ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವರ್ಲ್ಡ್‌ ಸ್ಕಿಲ್ಸ್ 2024 ಸ್ಪರ್ಧೆಯ ವಿಜೇತ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ನ ಉದ್ಯೋಗಿಗಳ ಸನ್ಮಾನಿಸಿದ ಕರ್ನಾಟಕ ಸರ್ಕಾರ

ಫ್ರಾನ್ಸ್‌ ನ ಲಿಯಾನ್‌ ನಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ವರ್ಲ್ಡ್‌ ಸ್ಕಿಲ್ಸ್ 2024 ಸ್ಪರ್ಧೆಯಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಸಂಸ್ಥೆಯ ಹತ್ತು ಪ್ರತಿಭಾವಂತ ಉದ್ಯೋಗಿಗಳಿಗೆ ಕರ್ನಾಟಕ ಸರ್ಕಾರವು ಗೌರವ ಸಲ್ಲಿಸಿದೆ.

ವರ್ಲ್ಡ್‌ ಸ್ಕಿಲ್ಸ್ 2024 ಸ್ಪರ್ಧೆಯ ವಿಜೇತರಿಗೆ ಸನ್ಮಾನ

Profile Ashok Nayak Jul 17, 2025 12:20 PM

ಬೆಂಗಳೂರು: ಫ್ರಾನ್ಸ್‌ ನ ಲಿಯಾನ್‌ ನಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ವರ್ಲ್ಡ್‌ ಸ್ಕಿಲ್ಸ್ 2024 ಸ್ಪರ್ಧೆಯಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಸಂಸ್ಥೆಯ ಹತ್ತು ಪ್ರತಿಭಾವಂತ ಉದ್ಯೋಗಿಗಳಿಗೆ ಕರ್ನಾಟಕ ಸರ್ಕಾರವು ಗೌರವ ಸಲ್ಲಿಸಿದೆ. ವಿಧಾನ ಸೌಧದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಆರ್.ಪಾಟೀಲ್ ಅವರು ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ನ ಹಿರಿಯ ಪ್ರತಿನಿಧಿಗಳ ಸಮ್ಮುಖದಲ್ಲಿ ವಿಜೇತರನ್ನು ಸನ್ಮಾನಿಸಿದರು.

ಪ್ರೇಮ್ ವಿ, ಭಾನು ಪ್ರಸಾದ್, ದರ್ಶನ್ ಗೌಡ, ನೆಲ್ಸನ್, ಮೋಹಿತ್ ಎಂಯು, ಹರೀಶ್ ಆರ್, ಹೇಮಂತ್, ಉದಯ್, ರೋಹನ್ ಮತ್ತು ಸುದೀಪ್ ಎಂಬ ಹತ್ತು ಮಂದಿ ಪ್ರತಿಭಾವಂತರು ಗೌರವಕ್ಕೆ ಪಾತ್ರರಾದರು. ಟೊಯೋಟಾ ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ (ಟಿಟಿಟಿಐ) ನಲ್ಲಿ ತರಬೇತಿ ಪಡೆದಿರುವ ಈ ಯುವ ವೃತ್ತಿಪರರು 60ಕ್ಕೂ ಹೆಚ್ಚು ದೇಶಗಳಿಂದ ಸ್ಪರ್ಧಿಗಳ ಜೊತೆ ಸ್ಪರ್ಧಿಸಿ ಅಸಾಧಾರಣ ಸಾಧನೆ ಮಾಡಿದ್ದಾರೆ. ಈ ಪ್ರತಿಯೊಬ್ಬ ಉದ್ಯೋಗಿಯೂ ಇಂಡಿಯಾ ಸ್ಕಿಲ್ಸ್ ಮತ್ತು ವರ್ಲ್ಡ್‌ ಸ್ಕಿಲ್ಸ್ ಸ್ಪರ್ಧೆ 2024ರಲ್ಲಿನ ತಂಡದ ಅದ್ಭುತ ಪ್ರದರ್ಶನಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ.

