Sunday, 8th September 2024

ವಾಲ್ಮೀಕಿ ಕವಿಯಾದದ್ದು ನಮ್ಮ ಪುಣ್ಯ

ದಾಸ್ ಕ್ಯಾಪಿಟಲ್

ಟಿ.ದೇವಿದಾಸ್

dascapital1205@gmail.com

ಇದು ಕವಿ ಅಡಿಗರ ಕವನವೊಂದರ ಸಾಲು. ರೇಷ್ಮೆ ಹುಳು ತನ್ನ ಮೈಯಿಂದ ಜಿನುಗುವ ಮೃದುವಾದ ನೂಲಿನಿಂದ ತನ್ನ ಗೂಡನ್ನು ಕಟ್ಟಿಕೊಳ್ಳುತ್ತದೆ. ಅದರ ಮೈಯೂ ಮೃದು.

ಜಿನುಗುವ ನೂಲೂ ಮೃದುವೇ. ಹೊರಮೈಯಲ್ಲಿ ಬತ್ತಲೆಯಾಗಿ ಒಳಮೈಯಿಂದ ದ್ರವಿಸುವ ನೂಲಿನಿಂದ ತನ್ನ ಗೂಡನ್ನು ಕಟ್ಟಿಕೊಂಡು ಮನುಷ್ಯರು ಉಸಿರಾಡುವ ಗಾಳಿಗೆ ಅದು ಗಟ್ಟಿಯಾಗುತ್ತ ಹೋಗುತ್ತದೆ. ಈ ಮೃದುತ್ವ ಜೇನಿಗೊದಗುವುದು ಅದು ಬತ್ತಲೆಯಾದ್ದರಿಂದ. ಜೇನು ಬತ್ತಲಾಗುತ್ತಲೇ ತನ್ನ ಸುತ್ತ ಕಟ್ಟಿಕೊಳ್ಳುವ ಗೂಡಿನಲ್ಲಿ ತನ್ನ ಉಸಿರಾಟವನ್ನು ಹಿಡಿದು ಬದುಕುತ್ತದೆ. ವಾಲ್ಮೀಕಿ ಕವಿಯಾದದ್ದು ಜೇನಿನ ಥರದ ತನ್ನ ಉಸಿರಾಟದ ಬಿಗಿಯಾದ ಬಂಧದಲ್ಲಿ! ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತಿತೇನು ಪುರುಷೋತ್ತಮನ ಆ ಅಂಥ ರೂಪುರೇಖೆ? ಇದು ನಮ್ಮ ಪುಣ್ಯ ಎಂದೇ ಭಾವಿಸಬೇಕು. ಹುತ್ತಗಟ್ಟಿ ಕಾದು ಬೇಡನಾದ.

ವಾಲ್ಮೀಕಿಯಾದ. ಕವಿಯಾದ. ಅವನೊಳಗಿನ ಸೃಷ್ಟಿಶೀಲ ಅಂತರಂಗ ಬಲಿಯ ತೊಡಗಿದ್ದು ಆ ಪರಿಯಲ್ಲಿ! ಅವನನ್ನು ಆರಾಧಿಸುವ ನಮ್ಮ ಅರಿವಿಗೆ ಅವನು ದಕ್ಕಬೇಕಾದದ್ದು ಕವಿಯಾಗಿ ಎಷ್ಟು ಮುಖ್ಯವೋ, ಕವಿಯಾ ಗುವಲ್ಲಿನ ಹಿಂದಿನ ಶ್ರಮವನ್ನು ಅರಿಯುವುದರಲ್ಲಿ! ಸುಮ್ಮನೆ ಬೇಡನೊಬ್ಬ ಮಹರ್ಷಿಯಾದುದ್ದಲ್ಲ. ಮಹರ್ಷಿ ಯಾದ ಮೇಲೆ ಅವನ ಮನಸ್ಸು ಕ್ರೌಂಚದ ಉದ್ವೇಗದ ಅಳಲಿಗೆ ಮಿಡಿಯಿತು; ನೋಯಿತು; ಸಿಟ್ಟುಗೊಂಡಿತು. ತನ್ನ ಹಿಂದಿನ ವ್ಯಾಧತ್ವವನ್ನು ಸಂಪೂರ್ಣವಾಗಿ ಕಳಚಿಕೊಳ್ಳಲು ಅವನಿಂದ ಸಾಧ್ಯವಾಗದೇ ಹೋಯಿತು. ಶಪಿಸಿಯೇ ಬಿಟ್ಟ. ಶೋಕವು ಶ್ಲೋಕವಾಯಿತು.

