AIPTF India: ಎಐಪಿಟಿಎಫ್ ರಾಷ್ಟ್ರೀಯ ಅಧ್ಯಕ್ಷರಾಗಿ ಬಸವರಾಜ ಗುರಿಕಾರ, ಕಾರ್ಯದರ್ಶಿಯಾಗಿ ಚಂದ್ರಶೇಖರ ನುಗ್ಗಲಿ ಆಯ್ಕೆ
AIPTF India: ಕೇರಳದ ಎರ್ನಾಕುಲಂನಲ್ಲಿ ನಡೆದ ಚುನಾವಣೆಯ ಪ್ರಕ್ರಿಯೆಯಲ್ಲಿ ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ (ಎಐಪಿಟಿಎಫ್) ರಾಷ್ಟ್ರೀಯ ಅಧ್ಯಕ್ಷರಾಗಿ ಧಾರವಾಡದ ಬಸವರಾಜ ಗುರಿಕಾರ ಅವರನ್ನು ಆಯ್ಕೆ ಮಾಡಲಾಗಿದೆ.
Prabhakara R
December 2, 2024
ಬೆಂಗಳೂರು: ನವದೆಹಲಿಯ ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ (ಎಐಪಿಟಿಎಫ್) ರಾಷ್ಟ್ರೀಯ ಅಧ್ಯಕ್ಷರಾಗಿ ಧಾರವಾಡದ ಬಸವರಾಜ ಗುರಿಕಾರ (Basavaraj Gurikar) ಆಯ್ಕೆಯಾಗಿದ್ದು, ಎಐಪಿಟಿಎಫ್ (AIPTF India) ಕಾರ್ಯದರ್ಶಿ-1 ಆಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ ಚಂದ್ರಶೇಖರ ನುಗ್ಗಲಿ ಆಯ್ಕೆಯಾಗಿದ್ದಾರೆ.
ಕಳೆದ ಎರಡು ದಿನಗಳಿಂದ ಕೇರಳದ ಎರ್ನಾಕುಲಂನಲ್ಲಿ ನಡೆದ ಚುನಾವಣೆಯ ಪ್ರಕ್ರಿಯೆಯ ಅಂತಿಮ ದಿನವಾದ ಸೋಮವಾರ, ಅಧ್ಯಕ್ಷರಾಗಿ ಗುರಿಕಾರ ಆಯ್ಕೆಯಾದರು. ದೇಶದ 23 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರ ಸದಸ್ಯತ್ವ ಹೊಂದಿರುವ ಈ ಸಂಘಟನೆ ರಾಷ್ಟ್ರದಲ್ಲಿಯೇ ಅತಿ ದೊಡ್ಡ ಸಂಘಟನೆಯಾಗಿದ್ದು, ದೇಶದ 25 ರಾಜ್ಯಗಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಗಳು ಈ ಸಂಘದ ಮಾನ್ಯತೆ ಪಡೆದಿವೆ.
187 ದೇಶಗಳ ಶಿಕ್ಷಕರ ಅಂತಾರಾಷ್ಟ್ರೀಯ ಶಿಕ್ಷಕರ ಸಂಘಟನೆಯಾಗಿರುವ "ಎಜುಕೇಶನ್ ಇಂಟರ್ ನ್ಯಾಷನಲ್' ಜತೆ ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ ಸಂಯೋಜನೆ ಹೊಂದಿದೆ. ಇಂತಹ ಮಹತ್ವದ ಸಂಘಟನೆಯ ಚುನಾವಣೆಯ ಮೂಲಕ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಇದೇ ಮೊದಲ ಬಾರಿಯಾಗಿದೆ. ಎರಡು ದಿನಗಳ ಕಾಲ ನಡೆದ ಚುನಾವಣೆಯಲ್ಲಿ 25 ರಾಜ್ಯಗಳ ಆಯಾ ಸಂಘಟನೆಗಳ 247 ಪ್ರತಿನಿಧಿಗಳು ಚುನಾವಣೆಯಲ್ಲಿ ಭಾಗಿಯಾಗಿದ್ದರು. ಹಿಮಾಚಲ ಪ್ರದೇಶದ ಪ್ರೇಮಸಿಂಗ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಕರ್ನಾಟಕದ ಪ್ರಥಮ ವ್ಯಕ್ತಿ:
ಎಐಪಿಟಿಎಫ್‌ನ 75 ವರ್ಷಗಳ ಸಂಘಟನೆಯ ಇತಿಹಾಸದಲ್ಲಿ ಧಾರವಾಡದ ಬಸವರಾಜ ಗುರಿಕಾರ ಆಯ್ಕೆಯಾಗಿದ್ದು, ಕರ್ನಾಟಕದ ಮೊದಲ ವ್ಯಕ್ತಿ ಎಂಬುವುದು ವಿಶೇಷ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ಮೂರು ಬಾರಿ ರಾಜ್ಯ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಗುರಿಕಾರ ಶಿಕ್ಷಕ ಸಂಘಟನೆಯಲ್ಲಿ ಸುಮಾರು 40 ವರ್ಷಗಳಷ್ಟು ದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | KAS Officers Transfer: ಮತ್ತೆ 6 ಕೆಎಎಸ್ ಅಧಿಕಾರಿಗಳ ವರ್ಗಾವಣೆ
ಕಾರ್ಯದರ್ಶಿಯಾಗಿ ಕರ್ನಾಟಕದ ಚಂದ್ರಶೇಖರ ನುಗ್ಗಲಿ:
ಎಐಪಿಟಿಎಫ್‌ನ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಒಡಿಶಾದ ಕಮಲಾಕಾಂತ ತ್ರಿಪಾಠಿ, ಖಜಾಂಚಿಯಾಗಿ ಉತ್ತರಪ್ರದೇಶದ ಉಮಾಶಂಕರ, ಹಿರಿಯ ಉಪಾಧ್ಯಕ್ಷರಾಗಿ ಹರಿಗೋವಿಂದನ್ ಆಯ್ಕೆಯಾಗಿದ್ದಾರೆ.ಕಾರ್ಯದರ್ಶಿ-1 ಆಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ ಚಂದ್ರಶೇಖರ ನುಗ್ಗಲಿ ಆಯ್ಕೆಯಾಗಿದ್ದು ವಿಶೇಷ. ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದು ಇವರ ಸಾಧನೆಯಾಗಿದೆ.
ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ (ಎಐಪಿಟಿಎಫ್) ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಧಾರವಾಡದ ಬಸವರಾಜ ಗುರಿಕಾರ ಹಾಗೂ ಕಾರ್ಯದರ್ಶಿ-1 ಆಗಿ ಆಯ್ಕೆಯಾಗಿರುವ ಚಂದ್ರಶೇಖರ ನುಗ್ಗಲಿ ಅವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಡಗುಂದಿ ಘಟಕದ ಅಧ್ಯಕ್ಷ ಮಹಾಂತೇಶ ಮುಕರ್ತಿಹಾಳ ಹಾಗೂ ಪ್ರಧಾನ ಕಾರ್ಯದರ್ಶಿ ಸಲೀಂ ದಡೇದ ಅವರು ಅಭಿನಂದನೆ ಸಲ್ಲಿಸಿದ್ದಾರೆ.