ಇದನ್ನೂ ಓದಿ: Vishweshwar Bhat Column: ವಿಮಾನ ನಿರ್ವಹಣಾ ತಂತ್ರಜ್ಞರು

ಈ ವರ್ಲ್ಡ್ ಸ್ಕಿಲ್ಸ್ 2024 ಸ್ಪರ್ಧೆಯಲ್ಲಿ ಪ್ರೇಮ್ ವಸಂತ್ ಕುಮಾರ್ ಅವರು ಆಡಿಟಿವ್ ಮ್ಯಾನುಫ್ಯಾಕ್ಚರಿಂಗ್‌ ವಿಭಾಗದಲ್ಲಿ ಎಕ್ಸಲೆನ್ಸ್ ಮೆಡಾಲಿಯನ್ ಪಡೆದರೆ, ಭಾನುಪ್ರಸಾದ್ ಎಸ್‌ಎಂ ಮತ್ತು ದರ್ಶನ್ ಗೌಡ ಸಿಎಸ್ ಅವರು ಮೆಕಾಟ್ರಾನಿಕ್ಸ್‌ ವಿಭಾಗದಲ್ಲಿ ಎಕ್ಸಲೆನ್ಸ್ ಮೆಡಾಲಿಯನ್ ಪಡೆದರು. 700 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಸ್ಪರ್ಧಿಗಳಿಗೆ ಎಕ್ಸಲೆನ್ಸ್ ಮೆಡಾಲಿಯನ್ ನೀಡಲಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ. ಇದರ ಜೊತೆಗೆ ಮೆಕಾಟ್ರಾನಿಕ್ಸ್ ವಿಭಾಗದ ಸ್ಪರ್ಧಿಗಳು ಸುಸ್ಥಿರ ಅಭ್ಯಾಸ ಪ್ರಶಸ್ತಿ ವಿಭಾಗದಲ್ಲಿ ಎರಡನೇ ಸ್ಥಾನವನ್ನು ಗಳಿಸಿದರು. ನೆಲ್ಸನ್, ಮೋಹಿತ್ ಎಂಯು, ಮತ್ತು ಹರೀಶ್ ಆರ್ ಅವರು ಮ್ಯಾನುಫ್ಯಾಕ್ಚರಿಂಗ್ ಟೀಮ್ ಚಾಲೆಂಜ್‌ ನಲ್ಲಿ ರಾಷ್ಟ್ರೀಯ ಚಿನ್ನದ ಪದಕವನ್ನು ಪಡೆದರೆ ಉದಯ್, ಹೇಮಂತ್, ಮತ್ತು ರೋಹನ್ ರಜತ ಪದಕವನ್ನು ಪಡೆದರು. ಸುದೀಪ್ ಅವರು ಮೆಕಾಟ್ರಾನಿಕ್ಸ್ ಮತ್ತು ಕಾರ್ ಪೇಂಟಿಂಗ್ ಕೌಶಲ್ಯಗಳಲ್ಲಿ ಎಕ್ಸಲೆನ್ಸ್ ಮೆಡಾಲಿಯನ್ ಪಡೆದರು. ಕರ್ನಾಟಕ ರಾಜ್ಯ ಸರ್ಕಾರವು ವರ್ಲ್ಡ್‌ ಸ್ಕಿಲ್ಸ್ ಎಕ್ಸಲೆನ್ಸ್ ಮೆಡಾಲಿಯನ್ ವಿಜೇತರಿಗೆ ತಲಾ 5 ಲಕ್ಷ ರೂ. ನಗದು ಬಹುಮಾನ, ರಾಷ್ಟ್ರೀಯ ಮಟ್ಟದ ಚಿನ್ನದ ಪದಕ ವಿಜೇತರಿಗೆ 3 ಲಕ್ಷ ರೂ., ಮತ್ತು ರಜತ ಪದಕ ವಿಜೇತರಿಗೆ 75,000 ರೂ. ನೀಡಿ ಗೌರವಿಸಿತು.

