Contractor Death: ಗುತ್ತಿಗೆದಾರ ಆತ್ಮಹತ್ಯೆ: ಸಿಐಡಿಯಿಂದ ಸಚಿವ ಖರ್ಗೆ ಆಪ್ತ ಸೇರಿ ಐವರ ಬಂಧನ
Contractor Death: ಗುತ್ತಿಗೆದಾರ ಆತ್ಮಹತ್ಯೆ: ಸಿಐಡಿಯಿಂದ ಸಚಿವ ಖರ್ಗೆ ಆಪ್ತ ಸೇರಿ ಐವರ ಬಂಧನ
ಹರೀಶ್ ಕೇರ
January 11, 2025
ಬೀದರ್: ಯುವ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ (Contractor Death) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಸಿಐಡಿ ಐವರನ್ನು ಬಂಧಿಸಿದೆ. ಪ್ರಿಯಾಂಕ್ ಖರ್ಗೆ (Priyank Kharge) ಆಪ್ತ ರಾಜು ಕಪನೂರು, ಘೊರಕ್ ನಾಥ್, ನಂದಕುಮಾರ್ ನಾಗಬುಜಂಗಿ, ರಾಮನಗೌಡಾ ಪಾಟೀಲ್, ಸತೀಶ್ ಎನ್ನುವವರನ್ನು ಬಂಧಿಸಲಾಗಿದೆ.
ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದ ಬೀದರ್ ಗುತ್ತಿಗೆದಾರ ಸಚಿನ್ , ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರು ಸೇರಿದಂತೆ ಒಟ್ಟು 8 ಜನರ ಹೆಸರನ್ನು ಉಲ್ಲೇಖಿಸಿದ್ದರು. ಈ ಸಂಬಂಧ ನಿನ್ನೆ ಸಿಐಡಿ ಅಧಿಕಾರಗಳು ಬೀದರ್ನಲ್ಲಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆಗಾಗಿ ಬೀದರ್ ಬಂದಿರುವ ಸಿಐಡಿ ಅಧಿಕಾರಿಗಳು, ಡೆತ್ನೋಟ್ನಲ್ಲಿ ಉಲ್ಲೇಖವಾಗಿದ್ದ ಹೆಸರಿನವರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದರು. ಅದರಂತೆ ಐವರು ಬೀದರ್ ರೈಲ್ವೆ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ಆದರೆ, ವಿಚಾರಣೆಯಲ್ಲಿ ಸೂಕ್ತವಾದ ಉತ್ತರ ಬಾರದ ಹಿನ್ನೆಲೆಯಲ್ಲಿ ಸಿಐಡಿ, ಆರೋಪಿಗಳನ್ನು ಬಂಧಿಸಿದೆ.
ಬಂಧಿತರನ್ನು ಬೀದರ್ ಜೆಎಂಎಫ್ಸಿ ಕೋರ್ಟ್ ಜಡ್ಜ್ ಮುಂದೆ ಹಾಜರುಪಡಿಸಲು ಸಿದ್ಧತೆ ನಡೆಸಿದ್ದಾರೆ. ಬೀದರ್ ನಗರದ ಜನವಾಡಾ ರಸ್ತೆಯ ಬಳಿ ಇರುವ ಜಡ್ಜ್ ರಾಮಮೂರ್ತಿ ಮನೆಗೆ ಕರೆದುಕೊಂಡು ಹೋಗಲಿದ್ದು, ಇನ್ನಷ್ಟು ವಿಚಾರಣೆಗೆ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡುವ ಸಾಧ್ಯತೆಗಳು ಹೆಚ್ಚಿವೆ.
7 ಪುಟಗಳ ಡೆತ್ನೋಟ್ ಬರೆದಿಟ್ಟು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟ್ಟಿತೂಂಗಾವ್ ಗ್ರಾಮದ ಗುತ್ತಿಗೆದಾರ ಸಚಿನ್(26) ಡಿಸೆಂಬರ್ 26ರಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿದ್ದ. 15 ಲಕ್ಷಕ್ಕೂ ಹೆಚ್ಚು ಹಣ ಪಡೆದು ಟೆಂಡರ್ ನೀಡದೆ ವಂಚನೆ ಮಾಡಿದ್ದು, ಜೊತೆಗೆ 1 ಕೋಟಿ ರೂ. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ವಿರುದ್ಧ ಡೆತ್ನೋಟ್ನಲ್ಲಿ ಗಂಭೀರ ಆರೋಪ ಮಾಡಿದ್ದ. ಹೀಗಾಗಿ ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹಿಸಿದೆ. ಇನ್ನು ಈ ಪ್ರಕರಣ ಸಂಬಂಧ ಆರೋಪ ಪ್ರತ್ಯಾರೋಪಗಳು ತಾರಕಕ್ಕೇರುತ್ತಿದ್ದಂತೆಯೇ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದ್ದು, ಇದೀಗ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.