Thursday, 19th September 2024

Stone Mining: ಕಲ್ಲುಗಣಿಗಾರಿಯ ಬೇಜವಾಬ್ದಾರಿ; ರಸ್ತೆ ಪಕ್ಕವೇ ಜಾರಿ ಬಿದ್ದಿರುವ ಬಾರೀ ದಿಮ್ಮಿ

ಬಾಗೇಪಲ್ಲಿ: ತಾಲೂಕಿನ ಹೊನ್ನಂಪಲ್ಲಿ ಸಮೀಪದ ಬೆಟ್ಟಗಳಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯ ಕಾರಣವಾಗಿ ಲಾರಿಗಳಲ್ಲಿ ಭಾರಿ ಗಾತ್ರದ ಕಲ್ಲುದಿಮ್ಮಿಗಳನ್ನು ನಿತ್ಯವೂ ಸಾಗಿಸಲಾಗುತ್ತಿರುತ್ತದೆ.

ಇಂತಹ ಭಾರಿ ಗಾತ್ರದ ಕಲ್ಲುದಿಮ್ಮಿಯೊಂದು ಲಾರಿಯಿಂದ ಜಾರಿ ರಸ್ತೆ ಬದಿಯ ರೈತರ ಜಮೀನಿಗೆ ಉರುಳಿದ ಘಟನೆ ಭಾನುವಾರ ಬೆಳಕಿಗೆ ಬಂದಿದೆ.ಇದು ಶನಿವಾರ ರಾತ್ರಿ ಯಾವುದೋ ಸಂದರ್ಭದಲ್ಲಿ ಬಿದ್ದಿರಬಹುದು ಎಂದು ಹೇಳಲಾಗುತ್ತಿದೆ.

ಇತ್ತೀಚಿನ ಕೆಲ ದಿನಗಳ ಹಿಂದೆಯಷ್ಟೆ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ನೇತೃತ್ವದಲ್ಲಿ  ಗಣಿಗಾರಿಕೆ ನಡೆಸುತ್ತಿರುವ ಗುತ್ತಿಗೆದಾರರ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಅಕ್ರಮ ಗಣಿ ಚಟುವಟಿಕೆಗಳು ನಡೆಸದಂತೆ ಎಚ್ಚರಿಕೆ ನೀಡಿದ್ದರೂ, ಈರೀತಿಯ ಘಟನೆಗಳು ನಡೆಯುತ್ತಿರುವುದು ನಾಗರೀಕರಲ್ಲಿ ಆತಂಕವನ್ನು ಸೃಷ್ಟಿಸಿದೆ.

ಗಣಿಗಾರಿಕೆಯವರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದಾಗಿ ಚಲಿಸುತ್ತಿದ್ದ ವಾಹನದಿಂದ ಕಲ್ಲು ದಿಮ್ಮಿ ಜಾರಿ ಬೀಳುತ್ತಿರುವುದು ಸಾಮಾನ್ಯವಾಗಿದ್ದು ಏನಾದರು ಅನಾಹುತಗಳು ನಡೆದಿದ್ದರೆ ಹೊಣೆಗಾರರು ಯಾರಾಗುತ್ತಿದ್ದರು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ನಾನು ರಾತ್ರಿಯ ವೇಳೆ ಬೈಕ್‌ನಲ್ಲಿ ಬರುತ್ತಿದ್ದಾಗ ಈ ಅದ್ವಾನದ ರಸ್ತೆಯಲ್ಲಿ ಕಲ್ಲುಗಣಿಗಾರಿಕೆಯ ಲಾರಿಗಳು ಯಮಸ್ವರೂಪಿಯಾಗಿ ಕಾಣಿಸುತ್ತವೆ. ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದ ಭಯಭೀತರಾಗ ಬೇಕಾಗಿದೆ. ಯಾರಿಗೆ ಹೇಳಿಕೊಂಡರೂ ನಮ್ಮ ಸಮಸ್ಯೆ ಪರಿಹಾರವಾಗುತ್ತಿಲ್ಲ ಎನ್ನುವುದು ಸ್ಥಳೀಯ ಮಾರ್ಗಾನು ಕುಂಟೆ  ನಿವಾಸಿ ಅನಿಲ್ ಮಾತಾಗಿದೆ.

ಜಿಲ್ಲಾಡಳಿತ ಇತ್ತ ಗಮನ ಹರಿಸಿ ಗಣಿಗಾರಿಕೆಯಿಂದ ಜನಜೀವನದ ಮೇಲೆ ಆಗುತ್ತಿರುವ ದಾಳಿಯನ್ನು ನಿಯಂತ್ರಣಕ್ಕೆ ತರುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.