Kannada Sahitya Sammelana: ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ; ಕಸಾಪ ಸಭೆಯಲ್ಲಿ ತೀರ್ಮಾನ
Kannada Sahitya Sammelana: ಬಳ್ಳಾರಿ, ಕೋಲಾರ, ಯಾದಗಿರಿ ಸೇರಿ ಹೊಸ ಜಿಲ್ಲೆಗಳು ಸಾಹಿತ್ಯ ಸಮ್ಮೇಳನ ಆತಿಥ್ಯಕ್ಕೆ ಕೋರಿಕೆ ಸಲ್ಲಿಸಿದವು. ಆದರೆ, ಅಂತಿಮವಾಗಿ ಬಳ್ಳಾರಿ ಜಿಲ್ಲೆಗೇ ಸಮ್ಮೇಳನದ ಅತಿಥ್ಯ ನೀಡಲು ಎಲ್ಲ ಜಿಲ್ಲಾ ಸಮಿತಿಗಳು ನಿರ್ಧರಿಸಿವೆ.
Prabhakara R
December 22, 2024
ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (Kannada Sahitya Sammelana) ನಡೆಯುತ್ತಿದೆ. ಮೂರನೇ ದಿನವಾದ ಭಾನುವಾರ (ಡಿ. 22) ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬೀಳಲಿದೆ. ಈ ನಡುವೆ ಮುಂದಿನ ಬಾರಿಯ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ಆಯೋಜಿಸಲು ಶನಿವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ದೆಹಲಿ ಸೇರಿ ಮೂರು ಸ್ಥಳಗಳ ಹೆಸರು ಚರ್ಚೆಗೆ ಬಂದಿತು. ಅಂತಿಮವಾಗಿ ಗಡಿನಾಡು ಬಳ್ಳಾರಿಗೆ ಕನ್ನಡ ಸಾಹಿತ್ಯ ಜಾತ್ರೆ ನಡೆಸುವ ಅವಕಾಶ ಸಿಕ್ಕಿದೆ.
ಶನಿವಾರ ಮಂಡ್ಯದ ಖಾಸಗಿ ಹೋಟೆಲ್‌ನಲ್ಲಿ ನಡೆದ ಎಲ್ಲಾ ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ ಪ್ರತಿನಿಧಿಗಳ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳವನ್ನು ನಿಗದಿ ಮಾಡಲಾಗಿದೆ. ಆದರೆ ದಿನಾಂಕವನ್ನು ಇನ್ನೂ ಅಂತಿಮಗೊಳಿಸಿಲ್ಲ. ಈ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಚಿಕ್ಕಮಗಳೂರು, ನವದೆಹಲಿ ಮತ್ತು ಬಳ್ಳಾರಿಯ ಹೆಸರುಗಳು ಕೇಳಿ ಬಂದವು. ವಿವರವಾಗಿ ಚರ್ಚಿಸಿದ ಬಳಿಕ ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ.
88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆತಿಥ್ಯ ಪಡೆಯುವ ಮೂಲಕ ಬಳ್ಳಾರಿ 68 ವರ್ಷಗಳ ಬಳಿಕ ಕನ್ನಡ ಸಾಹಿತ್ಯ ಜಾತ್ರೆಯ ಸಾರಥ್ಯ ವಹಿಸಲಿದೆ. 1926, 1938 ಮತ್ತು 1958ರಲ್ಲಿ ಬಳ್ಳಾರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. 1958ರಲ್ಲಿ ಬಳ್ಳಾರಿ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿ. ಕೃ. ಗೋಕಾಕ್ ಅಧ್ಯಕ್ಷರಾಗಿದ್ದರು. ಈಗ 68 ವರ್ಷಗಳ ಬಳಿಕ ಪುನಃ ಬಳ್ಳಾರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಮಂಡ್ಯದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇನ್ನು ಈ ಬಾರಿ ಮಂಡ್ಯದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಕ್ಕೆ ಕಳೆದ ಎರಡು ದಿನಗಳಿಂದ ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. ದಾಖಲೆ ಪ್ರಮಾಣದಲ್ಲಿ ಸಾಹಿತ್ಯಾಭಿಮಾನಿಗಳು ಸಮ್ಮೇಳನದಲ್ಲಿ ಭಾಗಿಯಾಗುತ್ತಿದ್ದಾರೆ. ಇಂದು ಸಮ್ಮೇಳನಕ್ಕೆ ತೆರೆ ಬೀಳಲಿದೆ.
ಶತಮಾನೋತ್ಸವ ವರ್ಷದ ಕನ್ನಡ ಲೇಖಕರು ಗೋಷ್ಠಿ ಸಂಪನ್ನ
ಮಂಡ್ಯ : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶನಿವಾರ ಸಮಾನಾಂತರ ವೇದಿಕೆ -1ರಲ್ಲಿ ಶತಮಾನೋತ್ಸವ ವರ್ಷದ ಕನ್ನಡ ಲೇಖಕರು ಗೋಷ್ಠಿಯು ಅರ್ಥಪೂರ್ಣವಾಗಿ ನೆರವೇರಿತು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ವಾಂಸರಾದ ಮಲ್ಲೇಪುರಂ ಜಿ ವೆಂಕಟೇಶ್ ಅವರು ಮಾತನಾಡಿ, ಶತಮಾನದ ಸಾಧಕರನ್ನು ನೆನಪು ಮಾಡಿಕೊಳ್ಳುವ ಅವಕಾಶವನ್ನು ಪರಿಷತ್ ಒದಗಿಸಿಕೊಟ್ಟಿದೆ. ಇದು ಕನ್ನಡ ನಾಡಿನ ಪುಣ್ಯ. ಈ ವೇದಿಕೆಯಲ್ಲಿ ಸ್ಮರಣೆಗೊಂಡ ಅವರೆಲ್ಲರೂ ಭುವನದ ಪುರುಷರು ಎಂದರು. ಎಲ್.ಎಸ್. ಶೇಷಗಿರಿ ರಾವ್, ಜಿ.ಎಸ್. ಅಮೂರ, ಕು. ಶಿ ಹರಿದಾಸ ಭಟ್ಟ, ಶಾಂತರಸ, ನಿರಂಜನ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ತರವಾದ ಕೊಡುಗೆ ನೀಡಿದ್ದಾರೆ. ಅವರೆಲ್ಲರೂ ಪ್ರಾತಃಸ್ಮರಣೀಯರು. ಅವರಿಂದ ಕನ್ನಡ ಸಾಹಿತ್ಯ ಲೋಕ ಶ್ರೀಮಂತವಾಗಿದೆ ಎಂದು ನುಡಿದರು.
ಎಲ್ ಎಸ್ ಶೇಷಗಿರಿರಾವ್ ಅವರ ಸಾಹಿತ್ಯ ಸಾಧನೆ ಮತ್ತು ವೈಯಕ್ತಿಕ ಬದುಕಿನ ಬಗ್ಗೆ ಡಾ. ವನಮಾಲ ವಿಶ್ವನಾಥ್ ಪರಿಚಯಿಸಿದರು. ಖ್ಯಾತ ಕಥೆಗಾರ ನಿರಂಜನ ಅವರ ಬದುಕು ಮತ್ತು ಬರಹದ ಕುರಿತು ಮಲ್ಲಿಕಾರ್ಜುನ ಅವರು ಮಾತನಾಡಿದರು. ಕು. ಶಿ ಹರಿದಾಸ ಭಟ್ಟರ ಕುರಿತು ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಮಾತನಾಡಿದರೆ, ವಿಮರ್ಶಕ ಜಿ ಎಸ್ ಅಮೂರ ಅವರ ಒಟ್ಟಾರೆ ಸಾಹಿತ್ಯ ಸಾಧನೆ ಮತ್ತು ವಿಮರ್ಶಾ ಲೋಕಕ್ಕೆ ಅವರು ಕೊಟ್ಟ ಗಮನಾರ್ಹವಾದ ಕೊಡುಗೆಗಳ ಬಗ್ಗೆ ಶ್ಯಾಮಸುಂದರ್ ಮಾತನಾಡಿದರು.
ಇನ್ನು ಶಾಂತರಸ ಅವರನ್ನು ಅಕ್ಬರ್ ಸಿ ಕಾಲಿಮಿರ್ಚಿ ಅವರು ಸ್ಮರಿಸಿದರು. ವೇದಿಕೆಯಲ್ಲಿ ಖ್ಯಾತ ಸಂಗೀತ ನಿರ್ದೇಶಕರಾದ ದಿವಂಗತ ವಿಜಯ ಭಾಸ್ಕರ್ ಅವರನ್ನೂ ಸ್ಮರಿಸಲಾಯಿತು. ಕನ್ನಡ ಚಲನಚಿತ್ರ ಸಂಗೀತದಲ್ಲಿ ಅವರು ಮಾಡಿದ ವಿಭಿನ್ನ ಪ್ರಯೋಗಗಳ ಕುರಿತು ಎಸ್ ಆರ್ ರಾಮಕೃಷ್ಣ ಅವರು ಅದ್ಭುತವಾಗಿ ಮಾತನಾಡಿದರು. ಜನ ಮಾನಸದಲ್ಲಿ ಉಳಿದಿರುವ ವಿಜಯ ಭಾಸ್ಕರ್ ಹಾಡುಗಳ ಬಗ್ಗೆ ಅವರು ನೀಡಿದ ವಿವರಣೆ ಎಲ್ಲರ ಮೆಚ್ಚುಗೆಗೂ ಪಾತ್ರವಾಯಿತು.