Thursday, 28th November 2024

orange alert: ಆರೆಂಜ್ ಅಲರ್ಟ್ ಘೋಷಣೆ‌ ಹಿನ್ನೆಲೆ: ಕೆಲಸ‌ ಇದ್ದಲ್ಲಿ ಮನೆಯಿಂದ ಹೊರಬನ್ನಿ, ಅನಾವಶ್ಯಕ ತಿರುಗುವುದು ಬೇಡ

kalaburaginews

ಕಲಬುರಗಿ: ಭಾರತೀಯ ಹವಾಮಾನ ಇಲಾಖೆಯು ಕಲಬುರಗಿ ಜಿಲ್ಲೆಯಲ್ಲಿ ಆಗಸ್ಟ್ 31ರಿಂದ ಸೆಪ್ಟೆಂಬರ್ 2ರ ಬೆಳಗ್ಗೆ 8.30 ಗಂಟೆ ವರೆಗೆ ವ್ಯಾಪಕ ಮಳೆಯಾಗುವುರಿಂದ ಆರೆಂಜ್ ಅಲರ್ಟ್ ಘೋಷಿಸಿದ್ದು, ಕೆಲಸ ವಿದ್ದಲ್ಲಿ ಮಾತ್ರ ಸಾರ್ವಜನಿಕರು ಮನೆಯಿಂದ ಹೊರಬರಬೇಕು. ಅನಗತ್ಯ ತಿರುಗಾಡಬಾರದೆಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಕಲಬುರಗಿ ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಮುನ್ಸೂಚನೆ ಕಾರಣ ಶಾಲೆಗೆ ತೆರಳುವಾಗ ಶಾಲಾ ಮಕ್ಕಳು ಅಗತ್ಯ ಮುಂಜಾಗ್ರತೆ ವಹಿಸಬೇಕು. ಸಾಧ್ಯವಾದರೆ ಪೋಷಕರು ಮಕ್ಕಳನ್ನು ಶಾಲೆಗೆ ಸ್ವತ: ಕರೆದುಕೊಂಡು ಹೋಗಬೇಕು ಎಂದಿರುವ ಅವರು, ಶಿಕ್ಷಕರು ಹಳೇ ಶಾಲಾ ಕಟ್ಟಡಗಳಲ್ಲಿ ಮಕ್ಕಳಿಗೆ ಪಾಠ ಮಾಡಬಾರದು ಎಂದು ಅವರು ತಿಳಿಸಿದ್ದಾರೆ.

ದ್ವಿಚಕ್ರ ವಾಹನ ಸವಾರರು ಅತಿ ಅವಶ್ಯಕತೆಯಿದ್ದಲ್ಲಿ ಮಾತ್ರ ಮನೆಯಿಂದ ಹೊರಗಡೆ ಬರಲು ಹಾಗೂ ಮಳೆ ಸುರಿಯುವಾಗ ಸಂಚಾರವನ್ನು ಮೊಟಕುಗೊಳಿಸಬೇಕು. ಇನ್ನು ರಾತ್ರಿಯಾದ ತಕ್ಷಣ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸೂರ್ಯಾಸ್ತವಾದ ತಕ್ಷಣ ಸಾರ್ವಜನಿಕರು ಮುನ್ನೆಚ್ಚರಿಕೆಯಾಗಿ ಮನೆ ಸೇರಬೇಕು ಎಂದು ಅವರು ತಿಳಿಸಿದ್ದಾರೆ.

ಆರೆಂಜ್ ಅಲರ್ಟ್ ಘೋಷಣೆಯಿಂದ ಅತೀ ಹೆಚ್ಚು ಮಳೆಯಾಗುವ ಕಾರಣ ಗ್ರಾಮದಲ್ಲಿನ ಕೆರೆ, ಹಳ್ಳ-ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುವ ಸಾಧ್ಯತೆಯಿರುವುದರಿಂದ ಜಾನುವಾರುಗಳನ್ನು ನೀರು ಕುಡಿಸಲು ಹೊಳೆ ಸಮೀಪ ತೆಗೆದುಕೊಂಡು ಹೋಗಬಾರದೆಂದು ಹಾಗೂ ಸಾರ್ವಜನಿಕರು ಸಹ ನದಿ, ಹಳ್ಳ ದಂಡೆ ಕಡೆ ಹೋಗಬಾರದೆಂದು ಡಿ.ಸಿ. ಅವರು ಮನವಿ ಮಾಡಿಕೊಂಡಿದ್ದಾರೆ.

ರೈತರಲ್ಲಿ‌ ಮನವಿ: ಹೊಲದಲ್ಲಿ ಕೆಲಸ ಮಾಡುವ ರೈತ ಬಾಂಧವರು ಕೀಟನಾಶಕ ಸಿಂಪರಣೆಯನ್ನು ಮುಂದೂಡುವುದು ಒಳ್ಳೆಯದು. ಹೆಸರು, ಉದ್ದು ಬೆಳೆಗಳು ಕಟಾವಿಗೆ ಬಂದಿರುವ ಕಾರಣ ಬೇಗನೆ ಕಟಾವು ಮಾಡಬಹುದಾಗಿದೆ. ಹೊಲ-ಗದ್ದೆಗಳಲ್ಲಿ ಹೆಚ್ಚಿನ ನೀರು ನಿಂತು ಬೆಳೆ ಹಾನಿಯಾಗುವ ಸಂಭವ ಇರುವುದರಿಂದ ಹೊಲದಲ್ಲಿ ಬಸಿಗಾಲಿವೆ ಮಾಡಿ ನೀರನ್ನು ಹೊರಹಾಕಿ ಬೆಳೆ ಸಂರಕ್ಷಿಸಿಕೊಳ್ಳಬೇಕೆಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರು ಇದೇ ಸಂದರ್ಭದಲ್ಲಿ ರೈತ ಬಾಂಧವರಲ್ಲಿ ಮನವಿ ಮಾಡಿದ್ದಾರೆ.