Vishwavani 10th anniversary: ವಿಶ್ವೇಶ್ವರ ಭಟ್ ಶ್ರಮ ಸಾರ್ಥಕ; ವಿಶ್ವವಾಣಿ ದಶಕ ಸಂಭ್ರಮಕ್ಕೆ ಶುಭ ಕೋರಿದ ಶಾಸಕ ಎನ್.ಶ್ರೀನಿವಾಸ್
Vishwavani News: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಶಿವಗಂಗೆಯಲ್ಲಿ ನಡೆದ ಗಿರಿಜಾ ಕಲ್ಯಾಣೋತ್ಸವ ಸಮಾರಂಭದಲ್ಲಿ ವಿಶ್ವವಾಣಿ ದಶಮಾನೋತ್ಸವದ ಸಂಭ್ರಮಕ್ಕೆ ಶಾಸಕ ಎನ್. ಶ್ರೀನಿವಾಸ್ ಶುಭ ಹಾರೈಸಿದ್ದಾರೆ.
ನೆಲಮಂಗಲ: ವಿಶ್ವವಾಣಿ ಪತ್ರಿಕೆ ವಸ್ತುನಿಷ್ಠವಾಗಿ ವರದಿಗಳನ್ನು ಪ್ರಕಟಿಸುತ್ತದೆ ಎನ್ನುವುದು ಓದುಗರ ಮನದಾಳದ ಮಾತಾಗಿದೆ. ರಾಜ್ಯದ ಅಭಿವೃದ್ಧಿಗೆ ವಿಶ್ವವಾಣಿ ಪತ್ರಿಕೆ (Vishwavani 10th anniversary) ಸಕಾರಾತ್ಮಕ ವರದಿಗಳನ್ನು ಪ್ರಕಟಿಸುವ ಮೂಲಕ ಜನ ಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಶಾಸಕ ಎನ್. ಶ್ರೀನಿವಾಸ್ ಹೇಳಿದರು.
ತಾಲೂಕಿನ ಶಿವಗಂಗಾ ಗಿರಿಜಾ ಕಲ್ಯಾಣೋತ್ಸವ ಸಮಾರಂಭದಲ್ಲಿ ವಿಶ್ವವಾಣಿ ದಶಮಾನೋತ್ಸವದ ಸಂಭ್ರಮಕ್ಕೆ ಶಾಸಕರು ಶುಭ ಹಾರೈಸಿ ಮಾತನಾಡಿದರು.
ಖ್ಯಾತ ಪತ್ರಕರ್ತ ಹಾಗೂ ವಿಶ್ವವಾಣಿ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ನಡೆದು ಬಂದ ಹಾದಿ ತುಂಬ ಕಠಿಣವಾಗಿತ್ತು. ಛಲ ಬಿಡದ ವಿಕ್ರಮನಂತೆ ದುರ್ಗಮ ಹಾದಿಯಲ್ಲಿ ಸಾಗಿ ಅವರ ಪತ್ರಿಕೆಯು ದಶಕ ದಾಟಿದೆ. ವಿಶ್ವವಾಣಿ ಪತ್ರಿಕೆಯು ತಾಲೂಕಿನ ಅಭಿವೃದ್ಧಿಗೆ ಸಂಬಂಧಿಸಿ ದಿನಕ್ಕೊಂದು ವರದಿ ಪ್ರಕಟಿಸಿ ಜನಪ್ರತಿನಿಧಿಗಳ ಕಣ್ಣು ತೆರೆಸಿದೆ. ಹೀಗಾಗಿಯೇ ಇತ್ತೀಚೆಗೆ ಪತ್ರಿಕೆಯ ಓದುಗರ ಸಂಖ್ಯೆಯು ಹೆಚ್ಚಾಗಿದೆ. ಜತೆಗೆ ಗ್ರಾಮೀಣ ಭಾಗಕ್ಕೆ ಪತ್ರಿಕೆಯ ಪ್ರಸರಣ ಹೆಚ್ಚಾಗಿದ್ದು, ಪತ್ರಿಕಾ ಮೌಲ್ಯವನ್ನು ಎತ್ತಿ ಹಿಡಿದಿದೆ ಎಂದರು.
ಪತ್ರಕರ್ತರು ಸಾಮಾಜಿಕ ಜವಾಬ್ದಾರಿಯನ್ನು ಮರೆಯಬಾರದು. ಮಾಧ್ಯಮಗಳು ಕೇವಲ ಟೀಕೆ ಟಿಪ್ಪಣಿಗಳನ್ನಷ್ಟೇ ಮಾಡಿ ರೋಚಕತೆಯ ಬೆನ್ನು ಬೀಳದೆ ಆಗಿರುವ ಲೋಪಗಳನ್ನು ಎತ್ತಿ ತೋರಿಸುವ ಜತೆಯಲ್ಲಿಯೇ ಅವುಗಳನ್ನು ಸರಿಪಡಿಸಲು ಅಗತ್ಯ ಇರುವೆಡೆ ರಚನಾತ್ಮಕವಾದ ಪರಿಹಾರಗಳನ್ನು ಕೂಡ ಸೂಚಿಸಬೇಕು. ಇದು ಜವಾಬ್ದಾರಿಯುತವಾದ ಪತ್ರಿಕೋದ್ಯಮ ಎಂದು ನಾನು ತಿಳಿದಿದ್ದೇನೆ. ದಶಮಾನೋತ್ಸವ ಆಚರಿಸುತ್ತಿರುವ ವಿಶ್ವವಾಣಿ ಪತ್ರಿಕೆಗೆ ಅಭಿನಂದನೆ ಸಲ್ಲಿಸುತ್ತೇನೆ ಇನ್ನಷ್ಟು ಎತ್ತರಕ್ಕೆ ಬೆಳೆದು ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳ ನಂಬರ್ 1 ಆಗಲಿ, ಬೆಸ್ಟ್ ಆಫ್ ಲಕ್ ಎಂದು ಶುಭ ಕೋರಿದರು.
Shivagange Hill: ಶಿವಗಂಗೆ ಗಿರಿಜಾ ಕಲ್ಯಾಣ ಮಹೋತ್ಸವದಲ್ಲಿ ಮಿಂದೆದ್ದ ಭಕ್ತ ಸಾಗರ
ನೆಲಮಂಗಲ: ತಾಲೂಕಿನ ಶಿವಗಂಗೆಯ ಗಂಗಾಧರೇಶ್ವರ ದೇಗುಲದಲ್ಲಿ ಪ್ರತಿ ವರ್ಷದಂತೆ ಮಕರ ಸಂಕ್ರಮಣದಂದು ಬೆಳಗಿನ ಜಾವ ಸಂಭ್ರಮದಿಂದ ಗಿರಿಜಾ ಕಲ್ಯಾಣ ಮಹೋತ್ಸವ ನೆರವೇರಿಸಲಾಯಿತು. ಮಧ್ಯಾಹ್ನ 3.30 ಗಂಟೆಯಿಂದ 04 ಗಂಟೆಯೊಳಗೆ ಸಲ್ಲುವ ಮಕರ ಲಗ್ನದಲ್ಲಿ ಸಂಪನ್ನವಾಯಿತು.
ಭೂ ಮಟ್ಟದಿಂದ 1600 ಮೀಟರ್ ಎತ್ತರ ಹಾಗೂ ಇಡೀ ಬೆಟ್ಟ 4567 ಅಡಿ ಎತ್ತರದ ಬೆಟ್ಟದ ತುತ್ತ ತುದಿಯಲ್ಲಿರುವ ತೀರ್ಥ ಕಂಬದಲ್ಲಿ ಮಂಗಳವಾರ ಮಧ್ಯಾಹ್ನ 02.39 ಕ್ಕೆ ಸರಿಯಾಗಿ ತೀಥೋದ್ಭವವಾಗಿದ್ದು, ಸಾಕಷ್ಟು ಹೇರಳ ಪ್ರಮಾಣದಲ್ಲಿ ಧಾರೆ ದೈವ ಜಲ ದೊರೆಯಿತು. ಈ ಜಲವನ್ನು ತಂದು ಶಿವ ಮತ್ತು ಗಿರಿಜಾ ಮಾತೆಗೆ ಧಾರೆ ಎರೆದು ನಂತರ ವಿವಾಹ ಮಹೋತ್ಸವ ಮಾಡಲಾಯಿತು.
ಈ ಸುದ್ದಿಯನ್ನೂ ಓದಿ | Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು
ಈ ವೇಳೆ ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ ದಿನ, ಶಿವಗಂಗೆಯಲ್ಲಿ ಹಗಲಿನಲ್ಲಿ ಗಿರಿಜಾ ಕಲ್ಯಾಣ ಮತ್ತು ಗಂಗೋತ್ಪತ್ತಿ ಚೆನ್ನಾಗಿ ಆಗಿರುವುದು ಸಂತಸ ತಂದಿದೆ. ಈ ವರ್ಷ ಮಳೆ-ಬೆಳೆ ಉತ್ತಮವಾಗಿ ಉಂಟಾಗಲಿ ರೈತರು ಸುಭೀಕ್ಷವಾಗಲಿ, ಶಾಸ್ತ್ರೋಕ್ತವಾಗಿ ಗಿರಿಜಾ ಕಲ್ಯಾಣ ನಡೆದಿದೆ. ಕ್ಷೇತ್ರದ ಜನತೆ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಎರಡನೇ ಬಾರಿಗೆ ಶಿವಗಂಗೆ ಗಿರಿಜಾ ಕಲ್ಯಾಣ ವೀಕ್ಷಿಸಿದ್ದೇನೆ, ದಾಸೋಹಕ್ಕೆ ಆರ್ಥಿಕ ನೆರವು, ಉತ್ತಮ ರಾಸುಗಳಿಗೆ ಬಹುಮಾನವನ್ನು ವೈಯಕ್ತಿಕವಾಗಿ ಈ ವರ್ಷ ನೀಡಿ ಸಹಕರಿಸಿದ್ದೇನೆ. ಮುಂದಿನ ವರ್ಷದಲ್ಲಿ ಇನ್ನೂ ಹೆಚ್ಚಿನ ಸಹಕಾರ ವೈಯಕ್ತಿಕವಾಗಿ ನೀಡುತ್ತೇನೆ, ಕ್ಷೇತ್ರದ ಸೇವಕನಾಗಿ ಜನರ ಅಶೋತ್ತರಗಳಿಗೆ ಸ್ಪಂದಿಸುತ್ತೇನೆ, ಹೊನ್ನಾದೇವಿ ಯ ದರ್ಶನ ಮತ್ತು ದೇವಿ ಪ್ರಸಾದ ನೀಡಿದ್ದು ಸಂತಸವಾಗಿದೆ ಎಂದರು.