿವ ಪ್ರಹ್ಲಾದ್ ಜೋಶಿ ಭಾನುವಾರ ಧಾರವಾಡದ ರೈಲ್ವೆ ನಿಲ್ದಾಣದಲ್ಲಿ ನಡೆಯುವ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ ನಡೆಸಿದರು.

ಪ್ರಹ್ಲಾದ್ ಜೋಶಿ, “ಡಿಸೆಂಬರ್‌ ಅಥವ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿ-ಕಿತ್ತೂರು-ಬೆಳಗಾವಿ ನೇರ ರೈಲು ಮಾರ್ಗ ಕಾಮಗಾರಿಗೆ ಶಂಕುಸ್ಥಾಪನೆ ಮಾಡುವ ನಿರೀಕ್ಷೆ ಇದೆ” ಎಂದರು.

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಿರ್ಮಾಣ ಮಾಡಿರುವ ವಿಶ್ವದ ಅತಿ ದೊಡ್ಡ ರೈಲು ಫ್ಲಾಟ್‌ ಫಾರ್ಮ್‌ಅನ್ನು ಸಹ ಡಿಸೆಂಬರ್‌ನಲ್ಲಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.

error: Content is protected !!