Wednesday, 11th December 2024

ಚಿನ್ನದಂಗಡಿ ಮಾಲೀಕರಿಗೆ ಐಟಿ ಶಾಕ್

ಮಂಗಳೂರು: ಬೆಳಗ್ಗೆ ಕರಾವಳಿ ಭಾಗದ ಚಿನ್ನದಂಗಡಿ ಮಾಲೀಕರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್‌ ನೀಡಿದ್ದು, ಕದ್ರಿ ಆಭರಣ ಸೇರಿದಂತೆ ವಿವಿಧ ಚಿನ್ನದಂಗಡಿಗಳ ಮೇಲೆ ಐಟಿ ದಾಳಿಯಾಗಿದೆ.

ಮಂಗಳೂರಿನ ಕದ್ರಿಯ ಬಳಿಯ ಶಿವಭಾಗ್‌ನ ಆಭರಣ ಜ್ಯುವೆಲ್ಲರಿಯ ಮೇಲೆ ಐಟಿ ಅಧಿಕಾರಿಗಳು ನಡೆಸಿದ್ದು, ಬೆಳಗ್ಗಿನಿಂದ ದಾಖಲೆಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಐದಾರು ಜನ ಐಟಿ ಅಧಿಕಾರಿಗಳ ತಂಡದಿಂದ ಜ್ಯುವೆಲ್ಲರಿಯಲ್ಲಿ ಪರಿಶೀಲನೆ ನಡೆಯುತ್ತಿದ್ದು, ಬಿಲ್ಲಿಂಗ್ ವಿವರ, ಚಿನ್ನದ ಬೇರೆ ಬೇರೆ ದಾಖಲೆಗಳನ್ನು ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ರಾಜ್ಯದಲ್ಲಿ 14 ಹಾಗೂ ಗೋವಾದಲ್ಲಿ ಒಂದು ಆಭರಣ ಜ್ಯುವೆಲ್ಲರಿ ಮಳಿಗೆಗಳಿವೆ. ಸುಭಾಷ್ ಕಾಮತ್ ಹಾಗೂ ಮಹೇಶ್ ಕಾಮತ್ ಅವರ ಮಾಲೀಕತ್ವ ದಲ್ಲಿ ಆಭರಣ ಜ್ಯುವೆಲ್ಲರಿ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಮಂಗಳೂರಿನ ಶಿವಭಾಗ್ ಹಾಗೂ ಕೊಟ್ಟಾರ ದಲ್ಲಿ ಮಳಿಗೆಗಳಿವೆ. ಇನ್ನು ಉಡುಪಿಯಲ್ಲೂ ಹಲವು ಕಡೆ ಆಭರಣ ಜ್ಯುವೆಲ್ಲರಿ ಮಳಿಗೆಗಳಿವೆ.

ಉಡುಪಿ, ಕಾರ್ಕಳ, ಕುಂದಾಪುರ, ಪಡುಬಿದ್ರಿ, ಬ್ರಹ್ಮಾವರ, ಪುತ್ತೂರು ಸೇರಿದಂತೆ ಹಲವೆಡೆ ಚಿನ್ನದ ಅಂಗಡಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಕರಾವಳಿಯ ಅನೇಕ ಭಾಗಗಳಲ್ಲಿ ಪ್ರಸಿದ್ಧ ಚಿನ್ನದ ಮಳಿಗಳ ಮೇಲೆ ಏಕಕಾಲದಲ್ಲಿ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ಮುಂದುವರಿಸಿದ್ದಾರೆ..

ಲೋಕಾಯುಕ್ತ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ ಮೇಲೆ ರಾಜ್ಯದ ವಿವಿಧ ಇಲಾಖೆ ಗಳ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದರು. ರಾಯಚೂರು, ಚಾಮರಾಜನಗರ, ರಾಮನಗರ, ಬೆಂಗಳೂರು, ಬಳ್ಳಾರಿ ಸೇರಿದಂತೆ ರಾಜ್ಯದ ಒಟ್ಟು 90 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಾಕಾಲಕ್ಕೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದರು.