Contractor Self Harming: ಬೀದರ್‌ನಲ್ಲಿ ಗುತ್ತಿಗೆದಾರನ ಆತ್ಮಹತ್ಯೆ, ಇಬ್ಬರು ಪೊಲೀಸರು ಸಸ್ಪೆಂಡ್
Contractor Self Harming: ಬೀದರ್‌ನಲ್ಲಿ ಗುತ್ತಿಗೆದಾರನ ಆತ್ಮಹತ್ಯೆ, ಇಬ್ಬರು ಪೊಲೀಸರು ಸಸ್ಪೆಂಡ್
ಹರೀಶ್ ಕೇರ
December 28, 2024
ಬೀದರ್: ಯುವ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ (Contractor Self Harming) ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್ (Bidar news) ಗಾಂಧಿಗಂಜ್‌ನ ಇಬ್ಬರು ಪೊಲೀಸರನ್ನು ಅಮಾನತು (Suspend) ಮಾಡಲಾಗಿದೆ.
ಸಚಿನ್ ಪಾಂಚಾಳ, ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಆಪ್ತ ರಾಜು ಕಪನೂರು ಹೆಸರು ಡೆತ್ನೋಟ್ನಲ್ಲಿ ಬರೆದಿಟ್ಟು, ಬಳಿಕ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ವಂಚನೆ ಹಾಗೂ ಹಣಕ್ಕಾಗಿ ಕೊಲೆ ಬೆದರಿಕೆ ಆರೋಪ ಮಾಡಿದ್ದ. ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಆರೋಪ-ಪ್ರತ್ಯಾರೋಪಗಳು ಜೋರಾಗಿದೆ.
ಪ್ರಕರಣದಲ್ಲಿ ಕರ್ತವ್ಯಲೋಪ ಆರೋಪದ ಮೇಲೆ ಓರ್ವ ಮಹಿಳಾ ಹೆಡ್ ಕಾನ್‌ಸ್ಟೇಬಲ್ ಹಾಗೂ ಮತ್ತೋರ್ವ ಪುರುಷ ಹೆಡ್ ಕಾನ್‌ಸ್ಟೇಬಲ್ ಅನ್ನು ಸಸ್ಪೆಂಡ್ ಮಾಡಿ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಆದೇಶ ಹೊರಡಿಸಿದ್ದಾರೆ. ರಾಜೇಶ್ ಹಾಗೂ ಶಾಮಲಾ ಎಂಬ ಇಬ್ಬರು ಹೆಡ್ ಕಾನ್‌ಸ್ಟೇಬಲ್‌ಗಳೇ ಅಮಾನತುಗೊಂಡವರು.
ಸಚಿನ್ ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ. ಇದನ್ನು ಗಮನಿಸಿದ ಕುಟುಂಬಸ್ಥರು ಆತಂಕಗೊಂಡು ಕೂಡಲೇ ಬೀದರ್‌ನ ಗಾಂಧಿಗಂಜ್ ಠಾಣೆಗೆ ತೆರಳಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾನೆ. ಕೂಡಲೇ ಹುಡುಕಿ ಕೊಡುವಂತೆ ಸಚಿನ್ ಸಹೋದರ ಹಾಗೂ ಸಹೋದರಿ ಮನವಿ ಮಾಡಿದ್ದರು. ಆದ್ರೆ, ದೂರು ದಾಖಲಿಸಲು ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮಾಹಿತಿ ನೀಡಿದ್ದಾರೆ.
ಸಚಿನ್ (26 ವರ್ಷ) ಬಾಲ್ಕಿಯಲ್ಲಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಅತ್ಮಹತ್ಯೆಗೆ ಶರಣಾಗಿದ್ದ. ಡೆತ್ ನೋಟ್ ಬರೆದಿಟ್ಟು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ತಳಕು ಹಾಕಿಕೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಎಂಬವರು 15 ಲಕ್ಷಕ್ಕೂ ಅಧಿಕ ಹಣ ತೆಗೆದುಕೊಂಡು ಟೆಂಡರ್ ನೀಡದೆ ವಂಚನೆ ಮಾಡಿದ್ದು, ಮಾತ್ರವಲ್ಲದೆ 1 ಕೋಟಿ ಹಣ ನೀಡುವಂತೆ ಒತ್ತಡ, ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಡೆತ್ನೋಟ್ನಲ್ಲಿ ಉಲ್ಲೇಖವಾಗಿದೆ.