ಅಹಂ ಕಳಚಿತು. ಎಲ್ಲ ಜೀವರಾಶಿಗಳೂ ತನ್ನಂತೆಯೇ ಎಂದು ಭಾವಿಸಿದ ಅವನ ಮನಸ್ಸು ಕ್ರೌಂಚಕ್ಕೆ ಹೇಗೆ ಮಿಡಿಯಿತೋ ಹಾಗೆ ಸೀತೆಯ ವಿರಹಕ್ಕೂ ಮಿಡಿ ಯಿತು, ಮಣಿಯಿತು. ಸ್ಥಿತಪ್ರಜ್ಞನಾಗಿಯೂ ಪ್ರಜ್ಞೆದ ಅನುಕ್ರಮಿಸಿದ ವಾಲ್ಮೀಕಿ ಕವಿಯಾದ. ಮಹರ್ಷಿಯೆನಿಸಿದ. ಅವನು ಕವಿಯಾದ್ದರಿಂದ ರಾಮಾಯಣ ನಮಗೆ ದೊರೆಯಿತು. ಮಹರ್ಷಿಯಾದ್ದರಿಂದ ಭಾರತೀಯ ಮೌಲ್ಯಗಳು ಔನ್ನತ್ಯದ ಪ್ರಮಾಣದಲ್ಲಿ ನಮಗೆ ದೊರಕಿತು. ಇದು ಈ ನೆಲದ ಪುಣ್ಯ. ಅವನ ವೇದನೆ-ಸಂವೇದನೆಯಲ್ಲಿ ರಾಮಾಯಣ ಹುಟ್ಟಿತು. ಇದು ಸೌಭಾಗ್ಯವಲ್ಲದೇ ಮತ್ತೇನು?

ಮಾನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀ ಸಮಾಃ|
ಯತ್ ಕ್ರೌಂಚ ಮಿಥುನಾದೇಕಮವಽಃ ಕಾಮಮೋಹಿತಂ||

ಋಷಿಯೊಬ್ಬ ಕವಿಯಾದದ್ದು ಶೋಕದ ಮೂಲಕ. ಶ್ಲೋಕದ ಉದ್ಗಾರದ ಮೂಲಕ. ಹೃದಯಾಂತರಾಳದ ಸುಪ್ತ ಪ್ರಜ್ಞೆ ಸುಪ್ತ ಕವಿತ್ವ ಹೊರಬಂದು ತನ್ನ ಗೂಡನ್ನು (ಕಾವ್ಯವನ್ನು) ಕಟ್ಟಿಕೊಳ್ಳಬೇಕಾದರೆ ಮನಸ್ಸು ಬತ್ತಲೆಯಾಗಬೇಕು. ಹೊರಗಿನ ಕ್ರಿಯೆಗೆ ಸ್ಪಂದಿಸುವ ಋಷಿಯ ಮನಸ್ಸು ಆ ಕ್ಷಣದಲ್ಲಿ ಗೊತ್ತಿಲ್ಲದೇ ಹುಟ್ಟಿದ, ಅಥವಾ ನಿರೀಕ್ಷಿತವಲ್ಲದ್ದು ಕಣ್ಣ ಮುಂದೆ ಘಟಿಸಿದಾಗ ಹುಟ್ಟಿದ್ದು ಅಥವಾ ಹುಟ್ಟುವುದು ಬತ್ತಲೆಯಾದಾಗಲೇ! ಬೇಡ ಕವಿಯಾಗಿ ಬತ್ತಲೆಯಾದ.

ಬತ್ತಲೆಯಾದ್ದರಿಂದ ಕಾವ್ಯ ಹುಟ್ಟಿತು. ತನ್ಮೂಲಕ ಈ ನೆಲದ ಪುಣ್ಯವೆಂಬಂತೆ ರಾಮ ಸಿಕ್ಕಿದ. ರಾಮಾಯಣ ಸಿಕ್ಕಿತು. ಭಾರತೀಯತ್ವ ಸಾಯದೇ ಊರ್ಜಿತ ಗೊಂಡಿತು. ರಾಮಾಯಣದಂಥ ಮಹಾಕಾವ್ಯದಿಂದ ಕಾಣಬೇಕಾದುದು ಇಂಥ ದರ್ಶನಗಳನ್ನೇ! ಕ್ರೌಂಚದ ವಿರಹ ಸೀತೆಯ ವಿರಹವನ್ನು ನೆನಪಿಸಿರಬೇಕು. ರಾಮ ಕಥೆ ಕವಿಯಲ್ಲಿ ಜಿನುಗಿರಬೇಕು. ಇಲ್ಲಿ ಕ್ರೌಂಚ ವಿರಹದ ಸಂದರ್ಭದಲ್ಲೇ ಅಲ್ಲಿ ರಾವಣನಿಂದ ಸೀತೆಯ ಅಪಹರಣವೂ ಆಗಿರಬೇಕು. ಕವಿ ಮನಸ್ಸು ಮಿಡಿದದ್ದು ಆ ಹಿನ್ನಲೆಯಲ್ಲೇ ಇರಬೇಕು! ಅಂತೂ ಮಹಾಕಾವ್ಯವೊಂದರ ಹುಟ್ಟು ಹುಟ್ಟಲು ಬೇಡನೊಬ್ಬ ಕವಿಯಾಗಬೇಕು ಎನ್ನುವಷ್ಟು ಗಾಢ ಸಂವೇದನೆಯೇ ವಾಲ್ಮೀಕಿಯ ಹೃದಯವಾಗಿತ್ತು. ಅಂದರೆ ಜೇನುಹುಳುವಿನ ಮೈಯ ಮೃದುತ್ವದಂತೆ ದ್ರವಿಸುವ ಜಿನುಗು ವಾಲ್ಮೀಕಿಯಲ್ಲಿ ಮೊದಲೇ ಅಂತರ್ಗತವಾಗಿತ್ತು. ಕವಿ ಹೃದಯದ ವಾಲ್ಮೀಕಿ ಕವಿಯಾದದ್ದು ನಮ್ಮ ಪುಣ್ಯ!

Leave a Reply

Your email address will not be published. Required fields are marked *

error: Content is protected !!