Mangalore News: ಮೂವರು ಮಕ್ಕಳನ್ನು ಕೊಂದು, ಪತ್ನಿಯ ಕೊಲೆಗೂ ಯತ್ನಿಸಿದವನಿಗೆ ಮರಣ ದಂಡನೆ
2022ರ ಜೂನ್ 23ರಂದು ನಡೆದಿದ್ದ ಪ್ರಕರಣದಲ್ಲಿ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಮೂವರು ಮಕ್ಕಳನ್ನು ಕೊಂದು, ಪತ್ನಿಯನ್ನೂ ಬಾವಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ್ದ ಹಿನ್ನೆಲೆಯಲ್ಲಿ ವ್ಯಕ್ತಿಗೆ ಶಿಕ್ಷೆ ಪ್ರಕಟವಾಗಿದೆ.
Prabhakara R
January 1, 2025
ಮಂಗಳೂರು: ಮೂವರು ಮಕ್ಕಳನ್ನು ಕೊಂದು, ಪತ್ನಿಯನ್ನೂ ಬಾವಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಅಪರಾಧಿಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (Mangalore News) ನ್ಯಾಯಾಧೀಶೆ ಸಂಧ್ಯಾ ಅವರು ಡಿ. 31ರಂದು ಹಿತೇಶ್ ಶೆಟ್ಟಿಗಾರ್ ಎಂಬುವವರಿಗೆ ಮರಣದಂಡನೆ ವಿಧಿಸಿದ್ದಾರೆ.
2022ರ ಜೂನ್ 23ರಂದು ಪದ್ಮನೂರು ಗ್ರಾಮದಲ್ಲಿ ಪ್ರಕರಣ ನಡೆದಿತ್ತು. ಆರೋಪಿ ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ, ಪತ್ನಿ ಲಕ್ಷ್ಮಿಯನ್ನು ಅದೇ ಬಾವಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ್ದ. ಆರೋಪಿ ನಿರುದ್ಯೋಗಿಯಾಗಿದ್ದು, ಪತ್ನಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಘಟನೆ ನಡೆದ ದಿನ, ಅಸಮಾಧಾನಗೊಂಡಿದ್ದ ಆತ ಮಕ್ಕಳು ಶಾಲೆಯಿಂದ ಹಿಂದಿರುಗಿದ ನಂತರ ಬಾವಿಗೆ ತಳ್ಳಿದ್ದ. ಬಳಿಕ ಪತ್ನಿಯನ್ನು ತಳ್ಳಿದ್ದ. ಮಹಿಳೆ ಸಹಾಯಕ್ಕಾಗಿ ಕಿರುಚಿದಾಗ, ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಹೂವಿನ ವ್ಯಾಪಾರಿ ಆಕೆಯನ್ನು ರಕ್ಷಿಸಿದ್ದರು.
ಹಿರಿಯ ಮಗಳು ಬಾವಿಗೆ ಅಳವಡಿಸಿದ್ದ ಪಂಪ್ ಪೈಪ್ ಅನ್ನು ಹಿಡಿದುಕೊಂಡು ಪ್ರಾಣ ಉಳಿಸಿಕೊಳ್ಳಲು ಯತ್ನಿಸಿರುವುದು ತನಿಖೆ ವೇಳೆ ತಿಳಿದುಬಂದಿತ್ತು. ಆದರೆ, ಆಕೆ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಆರೋಪಿ ಚಾಕುವಿನಿಂದ ಪೈಪ್ ತುಂಡರಿಸಿದ್ದ.
ದೂರಿನ ಆಧಾರದ ಮೇಲೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಕಲಂ 302 (ಕೊಲೆ) ಮತ್ತು 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್‌ಪೆಕ್ಟರ್ ಕುಸುಮಾಧರ ನೇತೃತ್ವದಲ್ಲಿ ಎಎಸ್‌ಐ ಸಂಜೀವ ಅವರ ತಂಡ ವಿವರವಾದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ವಿಚಾರಣೆ ವೇಳೆ ಪ್ರಾಸಿಕ್ಯೂಟರ್ ಮೋಹನ್ ಕುಮಾರ್ ಬಲವಾದ ಸಾಕ್ಷ್ಯವನ್ನು ಪ್ರಸ್ತುತಪಡಿಸಿದರು. ಮಕ್ಕಳ ಅಮಾನುಷ ಹತ್ಯೆ ಮತ್ತು ಪತ್ನಿಯ ಜೀವಹರಣಕ್ಕೆ ಯತ್ನಕ್ಕಾಗಿ ಗರಿಷ್ಠ ಶಿಕ್ಷೆಗೆ ಅರ್ಹವಾಗಿದೆ ಎಂದು ನ್ಯಾಯಾಲಯ ತೀರ್ಮಾನಿಸಿದೆ.
ಈ ಸುದ್ದಿಯನ್ನೂ ಓದಿ | Traffic Challans: ಹೊಸ ವರ್ಷದ ಮುನ್ನಾ ದಿನ ಸಂಚಾರ ಪೊಲೀಸರಿಂದ ಭರ್ಜರಿ ಬೇಟೆ; ಮುಂಬೈಯಲ್ಲಿ 17,800 ಪ್ರಕರಣ ದಾಖಲು
ಮುದ್ದಿನ ನಾಯಿ ಸತ್ತಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ!
ಬೆಂಗಳೂರು: ಮುದ್ದಿನ ಸಾಕು ನಾಯಿ ಸತ್ತಿದ್ದಕ್ಕೆ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ (Self Harming) ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವಪುರದಲ್ಲಿ ನಡೆದಿದೆ. ರಾಜಶೇಖರ್ ಆತ್ಮಹತ್ಯೆ ಮಾಡಿಕೊಂಡ ಯುವಕ.
ಯುವಕ 9 ವರ್ಷದ ಹಿಂದೆ ಜಮರ್ನ್ ಶೆಫರ್ಡ್ ನಾಯಿ ತಂದಿದ್ದರು. ನಾಯಿಗೆ ಪ್ರೀತಿಯಿಂದ ಬೌನ್ಸಿ ಎಂದು ಹೆಸರಿಟ್ಟಿದ್ದರು. ಅನಾರೋಗ್ಯದಿಂದ ನಾಯಿ ಮೃತಪಟ್ಟಿದ್ದು, ಬೆಳ್ಳಗ್ಗೆ ಎದ್ದು ನೋಡಿದಾಗರಾಜಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.