Pushpa 2 movie: ಪುಷ್ಪ-2 ಸಿನಿಮಾ ನೋಡುವ ಆತುರ; ರೈಲಿಗೆ ಸಿಲುಕಿ ಅಭಿಮಾನಿ ಸಾವು
Pushpa 2 movie: ದೊಡ್ಡಬಳ್ಳಾಪುರ ನಗರದ ಚಿತ್ರಮಂದಿರಕ್ಕೆ ತೆರಳುವ ವೇಳೆ ಬಾಶೆಟ್ಟಿಹಳ್ಳಿ ಬಳಿ ರೈಲ್ವೆ ಹಳಿ ದಾಟುವ ಸಮಯದಲ್ಲಿ ಎರಡು ರೈಲುಗಳು ಏಕಕಾಲದಲ್ಲಿ ಆಗಮಿಸಿದಾಗ ದುರಂತ ಸಂಭವಿಸಿದೆ.
Prabhakara R
December 6, 2024
ದೊಡ್ಡಬಳ್ಳಾಪುರ: ಅಲ್ಲು ಅರ್ಜುನ್ ಅಭಿಮಾನಿಯೊಬ್ಬ ಪುಷ್ಪ-2 ಸಿನಿಮಾ (Pushpa 2 movie: ಪುಷ್ಪ-2 ಸಿನಿಮಾ ನೋಡಲು ಹೋಗುತ್ತಿದ್ದಾಗ ರೈಲಿಗೆ ಸಿಲುಕಿ ಅಭಿಮಾನಿ ಸಾವು) ನೋಡಲು ಆತುರದಿಂದ ಹೋಗುತ್ತಿದ್ದಾಗ ರೈಲಿಗೆ ಸಿಲುಕಿ ಸಾವಿಗೀಡಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಆಂಧ್ರದ ಶ್ರೀಕಾಕುಳಂ ಮೂಲದ ಪ್ರವೀಣ್ ಮೃತ ದುರ್ದೈವಿ. ರೈಲು ಹಳಿ ದಾಟುವಾಗ ವೇಗವಾಗಿ ಬಂದ ರೈಲಿಗೆ ಸಿಲುಕಿ ಅಭಿಮಾನಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪ್ರವೀಣ್ ಕೆಲಸ ಮಾಡುತ್ತಿದ್ದ. ಅಲ್ಲೇ ಸ್ನೇಹಿತರೊಂದಿಗೆ ರೂಮ್ ಮಾಡಿಕೊಂಡಿದ್ದ. ಗುರುವಾರದ ಸ್ನೇಹಿತರ ಜತೆ ದೊಡ್ಡಬಳ್ಳಾಪುರ ನಗರದ ಚಿತ್ರಮಂದಿರಕ್ಕೆ ತೆರಳುವ ವೇಳೆ ಬಾಶೆಟ್ಟಿಹಳ್ಳಿ ಬಳಿ ರೈಲ್ವೆ ಹಳಿ ದಾಟುವ ಸಮಯದಲ್ಲಿ ಎರಡು ರೈಲುಗಳು ಏಕಕಾಲದಲ್ಲಿ ಆಗಮಿಸಿದ್ದು, ಇದನ್ನರಿಯದೆ ಪ್ರವೀಣ್ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ.
ಸ್ನೇಹಿತರ ಎದುರೇ ಘಟನೆ ನಡೆದಿದ್ದು, ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಹೊರ ಠಾಣೆ ಪೊಲೀಸರು ಭೇಟಿ ಮಾಡಿ ಮೃತದೇಹವನ್ನು ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಈ ಸುದ್ದಿಯನ್ನೂ ಓದಿ | Pushpa 2: ‘ಪುಷ್ಪ 2’ ಸ್ಕ್ರೀನಿಂಗ್ ವೇಳೆ ಚಿತ್ರ ಮಂದಿರದಲ್ಲಿ ರಾಸಾಯನಿಕ ಸಿಂಪಡಣೆ; ಮೂಗು ಮುಚ್ಚಿಕೊಂಡು ಆಚೆಗೆ ಓಡಿದ ಪ್ರೇಕ್ಷಕರು
ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬಕ್ಕೆ ನೆರವಿನ ಭರವಸೆ ನೀಡಿದ ಅಲ್ಲು ಅರ್ಜುನ್
ಹೈದ್ರಾಬಾದ್: ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅಭಿನಯದ ‘ಪುಷ್ಪ-2’ (Pushpa 2) ಚಿತ್ರ ಡಿ. 05ರಂದು ಬಿಡುಗಡೆಗೊಂಡು ಎಲ್ಲಾ ಕಡೆಗಳಲ್ಲಿ ಪ್ರೇಕ್ಷಕರ ಭರ್ಜರಿ ರೆಸ್ಪಾನ್ಸ್ ನೊಂದಿಗೆ ಮುನ್ನುಗ್ಗುತ್ತಿದೆ. ಈ ನಡುವೆ ಡಿ. 04ರಂದು ‘ಪುಷ್ಪ-2’ ಚಿತ್ರದ ವಿಶೇಷ ಪ್ರದರ್ಶನದ (special screening) ಸಂದರ್ಭದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ (Pushpa 2 Stampede) ಓರ್ವ ಮಹಿಳೆ ಮೃತಪಟ್ಟು ಆಕೆಯ ಪುತ್ರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದೀಗ ಈ ಘಟನೆಗೆ ನಟ ಅಲ್ಲು ಅರ್ಜುನ್ ಅವರ ತಂಡ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಘಟನೆಯಲ್ಲಿ ಮೃತ ಮಹಿಳೆಯ ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ನೆರವನ್ನು ಒದಗಿಸುವ ಮತ್ತು ಅವರ ಕುಟುಂಬದವರ ದುಃಖದಲ್ಲಿ ತಾವೂ ಭಾಗಿಗಳಾಗಿದ್ದೇವೆ ಎಂದು ಹೇಳಿಕೊಂಡಿದೆ.
ಹೈದ್ರಾಬಾದ್ ನ (Hyderabad) ಆರ್‌ಟಿಸಿ ಕ್ರಾಸ್ ರಸ್ತೆಯಲ್ಲಿರುವ ಸಂಧ್ಯಾ ಚಿತ್ರಮಂದಿರದಲ್ಲಿ (Sandhya Theatre) ಡಿ.04ರಂದು ಪುಷ್ಪ-2 ಚಿತ್ರದ ಪ್ರಿಮಿಯರ್ ಪ್ರದರ್ಶನದ ಸಂದರ್ಭದಲ್ಲಿ ನಟ ಅಲ್ಲು ಅರ್ಜುನ್ ತನ್ನ ಚಿತ್ರ ತಂಡದ ಜೊತೆ ಸರ್ಪ್ರೈಸ್ ವಿಸಿಟ್ ಮಾಡಿದ್ದರು. ಈ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಟನನ್ನು ನೊಡಲು ಅಭಿಮಾನಿಗಳು ಥಿಯೇಟರ್ ನಲ್ಲಿ ಮುಗಿಬಿದ್ದ ಸಂದರ್ಭದಲ್ಲಿ ಉಂಟಾಗಿದ್ದ ಕಾಲ್ತುಳಿತದಲ್ಲಿ ತನ್ನ ಪತಿ ಮತ್ತು ಪುತ್ರನೊಂದಿಗೆ ಸಿನೆಮಾ ವಿಕ್ಷಿಸಲು ಬಂದಿದ್ದ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದರು ಮತ್ತು ಆಕೆತ ಪುತ್ರನೂ ಕಾಲ್ತುಳಿತಕ್ಕೆ ಸಿಲುಕಿ ಗಾಯಗೊಂಡು ಇದೀಗ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ವರದಿಗಳ ಪ್ರಕಾರ, ಇಲ್ಲಿ ಚಿತ್ರ ವೀಕ್ಷಿಸಲೆಂದು ಸೇರಿದ್ದ ನೂರಾರು ಪ್ರೇಕ್ಷಕರು ಮತ್ತು ನಟನ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಫೊಟೋ ಕ್ಲಿಕ್ಕಿಸಲು ಚಿತ್ರಮಂದಿರದ ಮುಖ್ಯ ಗೇಟ್ ಬಳಿಗೆ ಒಮ್ಮಿಂದೊಮ್ಮೆಲೇ ನುಗ್ಗಿದ ಕಾರಣ ಭಾರೀ ಪ್ರಮಾಣದಲ್ಲಿ ಕಾಲ್ತುಳಿತ ಉಂಟಾಗಿತ್ತು. ಈ ಸಂದರ್ಭದಲ್ಲಿ ಜನರನ್ನು ಚದುರಿಸಲು ಸ್ಥಳದಲ್ಲಿ ಕರ್ತವ್ಯನಿರತ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು.
ಈ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಡಿ.5ರ ಗುರುವಾರದಂದು ಪ್ರತಿಕ್ರಿಯೆ ನೀಡಿರುವ ನಟ ಅಲ್ಲು ಅರ್ಜುನ್ ಅವರ ತಂಡ, ಈ ಘಟನೆಯನ್ನು ನಿಜವಾಗಿಯೂ ‘ದುರದೃಷ್ಟಕರ’ ಎಂದು ಬಣ್ಣಿಸಿದೆ. ತೆಲುಗು ಸ್ಕ್ರೈಬ್ ವರದಿಯ ಪ್ರಕಾರ ಅಲ್ಲು ಅರ್ಜುನ್ ಅವರ ತಂಡ ಈ ಸಂತ್ರಸ್ತ ಕುಟುಂಬಕ್ಕೆ ಅಗತ್ಯ ನೆರವನ್ನು ಒದಗಿಸುವ ಭರವಸೆಯನ್ನೂ ನೀಡಿದೆ.
