ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Rain: ಬ್ರ್ಯಾಂಡ್ ಬೆಂಗಳೂರು ಬದಲಾಗಿ ಬೀಚ್‌ ಬೆಂಗಳೂರು ಆಗಿದೆ: ಡಿಸಿಎಂ ಡಿಕೆಶಿ ವಿರುದ್ಧ ಆರ್‌.ಅಶೋಕ್ ಕಿಡಿ

Bengaluru Rain: ಭಾನುವಾರ ರಾತ್ರಿ ಸುರಿದ ನಿರಂತರ ಭಾರಿ ಮಳೆಯಿಂದಾಗಿ ಬೆಂಗಳೂರಿನ ಹಲವಾರು ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿರುವುದರಿಂದ ಅನೇಕ ಕಡೆ ಭಾರಿ ಸಂಚಾರ ದಟ್ಟಣೆ ಉಂಟಾಗಿ, ಸಂಚಾರಕ್ಕೆ ಅಡಚಣೆಯಾಗಿದೆ.

ಬ್ರ್ಯಾಂಡ್ ಬೆಂಗಳೂರು ಬದಲಾಗಿ ಬೀಚ್‌ ಬೆಂಗಳೂರು ಆಗಿದೆ: ಆರ್‌.ಅಶೋಕ್ ಕಿಡಿ

ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಮಳೆ ನೀರು ನಿಂತಿರುವುದರಿಂದ ಪರ್ಯಾಯ ಮಾರ್ಗ ಬಳಸಲು ಸಂಚಾರ ಪೊಲೀಸರು ಸೂಚಿಸಿದ್ದಾರೆ.

Profile Prabhakara R May 19, 2025 2:28 PM

ಬೆಂಗಳೂರು: ರಾಜಧಾನಿಯಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ (Bengaluru Rain) ಹಲವೆಡೆ ರಸ್ತೆಗಳು ಕೆರೆಗಳಂತೆ ಬದಲಾಗಿವೆ. ತಗ್ಗು ಪ್ರದೇಶಗಳ ಮನೆ, ಅಂಗಡಿಗಳಿಗೆ ನೀರು ನುಗ್ಗಿದ್ದರಿಂದ ಜನ ಪರದಾಡುವಂತಾಗಿದೆ. ಇನ್ನು ನಗರದಲ್ಲಿ ಮಳೆ ಅವಾಂತರದ ಬಗ್ಗೆ ವಿಪಕ್ಷ ನಾಯಕ ಆರ್‌.ಅಶೋಕ್‌ ಅವರು ಪ್ರತಿಕ್ರಿಯಿಸಿ, ಬ್ರ್ಯಾಂಡ್ ಬೆಂಗಳೂರು ಬದಲಾಗಿ ಬೀಚ್ ಬೆಂಗಳೂರು ನಿರ್ಮಾಣವಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರು ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ಎಂದು ಕಿಡಿಕಾರಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಆರ್‌.ಅಶೋಕ್‌ ಅವರು, ಬ್ರ್ಯಾಂಡ್ ಬೆಂಗಳೂರು ಮಾಡುತ್ತೇನೆ ಎಂದು ಕನ್ನಡಿಗರಿಗೆ ಬೀಚ್ ಬೆಂಗಳೂರು ನೀಡಿರುವ ಪಾರ್ಟ್ ಟೈಮ್ ಬೆಂಗಳೂರು ಅಭಿವೃದ್ಧಿ ಮಂತ್ರಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ತಮ್ಮ ಸಹೋದರ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಹಾಲು ಒಕ್ಕೂಟ ಚುನಾವಣೆ ಉಸಾಬರಿ ಮುಗಿದಿದ್ದರೆ ದಯವಿಟ್ಟು ಸ್ವಲ್ಪ ಬೆಂಗಳೂರಿನ ಅವಸ್ಥೆ ಕಡೆ ಗಮನ ಹರಿಸಿ ಎಂದು ಆಗ್ರಹಿಸಿದ್ದಾರೆ.



ಈ ಸುದ್ದಿಯನ್ನೂ ಓದಿ | Karnataka Rain: ಈ ಮಳೆ ಟ್ರೇಲರ್‌ ಮಾತ್ರ, ಇನ್ನೂ 5 ದಿನ ಸುರಿಯಲಿದೆ ಸೈಕ್ಲೋನ್‌ ಮಳೆ!

