Friday, 13th December 2024

ಸಿದ್ದರಾಮೋತ್ಸವಕ್ಕೆ ಹೊರಟಿದ್ದ ವಾಹನ ಅಪಘಾತ: ಓರ್ವನ ಸಾವು

ಬಾಗಲಕೋಟೆ: ದಾವಣಗೆರೆಯಲ್ಲಿ ಬುಧವಾರ ನಡೆಯಲಿರುವ ಸಿದ್ದರಾಮೋತ್ಸವಕ್ಕೆ ಹೊರಟಿದ್ದ ವಾಹನ ಅಪಘಾತಕ್ಕೀಡಾಗಿ ಒಬ್ಬ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿದೆ. ಸಿದ್ಧರಾಮೋತ್ಸವಕ್ಕಾಗಿ ದಾವಣಗೆರೆಗೆ ತೆರಳುತ್ತಿದ್ದ ಕ್ರೂಸರ್ ವಾಹನ ಬಾದಾಮಿ ತಾಲೂಕಿನ ಹೂಲಗೇರಿ ಸಮೀಪ ಅಪಘಾತಕ್ಕೀಡಾಗಿದೆ. ಪರಿಣಾಮವಾಗಿ, ಬೀಳಗಿ ತಾಲೂಕಿನ ಚಿಕ್ಕ ಆಲಗುಂಡಿ ಗ್ರಾಮದ ಪ್ರಕಾಶ್ ಕಂಬಾರ (35) ಮೃತಪಟ್ಟಿದ್ದಾರೆ.

ಪ್ರಕಾಶ್​ ಕಂಬಾರ ವಾಹನ ಚಲಾಯಿಸುತ್ತಿದ್ದರು. ಗಂಭೀರವಾಗಿ ಗಾಯಗೊಂಡಿರುವವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆರೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.