Tuesday, 3rd December 2024

Ganesh Chaturthi 2024: ಹಬ್ಬದ ಟ್ರೆಡಿಷನಲ್‌ ಗೌರಿ ಲುಕ್‌‌‌ಗೆ ಇಲ್ಲಿವೆ 5 ಸ್ಟೈಲಿಂಗ್‌ ಐಡಿಯಾ!

Ganesh Chaturthi 2024

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಗೌರಿ-ಗಣೇಶ ಹಬ್ಬಕ್ಕೆ ಟ್ರೆಡಿಷನಲ್‌ ಲುಕ್‌ ನಿಮ್ಮದಾಗಿಸಿಕೊಳ್ಳಿ. ಹಾಗೆನ್ನುತ್ತಾರೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಹೌದು, ಫೆಸ್ಟೀವ್‌ ಸೀಸನ್‌ನಲ್ಲಿ ವೆಸ್ಟರ್ನ್‌ ಲುಕ್‌ ಸೈಡಿಗೆ ಸರಿಯುತ್ತದೆ. ಆಯಾ ಹಬ್ಬಕ್ಕೆ ಪೂರಕವಾಗುವಂತೆ, ಎಥ್ನಿಕ್‌ ಲುಕ್‌ ನೀಡುವಂತಹ ಸ್ಟೈಲಿಂಗ್‌ ಕಾನ್ಸೆಪ್ಟ್ ಟ್ರೆಂಡಿಯಾಗುತ್ತದೆ ಎನ್ನುತ್ತಾರೆ. ಇನ್ನು, ಪ್ರತಿ ಹೆಣ್ಣು ಮಕ್ಕಳು ಸಾಂಪ್ರದಾಯಿಕವಾಗಿ ಆಚರಿಸುವ ಈ ಹಬ್ಬದಂದು ಟ್ರೆಡಿಷನಲ್‌ ಆಗಿ ಕಾಣಿಸಿಕೊಳ್ಳಬೇಕು. ಅದರಲ್ಲೂ ಗೌರಿಯಂತೆ ಸಿಂಗರಿಸಿಕೊಳ್ಳಬೇಕು ಎನ್ನುವ ಮಾಡೆಲ್‌/ನಟಿ ಚಂದನಾ, ಈ ಕುರಿತಂತೆ 5 ಸ್ಟೈಲಿಂಗ್‌ ಐಡಿಯಾಗಳನ್ನು ನೀಡಿದ್ದಾರೆ (Ganesh Chaturthi 2024).