ಸಿಲಿಕಾನ್‌ ಸಿಟಿಯಲ್ಲಿ ಜನ ಜೀವನ ಅಸ್ತವ್ಯಸ್ತ

ಭಾನುವಾರ ರಾತ್ರಿ ಸುರಿದ ನಿರಂತರ ಭಾರಿ ಮಳೆಯಿಂದಾಗಿ ಬೆಂಗಳೂರಿನ ಹಲವಾರು ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ 48 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದೆ. ಕೆಂಗೇರಿಯಲ್ಲಿ ಅತಿ ಹೆಚ್ಚು 132 ಮಿ.ಮೀ. ಮಳೆಯಾಗಿದ್ದು, ನಂತರ ಉತ್ತರ ಬೆಂಗಳೂರಿನ ವಡೇರಹಳ್ಳಿಯಲ್ಲಿ 131.5 ಮಿ.ಮೀ. ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ಮೇಲ್ವಿಚಾರಣಾ ಕೋಶ ವರದಿ ಮಾಡಿದೆ. ಇತರ ಹಲವಾರು ಪ್ರದೇಶಗಳಲ್ಲಿ ರಾತ್ರಿಯಿಡೀ 100 ಮಿಮೀ ಮಳೆಯಾಗಿದೆ.

ಭಾರೀ ಪ್ರಮಾಣದ ನೀರು ರಸ್ತೆಗಳಲ್ಲಿ ನಿಂತಿರುವುದರಿಂದ ಹಲವೆಡೆ ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ. ಇನ್ನು ಬಿರುಗಾಳಿ ಮಳೆ ಅನೇಕ ಕಡೆ ಮರಗಳು ನೆಲಕ್ಕುರುಳಿ ಅವಾಂತರ ಸೃಷ್ಟಿಯಾಗಿದೆ.

ಇನ್ನು ನಗರದ ಹೊರಮಾವು ಬಳಿಯ ಸಾಯಿ ಲೇಔಟ್ ಪ್ರದೇಶ ಜಲಾವೃತವಾಗಿರುವುದರಿಂದ ಸ್ಥಳೀಯ ಶಾಸಕ ಬೈರತಿ ಬಸವರಾಜ್ ಸೋಮವಾರ ಬೆಳಗ್ಗೆ ಜೆಸಿಬಿಯಲ್ಲಿ ತೆರಳಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.

Be

ಇನ್ನು ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಮಳೆ ನೀರು ನಿಂತಿರುವುದರಿಂದ ಪ್ರಯಾಣಿಕರು ಪರ್ಯಾಯ ಮಾರ್ಗವನ್ನು ಬಳಸಲು ಸಂಚಾರ ಪೊಲೀಸರು ಸೂಚಿಸಿದ್ದಾರೆ. ಇನ್ನು ಕಸ್ತೂರಿನಗರ 2ನೇ ಮುಖ್ಯರಸ್ತೆಯಲ್ಲಿ ಮಳೆ ನೀರು ನಿಂತಿರುವುದರಿಂದ ಸದಾನಂದನಗರ - ಬೈಯಪ್ಪನಹಳ್ಳಿ ಮೆಟ್ರೋ ಕಡೆಗೆ ಹೋಗುವ ವಾಹನಗಳ ಸಂಚಾರ ನಿಧಾನಗತಿಯಲ್ಲಿದೆ. ಸಿಂಗಯ್ಯನಪಾಳ್ಯ ಬಳಿ ಮಳೆ ನೀರು ನಿಂತಿರುವುದರಿಂದ ಲೌರಿ ಕಡೆಗೆ ನಿಧಾನಗತಿಯ ಸಂಚಾರವಿದೆ. ಗುರುದ್ವಾರ ಬಳಿ ಮಳೆ ನೀರು ನಿಂತಿರುವುದರಿಂದ ಕಿಂಗ್‌ಸ್ಟನ್ ಕಡೆಗೆ ಸಂಚಾರಕ್ಕೆ ಅಡಚಣೆಯಾಗಿದೆ.

bengaluru Rain (24)

ಅದೇ ರೀತಿ ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾರಿ ಮಳೆ ಬಿದ್ದಿರುವುದರಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ರಸ್ತೆ ಜಲಾವೃತವಾಗಿದ್ದು, ಹೊರ ವರ್ತಲ ರಸ್ತೆಯಲ್ಲಿ ಎಚ್‌ಎಸ್‌ಆರ್ ಕಡೆಗೆ ಹೋಗುವ ಮತ್ತು ಜಯದೇವ ಕಡೆಗೆ ಬರುವ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ.