ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pope Francis: ರೋಮ್‌ನ ಚರ್ಚ್​​ನಲ್ಲಿ ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ; ಅಂತಿಮ ನಮನ ಸಲ್ಲಿಸಿದ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು

ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯನ್ನು ಅವರ ನೆಚ್ಚಿನ ರೋಮ್‌ನ ಚರ್ಚ್ ಸಾಂಟಾ ಮಾರಿಯಾ ಮ್ಯಾಗಿಯೋರ್ ಬೆಸಿಲಿಕಾದಲ್ಲಿ ನೆರವೇರಿಸಲಾಯಿತು. ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಶನಿವಾರ (ಏ. 26) ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ ವ್ಯಾಟಿಕನ್‌ ಸಿಟಿಯ ಸೇಂಟ್ ಪೀಟರ್ಸ್ ಬೆಸಿಲಿಕಾದ ಮುಂಭಾಗದ ಬರೊಕ್ ಪ್ಲಾಜಾದಲ್ಲಿ ಪ್ರಾರಂಭವಾಯಿತು.

ರೋಮ್‌ನ ಚರ್ಚ್​​ನಲ್ಲಿ ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ

Profile Ramesh B Apr 26, 2025 11:02 PM

ವ್ಯಾಟಿಕನ್‌ ಸಿಟಿ: ಪೋಪ್ ಫ್ರಾನ್ಸಿಸ್ (Pope Francis) ಅವರ ಅಂತ್ಯಕ್ರಿಯೆಯನ್ನು ಅವರ ನೆಚ್ಚಿನ ರೋಮ್‌ನ ಚರ್ಚ್ ಸಾಂಟಾ ಮಾರಿಯಾ ಮ್ಯಾಗಿಯೋರ್ ಬೆಸಿಲಿಕಾದಲ್ಲಿ ನೆರವೇರಿಸಲಾಯಿತು. ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಶನಿವಾರ (ಏ. 26) ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ ವ್ಯಾಟಿಕನ್‌ ಸಿಟಿಯ ಸೇಂಟ್ ಪೀಟರ್ಸ್ ಬೆಸಿಲಿಕಾದ ಮುಂಭಾಗದ ಬರೊಕ್ ಪ್ಲಾಜಾದಲ್ಲಿ ಪ್ರಾರಂಭವಾಯಿತು. ಅವರ ಅಭಿಲಾಷೆಯಂತೆ ರೋಮ್‌ನ ಸಾಂಟಾ ಮಾರಿಯಾ ಮ್ಯಾಗಿಯೋರ್ ಬೆಸಿಲಿಕಾದಲ್ಲಿ ಸಮಾಧಿ ಮಾಡಲಾಯಿತು. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸೇರಿದಂತೆ ವಿಶ್ವದ ಅನೇಕ ನಾಯಕರು ಭಾಗವಹಿಸಿದರು.

ಪೋಪ್ ಫ್ರಾನ್ಸಿಸ್ ಅವರ ಶವಪೆಟ್ಟಿಗೆಯನ್ನು ವ್ಯಾಟಿಕನ್‌ನಿಂದ ಬೆಸಿಲಿಕಾಕ್ಕೆ ತರುವಾಗ ಬೀದಿಗಳಲ್ಲಿ ಸಾಲುಗಟ್ಟಿ ನಿಂತಿದ್ದ ಲಕ್ಷಾಂತರ ಜನರು ಅಂತಿಮ ನಮನ ಸಲ್ಲಿಸಿದರು. ರೋಮ್ ಚರ್ಚ್ ಒಳಗಿನ ಅಂತ್ಯಕ್ರಿಯೆ ಬಹಳ ಖಾಸಗಿ ಕಾರ್ಯಕ್ರಮವಾಗಿದ್ದು, ಅವರ ಹತ್ತಿರದವರಿಗೆ ಮಾತ್ರ ಗೌರವ ಸಲ್ಲಿಸಲು ಅವಕಾಶ ಮಾಡಿಕೊಡಲಾಯಿತು.



ಅಂತ್ಯಕ್ರಿಯೆಯಲ್ಲಿ ಸುಮಾರು 2,00,000 ಜನರು ಭಾಗವಹಿಸಿದ್ದು, ಇಟಲಿ ಮತ್ತು ವ್ಯಾಟಿಕನ್ ಸಿಟಿಯ ಅಧಿಕಾರಿಗಳು ಸೂಕ್ತ ಭದ್ರತಾ ಒದಗಿಸಿದರು. 2013ರಲ್ಲಿ ಪೋಪ್ 16ನೇ ಬೆನೆಡಿಕ್ಟ್ ರಾಜೀನಾಮೆಯ ನಂತರ ಪೋಪ್‌ ಫ್ರಾನ್ಸಿಸ್ ಅಧಿಕಾರ ವಹಿಸಿಕೊಂಡಿದ್ದರು. ಪೋಪ್ ಫ್ರಾನ್ಸಿಸ್ ಅವರು ಏ. 21ರಂದು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು.

ಈ ಸುದ್ದಿಯನ್ನೂ ಓದಿ: Pope Francis: ಪೋಪ್ ಫ್ರಾನ್ಸಿಸ್ ವಿಧಿವಶ; ಮುಂದಿನ ಪೋಪ್‌ ಆಯ್ಕೆ ಹೇಗೆ? ಇಲ್ಲಿದೆ ವಿವರ



ಭಾರತದ ನಿಯೋಗ

ರಾಷ್ಟ್ರಪತಿ ದ್ರೌಪದಿ ಮುರ್ಮು ಜತೆಗೆ ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಮತ್ತು ಗೋವಾ ವಿಧಾನಸಭೆಯ ಉಪ ಸ್ಪೀಕರ್ ಜೋಶುವಾ ಡಿʼಸೋಜಾ ಅವರನ್ನೊಳಗೊಂಡ ಭಾರತದ ನಿಯೋಗ ಪೋಪ್‌ ಫ್ರಾನ್ಸಿಸ್ ಅವರಿಗೆ ಅಂತಿಮ ನಮನ ಸಲ್ಲಿಸಿತು.

ಲ್ಯಾಟಿನ್ ಅಮೆರಿಕಾದ ಮೊದಲ ಧರ್ಮಗುರು ಮತ್ತು ಜೆಸ್ಯೂಟ್ ಪಂಥದ ಮೊದಲಿಗರಾದ ಪೋಪ್ ಫ್ರಾನ್ಸಿಸ್ ಅವರು ಸರಳ ಅಂತ್ಯಕ್ರಿಯೆಯ ವಿಧಿ ನಡೆಸುವಂತೆ ಈ ಹಿಂದೆಯೇ ಮನವಿ ಮಾಡಿದ್ದರು. ಅವರ ಇಚ್ಛೆಗೆ ಅನುಗುಣವಾಗಿ, ಅವರ ದೇಹವನ್ನು ಒಂದೇ ಮರದ ಶವಪೆಟ್ಟಿಗೆಯಲ್ಲಿ ಇರಿಸಲಾಯಿತು. ಹೀಗಾಗಿ ಸಾಂಪ್ರದಾಯಿಕವಾಗಿ ಬಳಸಲಾಗುತ್ತಿದ್ದ ಸೈಪ್ರಸ್, ಸೀಸ ಮತ್ತು ಓಕ್‌ನ ಮೂರು ಪದರಗಳ ಶವಪೆಟ್ಟಿಗೆಗಳನ್ನು ತ್ಯಜಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಪೋಪ್ ನಿಧನದ ನಂತರ ಅಂತ್ಯಕ್ರಿಯೆಯ ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸುತ್ತಿರುವ ಹೋಲಿ ರೋಮನ್ ಚರ್ಚ್‌ನ ಕ್ಯಾಮರ್ಲೆಂಗೊ ಕಾರ್ಡಿನಲ್ ಕೆವಿನ್ ಫಾರೆಲ್ ಈ ವಿಧಿ ವಿಧಾನಗಳ ನೇತೃತ್ವ ವಹಿಸಿದರು.

ಅರ್ಜೆಂಟೀನಾದಲ್ಲಿ ಜಾರ್ಜ್ ಮಾರಿಯೋ ಬರ್ಗೊಗ್ಲಿಯೊ ಆಗಿ ಜನಿಸಿದ ಫ್ರಾನ್ಸಿಸ್ 2013ರ ಮಾರ್ಚ್ 13ರಂದು ತಮ್ಮ 76 ನೇ ವಯಸ್ಸಿನಲ್ಲಿ ಪೋಪ್ ಆಗಿ ಆಯ್ಕೆಯಾಗಿದ್ದರು. ಇವರು ಬಡವರ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಿದ್ದ ಜನಮನ್ನಣೆ ಗಳಿಸಿದ್ದ ಪೋಪ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.