ಸಚಿವ ಖರ್ಗೆ ಆಪ್ತ ಸ್ಪಷ್ಟನೆ
ಕಳೆದ 1 ವರ್ಷದ ಹಿಂದೆ ಮೃತ ಸಚಿನ್ ನನಗೆ ಪರಿಚಯವಾಗಿದ್ದ. ಬಿಇ ಸಿವಿಲ್ ಮುಗಿದಿದೆ, ಕಾಂಟ್ರಾಕ್ಟರ್ ಲೈಸೆನ್ಸ್ ಇದೆ ಎಂದಿದ್ದ. ನಮ್ಮ ಲೈಸೆನ್ಸ್ ಮೇಲೆ ಕಾಮಗಾರಿ ಮಾಡೋಣ ಅಂತ ಹೇಳಿದ್ದ. ಹೀಗಾಗಿ ಆತನ ಜೊತೆ ಕೆಲಸ ಮಾಡೋದಕ್ಕೆ ನಿರ್ಧರಿಸಿದ್ದೆವು. ಸಚಿನ್ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 65 ಲಕ್ಷ ಹಣ ಹಾಕಿದ್ದೆ. ಮೊದಲು ವಿಮಾನ ನಿಲ್ದಾಣದ ಕಾಮಗಾರಿ ಟೆಂಡರ್ ಹಾಕಿದ್ದೆವು. ಅದು ಆಗಿರಲಿಲ್ಲ, ಬಳಿಕ ಕೆಐಡಿಎಲ್ ಹಾಕಿದ್ದೆವು. ಅದೂ ಆಗಿರಲಿಲ್ಲ. ಬಳಿಕ ವಿಚಾರಣೆ ಮಾಡಿದಾಗ ಅದು ಫೇಕ್ ಎಂದು ಗೊತ್ತಾಯ್ತು. ಹೀಗಾಗಿ ನಮ್ಮ ಹಣ ನನಗೆ ವಾಪಸ್ ಕೊಡು ಎಂದು ಕೇಳಿದ್ದೆವು. ಆದರೆ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡು ಸಚಿನ್ ಓಡಾಡ್ತಿದ್ದ. ಒಂದೂವರೆ ತಿಂಗಳ ಹಿಂದೆ ಸಚಿನ್ ಮನೆಯಲ್ಲಿ ವಿಚಾರ ತಿಳಿಸಿದ್ದೆವು. ಸಚಿನ್ ಸಹೋದರಿಯರು ಸಲ್ಪ ಸಮಯಾವಕಾಶ ಕೇಳಿದ್ದರು. ಆದರೂ ಜಾಲತಾಣದಲ್ಲಿ ನಮ್ಮ ಬಗ್ಗೆ ಅಪಪ್ರಚಾರ ಶುರು ಮಾಡಿದ್ದ. ನಮ್ಮಿಂದ ಕಿರುಕುಳ ಆಗ್ತಿದೆ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದ. ಈ ಬಗ್ಗೆ ಕಲಬುರಗಿ ಗ್ರಾಮೀಣ ಠಾಣೆಗೆ ನಾನು ದೂರು ನೀಡಿದ್ದೆ. ಆದರೆ ಈಗ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನಿಖೆಯಾಗಲಿ ಎಲ್ಲಾ ಸತ್ಯಾಂಶ ಹೊರಬರುತ್ತೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: Priyank Kharge: ಪ್ರಿಯಾಂಕ್ ಖರ್ಗೆ ಆಪ್ತನಿಂದ ಕಿರುಕುಳ ಕುರಿತು ಡೆತ್‌ನೋಟ್ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