ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

S.R. Nayak: ನಿವೃತ್ತ ನ್ಯಾಯಮೂರ್ತಿ, ನಾಡೋಜ ಎಸ್.ಆರ್. ನಾಯಕ್ ನಿಧನ

S.R. Nayak: ನಿವೃತ್ತ ನ್ಯಾಯಮೂರ್ತಿ, ನಾಡೋಜ ಎಸ್.ಆರ್. ನಾಯಕ್ ಅವರು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಪ್ರಥಮ ಅಧ್ಯಕ್ಷರಾಗಿದ್ದರು. ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಎಸ್.ಆರ್ ನಾಯಕ್ ಸೇವೆಯನ್ನು ಪರಿಗಣಿಸಿ, ಹಂಪಿಯ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ನಿವೃತ್ತ ನ್ಯಾಯಮೂರ್ತಿ, ನಾಡೋಜ ಎಸ್.ಆರ್. ನಾಯಕ್ ನಿಧನ

Profile Prabhakara R May 18, 2025 10:08 PM

ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ, ನಾಡೋಜ ಎಸ್.ಆರ್. ನಾಯಕ್ (80) (S.R. Nayak) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು. ಕರ್ನಾಟಕ ಹೈಕೋರ್ಟ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಇವರು, ಛತ್ತೀಸ್‌ಗಢದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಪ್ರಥಮ ಅಧ್ಯಕ್ಷರಾಗಿದ್ದರು. ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಎಸ್.ಆರ್ ನಾಯಕ್ ಸೇವೆಯನ್ನು ಪರಿಗಣಿಸಿ, ಹಂಪಿಯ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಎಸ್.ಆರ್ ನಾಯಕ್ ಅವರಿಗೆ ಪತ್ನಿ ಶಾಲಿನಿ ಎಸ್‌. ನಾಯಕ್, ಪುತ್ರ ಡಾ.ಎನ್‌.ಎಸ್‌.ನಾಯಕ್ ಹಾಗೂ ಪುತ್ರಿ‌ ನಿಶಾ ಗಾಂವ್ಕರ್ ಇದ್ದಾರೆ. ಮೇ 19ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬೆಂಗಳೂರಿನ ಆರ್‌ಎಂವಿ ಎರಡನೇ ಹಂತದಲ್ಲಿರುವ ಸ್ವಗೃಹದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಸಂಜೆ 4 ಗಂಟೆಗೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರವನ್ನು ನಡೆಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಎಸ್.ಆರ್. ನಾಯಕ್ ಅವರು ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ನಾಡಮ್ಯಾಸಕೇರಿ ಗ್ರಾಮದಲ್ಲಿ ಕೃಷಿಕ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ 1945ರ ಜನವರಿ 1 ರಂದು ಜನಿಸಿದರು. ಅವರ ಪೂರ್ಣ ಹೆಸರು ಸುಬ್ರಾಯ್ ರಾಮ ನಾಯಕ್ ಆಗಿದ್ದು, ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್ಸಿ ಪದವಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ಮತ್ತು ಕಾನೂನು ವಿಭಾಗದಲ್ಲಿಯೇ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದರು. 1974ರಲ್ಲಿ ವಕೀಲರಾಗಿ ರಾಜ್ಯ ವಕೀಲರ ಪರಿಷತ್‌ನಲ್ಲಿ ಸನ್ನದು ನೋಂದಣಿ ಮಾಡಿಸಿದ ಅವರು ಮೊದಲಿಗೆ ಎಂ.ಗೋಪಾಲಕೃಷ್ಣ ಶೆಟ್ಟಿ ನಂತರ ಎಲ್.ಜಿ.ಹಾವನೂರು ಅವರ ಬಳಿ ಕಿರಿಯ ವಕೀಲರಾಗಿ ವೃತ್ತಿ ಪ್ರಾವೀಣ್ಯ ಸಾಧಿಸಿದರು. ಕೆಲವು ಕಾಲ ಬೆಂಗಳೂರಿನ ಬಿಎಂಎಸ್ ಮತ್ತು ಎಸ್ ಎಲ್ ಎಸ್ ಆರ್ ಸಿ ಹಾವನೂರು ಕಾನೂನು ಕಾಲೇಜುಗಳಲ್ಲಿ ಅರೆಕಾಲಿಕ ಪ್ರಾಧ್ಯಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಯಾಗಿ 1994ರ ಫೆಬ್ರುವರಿ 25ರಂದು ನೇಮಕಗೊಂಡ ಅವರು, ನಂತರ ಆಂಧ್ರಪ್ರದೇಶ ಹೈಕೋರ್ಟ್‌ಗೆ ವರ್ಗಾವಣೆಗೊಂಡಿದ್ದರು. ಆಂಧ್ರಪ್ರದೇಶ ನ್ಯಾಯಾಂಗ ಅಕಾಡೆಮಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ನಂತರ ಛತ್ತೀಸ್ ಗಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಯಾಗಿ ನಿವೃತ್ತರಾಗಿದ್ದರು.

ಸಿಎಂ ಸಿದ್ದರಾಮಯ್ಯ ಸಂತಾಪ

ಎಸ್‌.ಆರ್‌.ನಾಯಕ್‌ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಮೊದಲ ಅಧ್ಯಕ್ಷರು ಮತ್ತು ಕರ್ನಾಟಕ ಕಾನೂನು ಆಯೋಗದ ಮಾಜಿ ಅಧ್ಯಕ್ಷರು, ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್.ಆರ್ ನಾಯಕ್‌ರವರ ನಿಧನದಿಂದ ತೀವ್ರ ದುಃಖವಾಗಿದೆ. ನ್ಯಾಯ, ಕಾನೂನು ಮತ್ತು ಮಾನವ ಹಕ್ಕುಗಳಿಗೆ ಅವರ ಕೊಡುಗೆಗಳು ಅನುಕರಣೀಯ. ಅವರ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ತಿಳಿಸಿದ್ದಾರೆ.