Nelamangala News: ಎಡಿಟಿಂಗ್ ಆಡಿಯೊ ಬಳಸಿ ತೇಜೋವಧೆ; ಪೊಲೀಸರಿಗೆ ಮಹಿಳಾ ಪಿಡಿಒ ದೂರು
Nelamangala News: ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯಿತಿ ಮಹಿಳಾ ಪಿಡಿಒ, ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Prabhakara R
January 11, 2025
ನೆಲಮಂಗಲ: ವೈಯಕ್ತಿಕ ದ್ವೇಷ ಹಾಗೂ ಅನುಸೂಚಿತ ಸಮುದಾಯಕ್ಕೆ ಸೇರಿದ ಅಧ್ಯಕ್ಷರನ್ನು ಅನಾರೋಗ್ಯದ ಕಾರಣ ರಜೆ ಹಾಕಿಸಲು ಸಹಕಾರ ನೀಡದ ಹಿನ್ನೆಲೆ ಕೆಲವರು ಎಡಿಟಿಂಗ್ ಆಡಿಯೊ ಬಳಸಿ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯಿತಿ ಮಹಿಳಾ ಪಿಡಿಒ (Nelamangala News), ಪೊಲೀಸರಿಗೆ ದೂರು ನೀಡಿದ್ದಾರೆ.
ಪಿಡಿಒ ಗೀತಾಮಣಿ ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದವರು. ರವಿನಂದನ್, ಕೃಷ್ಣಮೂರ್ತಿ, ಜಯರಾಮ್ ಎಂಬುವರ ವಿರುದ್ಧ ದೂರು ದಾಖಲಾಗಿದೆ. 3 ವರ್ಷಗಳ ಹಿಂದೆ ಪ್ರದೀಪ್ ಎನ್ನುವ ವ್ಯಕ್ತಿಯೊಡನೆ ಖಾತೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿರುವ ಆಡಿಯೊವನ್ನು ಕೆಲವರು ದುರುದ್ದೇಶಪೂರ್ವಕವಾಗಿ ಎಡಿಟ್ ಮಾಡಿ, ಅದಕ್ಕೆ ತಮ್ಮ ಫೋಟೊ ಮಾರ್ಫಿಂಗ್ ಮಾಡಿ ಬಳಸಿದ್ದಾರೆ. ಅಲ್ಲದೇ ಖಾತೆ ಮಾಡಿಕೊಡಲು ಹಣಕ್ಕೆ ಬೇಡಿಕೆ ಇಟ್ಟಿರುವ ರೀತಿಯಲ್ಲಿ ಎಡಿಟಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ಪಿಡಿಒ ಆರೋಪಿಸಿದ್ದಾರೆ.
ಇತ್ತೀಚಿಗೆ ಅನುಸೂಚಿತ ಸಮುದಾಯಕ್ಕೆ ಸೇರಿದ ಅಧ್ಯಕ್ಷರನ್ನು ಅನಾರೋಗ್ಯದ ಕಾರಣ ರಜೆ ಹಾಕಿಸಲು ಕೆಲವರಿಗೆ ಸಹಕಾರ ನೀಡಲು ಒಪ್ಪದ ಕಾರಣ ಅಲ್ಲಿನ ಕೆಲ ಪ್ರಭಾವಿಗಳು ಪಂಚಾಯತ್ ರಾಜ್ ಇಲಾಖೆಗೆ ಅನೇಕ ಸುಳ್ಳು ದೂರುಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಈಗಾಗಲೇ ಜಿಲ್ಲಾ ಮಟ್ಟದ ತನಿಖಾ ತಂಡ, ಪಿಡಿಒ ಗೀತಾಮಣಿ ಮೇಲಿನ ಆರೋಪದ ಬಗ್ಗೆ ತನಿಖೆ ನಡೆಸಿ ಯಾವುದೇ ಲೋಪದೋಷಗಳು ಕಂಡುಬಂದಿಲ್ಲ, ಹಣಕಾಸಿನ ಅವ್ಯವಹಾರ ಆಗಿಲ್ಲವೆಂದು ಇಲಾಖೆಗೆ ತನಿಖಾ ವರದಿಯನ್ನು ನೀಡಿದೆ. ಆದರೂ ಪಿಡಿಒ ಗೀತಾಮಣಿ ಅವರನ್ನು ತೇಜೋವಧೆ ಮಾಡುತ್ತಿರುವುದು ಸಾರ್ವಜನಿಕವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ನೀಡುವಂತೆ ಸರ್ಕಾರಿ ನೌಕರರು ಒತ್ತಾಯಿಸಿದ್ದಾರೆ.
ದೂರಿನಲ್ಲಿ ಏನಿದೆ?ಪ್ರದೀಪ್ ಎನ್ನುವವರು ಮೂರು ವರ್ಷಗಳ ಹಿಂದೆ ಯಾವುದೋ ಖಾತೆ ವಿಚಾರವಾಗಿ ಕಳಲುಘಟ್ಟ ಗ್ರಾಮ ಪಂಚಾಯತಿಗೆ ಬಂದು ಖಾತೆ ಮಾಡಿ ಕೊಡುವಂತೆ ಕೇಳಿದ್ದು, ನಂತರ ಫೋನ್ ಮಾಡಿ ಯಾವ ದಾಖಲೆ ಬೇಕು ಎಂದು ಕೇಳಿದ್ದರ ಮೇರೆಗೆ ಕೆಲ ದಾಖಲಾತಿಗಳನ್ನು ತರುವಂತೆ ತಿಳಿಸಿದ್ದೆ. ಇದಾದ ಮೂರು ವರ್ಷಗಳ ಬಳಿಕ ನಾನು ಪ್ರದೀಪ್ ಎಂಬ ವ್ಯಕ್ತಿಯೊಡನೆ ಮಾತನಾಡಿದ್ದೆ. ಆದರೆ, ಗೋವೇನಹಳ್ಳಿ ಗ್ರಾಮದ ಕೃಷ್ಣಮೂರ್ತಿ ಎನ್ನುವವರು ಲಂಚದ ರೂಪದಲ್ಲಿ ಹಣ ಕೇಳಿದ್ದೇನೆ ಎನ್ನುವ ರೀತಿಯಲ್ಲಿ ನನ್ನ ಮತ್ತು ಪ್ರದೀಪ್ ನಡುವಿನ ಫೋನ್ ಸಂಭಾಷಣೆಯನ್ನು ಎಡಿಟ್ ಮಾಡಿ, ಚಾಮುಂಡಿ ನ್ಯೂಸ್ ಪಬ್ಲಿಕ್ ಗ್ರೂಪ್, ಪ್ರಜಾ ಟಿವಿ, ಎಂಎಂಎಸ್ ಸಿಎಸ್‌ಸಿ ಡಿಜಿಟಲ್ ವಾಟ್ಸ್‌ಆ್ಯಪ್ ಮಾಧ್ಯಮಗಳಿಗೆ ನೀಡಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಅದೇ ರೀತಿ ಜಯರಾಮ್ ಎನ್ನುವ ವ್ಯಕ್ತಿ ನಾನು ಕಚೇರಿಯಲ್ಲಿ ಕೆಲಸ ಮಾಡುತ್ತಿರುವಾಗ ತೆಗೆದಿದ್ದ ಭಾವಚಿತ್ರವನ್ನು ಮಾರ್ಫಿಂಗ್ ಮಾಡಿ ಎಡಿಟಿಂಗ್ ಆಡಿಯೊ ಹಾಕಿ ಟೈಮ್ಸ್ 9 ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹರಿಬಿಟ್ಟಿದ್ದಾರೆ. ಮತ್ತೊಬ್ಬ ವ್ಯಕ್ತಿ ಪ್ರಜಾಧ್ವನಿ ಟಿವಿ ಯೂಟ್ಯೂಟ್ ಚಾನೆಲ್‌ನಲ್ಲಿ ʼಕಳಲುಘಟ್ಟ ಗ್ರಾ.ಪಂ ಕರ್ಮಕಾಂಡʼ ಎಂಬ ಶೀರ್ಷಿಕೆ ಕೊಟ್ಟು ಹರಿಬಿಟ್ಟಿರುತ್ತಾರೆ. ಇದರಿಂದ ಸರ್ಕಾರಿ ಅಧಿಕಾರಿಯಾದ ನನಗೆ ಆತಂಕಕ್ಕೆ ಕಾರಣವಾಗಿದ್ದು, ವಾಮ ಮಾರ್ಗದ ಮೂಲಕ ಎಡಿಟಿಂಗ್ ವಿಡಿಯೊ ಹರಿಬಿಟ್ಟು ನನ್ನ ತೇಜೋವಧೆ ಮಾಡುವುದರ ಜತೆಗೆ ನನ್ನನ್ನು ಸರ್ಕಾರಿ ಕೆಲಸದಿಂದ ತೆಗೆಸುವ ಹುನ್ನಾರ ಮಾಡಿದ್ದಾರೆ. ತೇಜೋವಧೆ ಮಾಡಿದವರನ್ನು ಠಾಣೆಗೆ ಕರೆಯಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಿಡಿಒ ಮನವಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | Viral Video: ಹಣ ನೀಡಿದರೂ ಫುಡ್ ವ್ಲಾಗರ್‌ಗೆ ಚಹಾ ನೀಡಲು ನಿರಾಕರಿಸಿದ ಮಹಿಳೆ; ಕಾರಣ ಏನ್ ಗೊತ್ತಾ?