Wednesday, 11th December 2024

ಬಸ್ ಡಿವೈಡರ್‌ಗೆ ಡಿಕ್ಕಿ: ಚಾಲಕ, ನಿರ್ವಾಹಕ ಸೇರಿ 6 ಮಂದಿಗೆ ಗಾಯ

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮತ್ತು ನಿರ್ವಾಹಕ ಸೇರಿ 6 ಮಂದಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಅಡಕಮಾರನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯಲ್ಲಿ ಘಟನೆ ನಡೆದಿದ್ದು, 4 ಅಡಿ ಎತ್ತರದ ರಸ್ತೆ ವಿಭಜಕವನ್ನು ದಾಟಿ ಎದುರು ರಸ್ತೆಗೆ ಡಿವೈಡರ್‌ ಮೇಲೆ ಬಸ್‌ ಬಂದು ನಿಂತಿದೆ.

ಬೆಂಗಳೂರು-ಸೋಮವಾರಪೇಟೆ ಬಸ್ ಅಪಘಾತಕ್ಕೀಡಾಗಿದ್ದು ಮುಂಭಾಗದಲ್ಲಿ ಕುಳಿತಿದ್ದವರಿಗೆ ಗಾಯಗಳಾಗಿದೆ ಎಂದು ವರದಿಗಳು ತಿಳಿಸಿವೆ.

ಬಸ್‌ ಫ್ಲೈಓವರ್‌ನ ಡಿವೈಡರ್‌ಗೆ ಡಿಕ್ಕಿ ಹೊಡೆದಿರುವ ರಭಸಕ್ಕೆ ಸದ್ಯ ಸೇತುವೆಯಿಂದ ಕೆಳಕ್ಕೆ ಬೀಳುವುದಕ್ಕೆ ಅವಕಾಶವಿಲ್ಲದಂತೆ ಮುಂದಿನ ಡಿವೈಡರ್‌ಗೆ ಜಂಪ್‌ ಮಾಡಿರುವುದು ಭಯನಕವಾಗಿದೆ. ಅಲ್ಲದೆ, ಒಂದು ವೇಳೆ ಬಸ್‌ ಫ್ಲೈಓವರ್‌ನಿಂದ ಕೆಳಕ್ಕೆ ಬಿದ್ದಿದ್ದರೆ ದೊಡ್ಡ ದುರಂತವೇ ಸಂಭವಿಸುವ ಸಾಧ್ಯತೆಗಳಿರುತ್ತಿತ್ತು.

ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಡಿವೈಡರ್‌ಗೆ ಬಸ್ ಡಿಕ್ಕಿ ಹೊಡೆದು ನಿಂತಿದ್ದರಿಂದ ರಸ್ತೆಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.