ಕುರಿತು ಮಾತನಾಡಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ಹಣಕಾಸು ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ಜಿ. ಶಂಕರ್ ಅವರು, “ವರ್ಲ್ಡ್‌ ಸ್ಕಿಲ್ಸ್ 2024 ಸ್ಪರ್ಧೆಯಲ್ಲಿ ನಮ್ಮ ಉದ್ಯೋಗಿಗಳು ಮಾಡಿರುವ ಉತ್ಕೃಷ್ಟ ಸಾಧನೆ ಕುರಿತು ನಮಗೆ ಅತೀವ ಹೆಮ್ಮೆ ಇದೆ. ಇದೀಗ ಈ ವಿಜೇತರನ್ನು ಗುರುತಿಸಿ ಪ್ರೋತ್ಸಾಹಿಸಿರುವ ಕರ್ನಾಟಕ ಸರ್ಕಾರಕ್ಕೆ ನಾವು ಧನ್ಯವಾದ ಸಲ್ಲಿಸಲು ಇಚ್ಛಿಸುತ್ತೇವೆ. ಅವಕಾಶದ ಜೊತೆ ಬದ್ಧತೆ ಕೂಡ ಸೇರಿಕೊಂಡಾಗ ಏನನ್ನು ಸಾಧಿಸಬಹುದು ಎಂಬುದಕ್ಕೆ ಈ ಸಾಧನೆಯೇ ಸ್ಫೂರ್ತಿದಾಯಕ ಉದಾ ಹರಣೆಯಾಗಿದೆ. ಈ ಸಾಧನೆಯು ‘ಸ್ಕಿಲ್ ಇಂಡಿಯಾ’ ಮತ್ತು ‘ವಿಕಸಿತ ಭಾರತ 2047’ ನಂತಹ ರಾಷ್ಟ್ರೀಯ ಯೋಜನೆಗಳಿಗೆ ಮತ್ತು ‘ಕರ್ನಾಟಕ ಕೌಶಲ್ಯ’ ದಂತಹ ರಾಜ್ಯ ಯೋಜನೆಗಳಿಗೆ ಪೂರಕ ವಾಗಿ ಮೂಡಿಬಂದಿದ್ದು, ನಾವು ರಾಷ್ಟ್ರಕ್ಕಾಗಿ ಕೌಶಲ್ಯಪೂರ್ಣ ಕಾರ್ಯಪಡೆಯನ್ನು ನಿರ್ಮಿಸಲು ಬದ್ಧರಾಗಿದ್ದೇವೆ. ಟೊಯೋಟಾದಲ್ಲಿ ಗ್ರಾಮೀಣ ಭಾಗದ ಯುವಕರನ್ನು ವಿಶ್ವ ದರ್ಜೆಯ ಸ್ಪರ್ಧಾ ತ್ಮಕ ತಂತ್ರಜ್ಞರನ್ನಾಗಿ ರೂಪಿಸಲು, ಅವರಿಗೆ ಅವಕಾಶಗಳನ್ನು ಸೃಷ್ಟಿಸಲು ನಾವು ಬದ್ಧರಾಗಿದ್ದೇವೆ. ವಿಶೇಷವಾಗಿ ನಾವು ಸೇವೆ ಸಲ್ಲಿಸುವ ಸಮುದಾಯಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಉಂಟುಮಾಡಲು ನಾವು ಹೆಚ್ಚಿನ ಗಮನ ನೀಡುತ್ತೇವೆ” ಎಂದರು.

WorldSkills 2024 Winners from TKM ಒಕ

ಸನ್ಮಾನ ಸ್ವೀಕರಿಸಿದ ಎಲ್ಲಾ ಹತ್ತು ಉದ್ಯೋಗಿಗಳೂ ಟೊಯೋಟಾ ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ (ಟಿಟಿಟಿಐ) ನ ಹಳೆಯ ವಿದ್ಯಾರ್ಥಿಗಳಾಗಿದ್ದಾರೆ. ಟಿಟಿಟಿಐ ಅನ್ನು ಗ್ರಾಮೀಣ ಭಾಗದ ಯುವಪೀಳಿಗಿಗೆ ಅತ್ಯಾಧುನಿಕ ಉತ್ಪಾದನಾ ಕೌಶಲ್ಯಗಳನ್ನು ಕಲಿಸಲು ಟಿಕೆಎಂ ಸ್ಥಾಪಿಸಿದ್ದು, ಈ ಕೇಂದ್ರವು 2007ರಲ್ಲಿ ಕಾರ್ಯಾರಂಭ ಮಾಡಿತ್ತು. ಇಲ್ಲಿ ಅಸೆಂಬ್ಲಿ, ಪೇಂಟ್, ವೆಲ್ಡ್, ಮತ್ತು ಮೆಕಾಟ್ರಾನಿಕ್ಸ್‌ ನಂತಹ ಪ್ರಮುಖ ವೃತ್ತಿ ವಿಭಾಗಗಳಲ್ಲಿ ಮೂರು ವರ್ಷಗಳ ವಸತಿ ಕೋರ್ಸ್ ಅನ್ನು ಸಂಸ್ಥೆ ನೀಡುತ್ತದೆ. ಜೊತೆಗೆ ಸಮಗ್ರ ಅಭಿವೃದ್ಧಿಯ ಮೇಲೆ ಗಮನ ಹರಿಸುತ್ತದೆ.

ವಿದ್ಯಾರ್ಥಿಗಳು ಕಠಿಣ ತಾಂತ್ರಿಕ ತರಬೇತಿಯ ಜೊತೆಗೆ ದೈಹಿಕ ಮತ್ತು ವ್ಯಕ್ತಿತ್ವ ನಿರ್ಮಾಣ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. 1,400ಕ್ಕೂ ಹೆಚ್ಚು ಪದವೀಧರರೊಂದಿಗೆ ಮತ್ತು ಶೇ.100 ಉದ್ಯೋಗ ನಿಯೋಜನೆಯ ದಾಖಲೆ ಹೊಂದಿರುವ ಟಿಟಿಟಿಐಯಲ್ಲಿ ತರಬೇತಿ ಹೊಂದಿದ ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ವಿಶ್ವ ಕೌಶಲ್ಯ ಸ್ಪರ್ಧೆಗಳಲ್ಲಿ, ವಿಶೇಷವಾಗಿ ವರ್ಲ್ಡ್‌ ಸ್ಕಿಲ್ಸ್ ಸ್ಪರ್ಧೆಯಲ್ಲಿ ತಮ್ಮ ತಾಂತ್ರಿಕ ಉತ್ಕೃಷ್ಟತೆಗಾಗಿ ಸಾಕಷ್ಟು ಗೌರವ ಮತ್ತು ಮನ್ನಣೆಯನ್ನು ಗಳಿಸಿದ್ದಾರೆ. ಟಿಕೆಎಂ ಇತ್ತೀಚೆಗೆ ಟಿಟಿಟಿಐನ ದಾಖಲಾತಿ ಸಾಮರ್ಥ್ಯವನ್ನು ದ್ವಿಗುಣಗೊಳಿಸಿದ್ದು, ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾದ ಸೀಟುಗಳನ್ನು ಪರಿಚಯಿಸಿದೆ. ಅಲ್ಲದೇ ವಸತಿ ಮತ್ತು ತರಬೇತಿ ಮೂಲಸೌಕರ್ಯವನ್ನು ಮತ್ತಷ್ಟು ಉತ್ಕೃಷ್ಟಗೊಳಿಸಿದೆ.

ಟಿಟಿಟಿಐನ ಪ್ರಯತ್ನಗಳಿಗೆ ಪೂರಕವಾಗಿರುವ ಟೊಯೋಟಾ ಕೌಶಲ್ಯ ಎಂಬ ಕಾರ್ಯಕ್ರಮವು ಕೌಶಲ್ಯಾಭಿವೃದ್ಧಿ ಮಾಡಲೆಂದೇ ವಿನ್ಯಾಸಗೊಂಡಿರುವ ಮತ್ತೊಂದು ಪ್ರಮುಖ ಯೋಜನೆಯಾಗಿದೆ. ಟೊಯೋಟಾ ಕೌಶಲ್ಯ ಯೋಜನೆಯು ಆರ್ಥಿಕವಾಗಿ ಹಿಂದುಳಿದ ವರ್ಗದ ಯುವ ಜನತೆಗಾಗಿಯೇ ಇರುವ ಎರಡು ವರ್ಷಗಳ ಉಚಿತ ತರಬೇತಿ ಕಾರ್ಯಕ್ರಮವಾಗಿದ್ದು, ಕೆಲಸದ ಜೊತೆ ಕಲಿಕೆಯ ಅವಕಾಶವನ್ನು ಒದಗಿಸುತ್ತದೆ. ಇದರ ಜೊತೆಗೆ, ಟೊಯೋಟಾ ಸಂಸ್ಥೆಯು ಭಾರತದಾದ್ಯಂತ ಕೈಗಾರಿಕಾ ಮತ್ತು ತಾಂತ್ರಿಕ ತರಬೇತಿ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಮಾಡಿಕೊಂಡಿದ್ದು, ಆ ಮೂಲಕ ಟೊಯೋಟಾ ಟೆಕ್ನಿಕಲ್ ಎಜುಕೇಶನ್ ಪ್ರೋಗ್ರಾಂ (ಟಿ-ಟಿಇಪಿ) ಅನ್ನು ಆಯೋಜಿಸುತ್ತಿದೆ. ಇದುವರೆಗೆ, ಟೊಯೋಟಾ ಭಾರತದಾದ್ಯಂತ 68 ಟಿ-ಟಿಇಪಿ ಕೇಂದ್ರಗಳನ್ನು ಸ್ಥಾಪಿಸಿದ್ದು, 14,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ಒದಗಿಸಿದೆ.

ಭಾರತವು ಜಾಗತಿಕ ಕೌಶಲ್ಯ ರಾಜಧಾನಿಯಾಗುವ ದಿಕ್ಕಿನಲ್ಲಿ ಮುನ್ನಡೆಯುತ್ತಿದ್ದು, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯು ತರಬೇತಿ, ಶಿಕ್ಷಣ, ಮತ್ತು ಸಮುದಾಯ ಅಭಿವೃದ್ಧಿ ಯೋಜನೆಗಳ ಮೂಲಕ ಆ ನಿಟ್ಟಿನಲ್ಲಿ ಅರ್ಥಪೂರ್ಣ ಕೊಡುಗೆಯನ್ನು ನೀಡುತ್ತಿದೆ.