ಈ ದುರಂತ ಘಟನೆಗೆ ಸಂಬಂಧಿಸಿದಂತೆ ಪುಷ್ಟ-2 ಚಿತ್ರದ ನಿರ್ಮಾಣ ಸಂಸ್ಥೆಯಾಗಿರುವ ಮೈತ್ರಿ ಮೂವಿ ಮೇಕರ್ಸ್ ‘ಎಕ್ಸ್’ (X)ನಲ್ಲಿ ಅಧಿಕೃತ ಹೇಳಿಕೆಯೊಂದನ್ನು ಪ್ರಕಟಿಸಿದ್ದು, ‘ಕಳೆದ ರಾತ್ರಿಯ ಚಿತ್ರ ಪ್ರದರ್ಶನ ಸಂದರ್ಭದಲ್ಲಿ ಉಂಟಾದ ಈ ದುರಂತ ಘಟನೆ ನಿಜವಾಗಿಯೂ ಹೃದಯ ವಿದ್ರಾವಕವಾಗಿದೆ. ಸಂತ್ರಸ್ತ ಕುಟುಂಬ ವರ್ಗದವರ ದುಃಖದಲ್ಲಿ ನಾವೂ ಪಾಲುದಾರರಾಗಿದ್ದೇವೆ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಬಾಲಕನ ಶೀಘ್ರ ಚೇತರಿಕೆಗೆ ನಾವು ಪ್ರಾರ್ಥಿಸುತ್ತೇವೆ’ ಎಂದು ಹೇಳಿದೆ.
“ಈ ಸಂಕಷ್ಟದ ಸಮಯದಲ್ಲಿ ಆ ಸಂತ್ರಸ್ತ ಕುಟುಂಬದ ಜೊತೆ ನಾವಿದ್ದು, ಅವರಿಗೆ ಅಗತ್ಯವಿರುವ ಎಲ್ಲಾ ಸಂಭಾವ್ಯ ನೆರವನ್ನು ನೀಡಲು ನಾವು ಬದ್ಧರಾಗಿದ್ದೇವೆ” ಎಂದೂ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ದುರ್ಘಟನೆಗೆ ಸಂಬಂಧಿಸಿದಂತೆ ಚಿತ್ರದ ನಾಯಕಿ ರಶ್ಮಿಕಾ ಅವರೂ ಪ್ರತಿಕ್ರಿಯಿಸಿದ್ದು, “ಈ ಸುದ್ದಿ ಕೇಳಿ ನನಗೆ ಆಘಾತವಾಗಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Pushpa 2: ಪುಷ್ಪ 2 ಅಬ್ಬರದ ಬೆನ್ನಲ್ಲೇ ಅಲ್ಲು ಅರ್ಜುನ್‌ಗೆ ಕಾನೂನು ಸಂಕಷ್ಟ-ಕೇಸ್ ದಾಖಲು?
ಬಹುನಿರೀಕ್ಷಿತ ತೆಲುಗು ಚಿತ್ರ ಪುಷ್ಪ-2 ರಿಲೀಸ್ ಆ ಒಂದು ಕುಟುಂಬದ ಪಾಲಿಗೆ ಆಘಾತಕಾರಿಯಾಗಿ ಹೋಗಿದೆ. ಈ ಘಟನೆಯಲ್ಲಿ ಹೈದ್ರಾಬಾದ್ ನ ಮಹಿಳೆ ರೇವತಿ ಸಾವನ್ನಪ್ಪಿದ್ದರೆ, ಆಕೆಯ ಪುತ್ರ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ಡಿ.04ರಂದು ರಾತ್ರಿ 10.30ರ ಸುಮಾರಿಗೆ ಸಂಭವಿಸಿದೆ. ಕಾಲ್ತುಳಿತ ಸಂಭವಿಸಿದ ಕೂಡಲೇ ಇದರಲ್ಲಿ ಸಿಲುಕಿ ಗಂಭೀರ ಸ್ಥಿತಿಯಲ್ಲಿದ್ದ 3 ವರ್ಷದ ರೇವತಿ ಹಾಗೂ ಆಕೆಯ ಪುತ್ರನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದಾಳೆ ಮತ್ತು ಆಕೆಯ ಪುತ್ರ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೂ ಆತನ ಸ್ಥಿತಿ ಗಂಭಿರವಾಗಿಯೇ ಇದೆ ಎಂದು ತಿಳಿದು ಬಂದಿದೆ.