Sunday, 8th September 2024

ಸ್ಪರ್ಧೆಗೆ ಬಿದ್ದು ನೆಮ್ಮದಿ ಕಳೆದುಕೊಳ್ಳುತ್ತಿದ್ದೇವೆ

ಕ್ಲಬ್‌ಹೌಸ್ ಸಂವಾದ- 178

ಗುರಿಯ ಬೆನ್ನತ್ತಿ ಜೀವನದ ಸಂತೋಷ, ಸೌಂದರ್ಯ ಕಾಣದೆ ಬದುಕುತ್ತಿರುವುದು ವಿಪರ್ಯಾಸ

ಬೆಂಗಳೂರು: ಜಗತ್ತಿನಲ್ಲಿ ಎಲ್ಲರೂ ಸ್ಪರ್ಧಾತ್ಮಕ ಜೀವನ ನಡೆಸುತ್ತಿದ್ದಾರೆ. ನಮ್ಮ ಜೀವನವನ್ನೂ ಪ್ರಪಂಚದ ಒತ್ತಾಸೆಯಂತೆ ನಡೆಸುವ ಪರಿಸ್ಥಿತಿ ಬಂದಿದ್ದು, ಮನುಷ್ಯ ನೆಮ್ಮದಿಯ ಜೀವನವನ್ನು ಕಳೆದುಕೊಳ್ಳುತ್ತಿದ್ದಾನೆ.

ಇಂದಿನ ಕಾಲಘಟ್ಟದಲ್ಲಿ ಎಲ್ ಕೆಜಿ ಮಗುವಿನಿಂದ ಸ್ಮಶಾನಕ್ಕೆ ಹೋಗುವ ಹೆಣದವರೆಗೂ ಎಲ್ಲದರಲ್ಲೂ, ಎಲ್ಲರಲ್ಲೂ ಸ್ಪರ್ಧೆ ಮುಖ್ಯವಾಗಿದೆ. ಈ ಸ್ಪರ್ಧಾತ್ಮಕತೆಯಿಂದಾಗಿ ಕೇವಲ ನಮ್ಮ ಗುರಿ ಕಾಣುತ್ತಿದ್ದೇವೆಯೇ ಹೊರತು ಜೀವನದ ಸಂತೋಷ, ಸೌಂದರ್ಯ ಕಾಣದೆ ಬದುಕುತ್ತಿರುವುದು ವಿಪರ್ಯಾಸದ ಸಂಗತಿ. ನಮ್ಮಿಷ್ಟ ದಂತೆ ನಾವು ಬದುಕಲಾಗದೆ, ಪರರ ಇಷ್ಟಕ್ಕೆ ಅನುಗುಣವಾಗಿ ಬದುಕು ಸಾಗಿಸುವ ಸ್ಥಿತಿ ತಂದುಕೊಂಡಿದ್ದೇವೆ.

ಬುಧವಾರ ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ಬದುಕೊಂದು ಪಯಣ, ಸ್ಪರ್ಧಾತ್ಮಕ ಓಟವಲ್ಲ ಎಂಬ ಅರಿವಿನ ಉಪನ್ಯಾಸದಲ್ಲಿ ವಿಶೇಷ ಅತಿಥಿಯಾಗಿದ್ದ ಜಿ.ಎಲ್.ತ್ರಿಪುರಾಂತಕ ಅವರು ಸ್ಪರ್ಧಾತ್ಮಕತೆಯ ಜೀವನ ಮತ್ತು ನೆಮ್ಮದಿಯ ಜೀವನದ ಬಗ್ಗೆ ಮಾತನಾಡಿದ್ದು ಹೀಗೆ. ಒಟ್ಟಾರೆ ಅವರು ಈ ಕುರಿತು ಹೇಳಿದ್ದು…

ಎಷ್ಟರಮಟ್ಟಿಗೆ ನಾವು ಸ್ಪರ್ಧಾತ್ಮಕತೆಯ ಅಡಿಯಾಳಾಗಿದ್ದೇವೆಯೆಂದರೆ, ಪಕ್ಕದ ಮನೆ ಹುಡುಗ ಏನು ಓದು ತ್ತಾನೋ ಅದಕ್ಕಿಂತ ಹೆಚ್ಚಿನದ್ದು ನಮ್ಮ ಮಕ್ಕಳು ಓದಬೇಕು. ಹೆಚ್ಚು ಸೈಟ್, ಮನೆ, ಬ್ಯಾಂಕ್ ಬ್ಯಾಲೆನ್ಸ್ ಮತ್ತಿತರೆ ವಿಚಾರಗಳಲ್ಲಿ ಬೇರೆಯವರಿಗಿಂತ ಚೆನ್ನಾಗಿ ಬದುಕಬೇಕು ಎಂಬಂತೆ, ಎಲ್ಲರ ಪ್ರಯತ್ನ ಯಶಸ್ಸಿನ ಕಡೆ ನಡೆಯು ತ್ತಿದೆ. ಆದರೆ, ಅದಕ್ಕೆ ಮಾನದಂಡವೇನು ಎಂಬುದನ್ನು ಯೋಚಿಸುವ ವ್ಯವಧಾನ ಕಳೆದುಕೊಂಡಿದ್ದೇವೆ. ಇದೆಲ್ಲಾ ಇದ್ದರೆ ಮಾತ್ರ ಸಮಾಜದಲ್ಲಿ ನಾನೊಬ್ಬ ಯಶಸ್ವಿ ವ್ಯಕ್ತಿ ಎಂಬ ‘ಮೂಢ’ ನಂಬಿಕೆ ನಮ್ಮದು.

ಈ ಪೈಪೋಟಿಯಿಂದಾಗಿ ನಮ್ಮ ಜೀವನದ ಆನಂದ, ವೈಯಕ್ತಿಕ ನೆಮ್ಮದಿ, ಸಂತೋಷ ಮತ್ತು ನೆಮ್ಮದಿಯ ನಿದ್ರೆಯನ್ನೂ ಕಳೆದುಕೊಳ್ಳುತ್ತಿದ್ದೇವೆ.
ಇದರಿಂದ ನಾವು ಗಳಿಸುತ್ತಿರುವುದು ಕೇವಲ ರೋಗಗಳಷ್ಟೆ. ಬುದ್ಧ ಹೇಳಿದ್ದ ‘ಸಾವಿಲ್ಲದ ಮನೆಯಲ್ಲಿ ಸಾಸಿವೆ ಕೊಂಡು ಬಾ’ ಎಂದು. ಬುದ್ಧ ಈಗ ಇದ್ದಿದ್ದರೆ ‘ಔಷಧ ಇಲ್ಲದ ಮನೆಯಲ್ಲಿ ಸಾಸಿವೆ ಕೊಂಡು ಬಾ’ಎನ್ನುತ್ತಿದ್ದನೋ ಎಂಬಂತಾಗಿದೆ ನಮ್ಮ ಜೀವನ. ಸಹಜವಾದ ಬದುಕನ್ನು ಅಸಹಜವಾಗಿ, ಅಸಹಜವಾದ ಬದುಕನ್ನು ಸಹಜವಾಗಿ ಕಾಣುವಂತಾಗಿದೆ. ಸ್ಪರ್ಧಾತ್ಮಕ ಪ್ರಪಂಚ ತಂದೆ, ತಾಯಿ, ಮಕ್ಕಳ ಭಾವನೆಗಳನ್ನು ಬದಲಿಸುತ್ತಿದೆ.

ಒಬ್ಬರನ್ನೊಬ್ಬರು ಮಾತನಾಡಿಸಲೂ ಸಮಯವಿಲ್ಲದಷ್ಟು ಅತುರದ ಜೀವನ ನಮ್ಮದಾಗಿದೆ. ವಿವೇಚನಾರಹಿತವಾಗಿ, ಬೇರೆಯವರ ಜೀವನವನ್ನು
ಹೋಲಿಕೆ ಮಾಡಿಕೊಂಡು ಕೊಳ್ಳುಬಾಕ ಜೀವನ ಮಾಡಿ ಕಡೆಗೆ ಹಾಸ್ಯಕೆ ಒಳಗಾಗುವಂತಾಗುತ್ತಿದೆ. ಕೆಲವೊಮ್ಮೆ ನಮ್ಮ ಇಷ್ಟಕ್ಕೆ ತಕ್ಕಂತೆ ನಾವು ಏಕೆ ಬದುಕುತ್ತಿಲ್ಲ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ, ಪ್ರಪಂಚ ಹೊರಗಿನ ಸ್ಪರ್ಧಾತ್ಮಕ ಜೀವನ ಶೈಲಿಗೆ ಪ್ರಚೋಽಸುತ್ತದೆ. ಅದನ್ನು ನಾವು ಬೆನ್ನು ಹತ್ತು ತ್ತೇವೆ.

ಇಷ್ಟೆಕ್ಕೆಲ್ಲ ಮುಖ್ಯ ಕಾರಣ ದುರಾಸೆ. ಮನುಷ್ಯನಿಗೆ ತಾನು ಗಳಿಸಿದಷ್ಟಕ್ಕೇ ಎಂದೂ ಸಮಾಧನ ಪಡುವುದಿಲ್ಲ. ನನ್ನ ಬಳಿ ಏನು ಇದೆ ಎಂಬ ಪಟ್ಟಿಯ ಬದಲು ಏನು ಇಲ್ಲ ಎಂಬ ಪಟ್ಟಿಯೇ ದೊಡ್ಡರುತ್ತದೆ. ಇದರಿಂದ ಸಮಾಧಾನವೆಲ್ಲ ಸಮಾಧಿಯಾಗುತ್ತಿದೆ. ಮತ್ತದೇ ಹೋಲಿಕಯ ಪ್ರಚೋದನೆಗೆ ಒಳಗಾಗುತ್ತಾನೆ. ಸಂತೋಷ, ನೆಮ್ಮದಿ, ಸಮಾಧಾನ ಎಂಬುದು ಹೊರಗೆಲ್ಲೂ ಕಾಣಸಿಗುವುದಿಲ್ಲ, ಅದು ನಮ್ಮ ಮನಸ್ಸಿನಲ್ಲೇ ಇದೆ. ಅದನ್ನು ನಾವು ಕಣ್ಣು ತೆರೆದು ನೋಡಬೇಕಷ್ಟೆ. ಈ ಅರಿವು ಮನುಷ್ಯನಿಗೆ ಇರಬೇಕು.

ಅವರಿವರ ಯೋಚನೆ, ನಿರ್ಧಾರಗಳಿಗೆ ನಮ್ಮ ಜೀವನ ಬಲಿ ಕೊಡುವುದು ಬೇಡ. ಜಗತ್ತನ್ನು ಮೆಚ್ಚಿಸಿ ಬದುಕುವ ಗೀಳಾದರೂ ಏನು? ನಿರೀಕ್ಷೆಯ ಸ್ನೇಹ, ಸಂಬಂಧ ಇಟ್ಟುಕೊಳ್ಳದೆ, ನೆಮ್ಮದಿಯ ಜೀವನ ಮಾಡೋಣ. ನವಿಲನ್ನು ನೋಡಿ ಕೆಂಭೂತ ಪುಕ್ಕ ತೆರೆಯಿತಂತೆ ಎಂಬ ಮಾತಂತೆ ಬೇರೆಯವರ ಜೀವ ವನ್ನು ಹೋಲಿಕೆ ಮಾಡಿಕೊಂಡು ನಮ್ಮ ಸಂತೋಷವನ್ನು ಕಳೆದುಕೊಳ್ಳುವುದು ಬೇಡ ಎಂದು ಆಶಯ ವ್ಯಕ್ತಪಡಿಸಿದರು.

***

ಸಹಜವಾದ ಬದುಕನ್ನು ನಡೆಸಿದವರಲ್ಲಿ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫೆನಾಂಡೀಸ್ ಉತ್ತಮ ಉದಾಹರಣೆ. ಅವರು ಬೆಂಗಳೂರಿಗೆ ಬಂದಾಗಲೆಲ್ಲ ಕೇವಲ ಮೂರು ಪೈಜಾಮ ಮತ್ತು ಮೂರು ಜುಬ್ಬ ಮತ್ತೊಂದು ಚೀಲವನ್ನಷ್ಟೇ ತರುತ್ತಿದ್ದರು. ತುಂಬಾ ಸರಳವಾಗಿ ಜೀವನ ಮಾಡಿದವರು. ಬಿಲ್‌ಗೇಟ್ಸ್ ಬಳಿ ಕೆವಲ ಎರಡು ಕಾರುಗಳಿವೆ. ಹಾಗೆಯೇ ನಾರಾಯಣ ಮೂರ್ತಿ, ಅಜೀಮ್ ಪ್ರೇಮ್‌ಜಿ ಸೇರಿದಂತೆ ಅನೇಕರು ನಮ್ಮ ಮುದೆ ಉದಾಹರಣೆಯಾಗಿ ನಿಂತಿದ್ದಾರೆ. ಜೀವನದಲ್ಲಿ ಆಸೆ ಹೆಚ್ಚಾದಷ್ಟು ನೋವು ಹೆಚ್ಚುತ್ತದೆ.
– ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕರು, ವಿಶ್ವವಾಣಿ ಪತ್ರಿಕೆ

ಶಿಕ್ಷಕ ವೃತ್ತಿಯೂ ವ್ಯಾಪಾರಿಕರಣವಾಗಿದೆ. ಹಿಂದೆ ಒಬ್ಬ ಶಿಕ್ಷಕನ್ನು ನ್ಯಾಯಾಧೀಶರ ಸ್ಥಾನದಲ್ಲಿ ನೋಡುತ್ತಿದ್ದರು. ಆದರೆ, ಇಂದು ಹಣಗಳಿಕೆಗಾಗಿ ಅವರ ವೃತ್ತಿಯ ಜತೆ ಜತೆಗೆ ಬೇರೆ ವ್ಯಾಪಾರ, ವಹಿವಾಟಿಗೂ ತೊಡಗಿಸಿಕೊಳ್ಳುವಂತಾಗಿದೆ. ಇದು ಅವರ ಆಶಯವಲ್ಲ ಪ್ರಪಂಚದ ನಿರೀಕ್ಷೆ.

? ತನ್ನ ತಂದೆ ಒಬ್ಬ ರೈತ ಎಂದು ಪರಿಚಯ ಮಾಡದೆ, ಒಬ್ಬ ಬ್ಯುಸಿನೆಸ್ ಮ್ಯಾನ್ ಎಂದು ಪರಿಚಯಿಸುವ ಮಟ್ಟಿಗೆ ತಾರತಮ್ಯ ಎದುರಾಗಿದೆ.
? ಮದುವೆಯೂ ಪ್ರತಿಷ್ಠೆಯ ವೇದಿಕೆಯಾಗಿ ಬದಲಾಗಿದೆ. ಅದ್ದೂರಿ ಮದುವೆ ಮಾಡಿಕೊಂಡರಷ್ಟೇ ಸಮಾಜದಲ್ಲಿ ಗೌರವ ಎಂದುಕೊಂಡು, ಬೇರೆಯವರಿಗಿಂತ ವಿಭಿನ್ನವಾಗಿ ಮದುವೆಗಳಾಗುತ್ತವೆ.
? ಪ್ರತಿಷ್ಠೆ ಎಂಬುದು ಭಕ್ತಿಯ ವಲಯಕ್ಕೂ ಬಂದು ನಿಂತಿದೆ. ಸ್ಪರ್ಧಾತ್ಮಕತೆಯ ಬೆನ್ನು ಹತ್ತಿ ಹಣ ಗಳಿಸುವ ಮಂದಿ ದೇವರಿಗೆ ಭರ್ಜರಿ ಕಾಣಿಕೆಗಳನ್ನು ನೀಡಿ ನೆಮ್ಮದಿ ಬೇಡುತ್ತಾರೆ.

error: Content is protected !!