  1. ಟ್ರೆಡಿಷನಲ್‌ ಉಡುಪುಗಳಿಗೆ ಆದ್ಯತೆ: ಹಬ್ಬದ ಸಮಯದಲ್ಲಿ ಆದಷ್ಟೂ ಸಂಪ್ರದಾಯಕ್ಕೆ ಸಾಥ್‌ ನೀಡುವಂತಹ ಟ್ರೆಡಿಷನಲ್‌ ಉಡುಗೆ ತೊಡುಗೆಗಳಿಗೆ ಆದ್ಯತೆ ನೀಡಿ. ಮಕ್ಕಳಾದಲ್ಲಿ ಉದ್ದ-ಲಂಗ, ದಾವಣಿ-ಲಂಗ ಹಾಗೂ ಎಥ್ನಿಕ್‌ವೇರ್‌ಗಳನ್ನು ಧರಿಸಬಹುದು. ಇದೀಗ ಮಕ್ಕಳಿಗೆ ಮಿನಿ ರೆಡಿ ಸೀರೆಗಳು ದೊರೆಯುತ್ತಿವೆ.
  2. ಗ್ರ್ಯಾಂಡ್‌ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಳ್ಳಿ: ಯುವತಿಯರು ಹಾಗೂ ಮಹಿಳೆಯರಾದಲ್ಲಿ ಹಬ್ಬದಂದು ಹೊಸತು ಅಥವಾ ನಿಮ್ಮ ವಾರ್ಡ್ರೋಬ್‌ನಲ್ಲಿರುವ ಗ್ರ್ಯಾಂಡ್‌ ರೇಷ್ಮೆ ಸೀರೆಯನ್ನು ಆಯ್ಕೆ ಮಾಡಿ, ಉಡಿ. ಆದಷ್ಟೂ ಟ್ರೆಡಿಷನಲ್‌ ಲುಕ್‌ ನೀಡುವಂತಹ ಬಾರ್ಡರ್‌ ಅಥವಾ ಬುಟ್ಟಾ ಡಿಸೈನ್‌ ಹೊಂದಿರುವಂತಹ ಸಿಲ್ಕ್ ಸೀರೆಗಳನ್ನು ಆಯ್ಕೆ ಮಾಡಿ. ಆಗ ಕಂಪ್ಲೀಟ್‌ ದೇಸಿ ಲುಕ್‌ ನಿಮ್ಮದಾಗುತ್ತದೆ. ಡ್ರೇಪಿಂಗ್‌ ಮಾಡುವಾಗ ಒಂದು ಪಿನ್‌ ಸೆರಗು ಹಾಕುವ ಬದಲು ನೆರಿಗೆ ಮೇಲೆ ನೆರಿಗೆ ಬರುವಂತೆ ಸೆರಗನ್ನು ಮಾಡಿ. ಗ್ಲಾಮರ್‌ ಲುಕ್‌ ನೀಡುವುದು ಬೇಡ. ಸ್ಲೀವ್‌ಲೆಸ್‌ ಬ್ಲೌಸ್‌ ಆವಾಯ್ಡ್ ಮಾಡಿ. ಡಿಸೈನರ್‌ ಬ್ಲೌಸ್‌ ಧರಿಸಿ.
  3. ಆ್ಯಂಟಿಕ್‌ ಜ್ಯುವೆಲರಿ ಧರಿಸಿ: ಹಬ್ಬದ ರೇಷ್ಮೆ ಸೀರೆಗೆ ಯಾವುದೇ ಕಾರಣಕ್ಕೂ ಜಂಕ್‌ ಹಾಗೂ ಫಂಕಿ ಅಥವಾ ಫ್ಯಾಷನ್‌ ಜ್ಯುವೆಲರಿಗಳನ್ನು ಧರಿಸಬೇಡಿ. ಟ್ರೆಡಿಷನಲ್‌ ಲುಕ್‌ಗಾಗಿ ಹಳೆಯ ಕಾಲದ ವಿನ್ಯಾಸ ಹೊಂದಿರುವ ಆ್ಯಂಟಿಕ್‌ ಡಿಸೈನ್‌ನ ಜ್ಯುವೆಲರಿ ಸೆಟ್‌ ಧರಿಸಿ. ಸೀರೆಗೆ ಮೆರಗು ನೀಡುವ ಕಮರ್‌ಬಾಂದ್‌ ಅಥವಾ ಬಂಗಾರ ವರ್ಣದ ಸೊಂಟದಪಟ್ಟಿಯನ್ನು ಧರಿಸಿ. ಇದು ಹಬ್ಬದ ಲುಕ್‌ಗೆ ಸಾಥ್‌ ನೀಡುತ್ತದೆ.
  4. ಟ್ರೆಡಿಷನಲ್‌ ಮೇಕಪ್‌ ಹೀಗಿರಲಿ: ಹಬ್ಬದ ಮೇಕಪ್‌ನಲ್ಲಿ ಯಾವುದೇ ಕಾರಣಕ್ಕೂ ಸ್ಮೋಕಿ ಲುಕ್‌ ನೀಡುವಂತಹ ಮೇಕಪ್‌ ಅಥವಾ ಫಂಕಿ ಲುಕ್‌ ನೀಡುವಂತಹ ವೈಬ್ರೆಂಟ್‌ ಮೇಕಪ್‌ ಇರಬಾರದು. ಅತಿ ಮುಖ್ಯವಾಗಿ ಕಣ್ಣಿಗೆ ಕಾಡಿಗೆ, ಹಣೆಗೆ ಅಗಲವಾದ ಬಿಂದಿ, ಅಗತ್ಯವಿರುವಷ್ಟು ಲಿಪ್‌ಸ್ಟಿಕ್‌ ಹಚ್ಚಬೇಕು. ಇವುಗಳೊಂದಿಗೆ ಕೈ ತುಂಬಾ ಗಾಜಿನ ಬಳೆಗಳನ್ನು ಧರಿಸಿದಲ್ಲಿ, ನೋಡಲು ಆಕರ್ಷಕವಾಗಿ ಕಾಣಿಸುವುದು.
  5. ದೇಸಿ ಹೇರ್‌ಸ್ಟೈಲ್‌ ಮಾಡಿ ನೋಡಿ: ದೇಸಿ ಲುಕ್‌ಗೆ ಕಂಪ್ಲೀಟ್‌ ಸಾಥ್ ನೀಡುವಂತಹ ಕೂದಲ ವಿನ್ಯಾಸ ಮಾಡಿ. ಉದಾಹರಣೆಗೆ., ಉದ್ದದ ಜಡೆ ಹೆಣೆದು, ಇಲ್ಲವೇ ಚವರಿ –ಕುಚ್ಚು ಹಾಕಿಕೊಂಡು ಹೂವು ಮುಡಿಯಿರಿ ಅಥವಾ ಜಡೆನಾಗರದಂತಹ ಕೂದಲ ಅಭರಣ ಧರಿಸಿ. ಬನ್‌ ಹೇರ್‌ಸ್ಟೈಲ್‌ ಮಾಡಿದಲ್ಲಿ, ಮಲ್ಲಿಗೆ ದಿಂಡನ್ನು ಮುಡಿಯಿರಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ: Ganesh Chaturthi 2024: ಫೆಸ್ಟಿವ್‌ ಸೀಸನ್‌‌ನಲ್ಲಿ ಡಿಸೈನರ್‌ವೇರ್‌‌‌ಗಳ ಮೇಲೆ ಮೂಡಿದ ಗಣೇಶನ ಚಿತ್ತಾರ!