Koppal Gavisiddeshwara Jatre 2025: ಅದ್ಧೂರಿಯಾಗಿ ನೆರವೇರಿದ ಕೊಪ್ಪಳ ಗವಿ ಸಿದ್ದೇಶ್ವರ ಮಹಾರಥೋತ್ಸವ; ಹರಿದುಬಂದ ಭಕ್ತ ಸಾಗರ
Koppal Gavisiddeshwara Jatre 2025: ಬುಧವಾರ ಬೆಳಗ್ಗೆಯಿಂದಲೇ ಗವಿಮಠದ ಮಹಾರಥೋತ್ಸವ ಅಂಗವಾಗಿ ಕರ್ತೃ ಗದ್ದುಗೆಗೆ ಅಲಂಕಾರ, ವಿಶೇಷ ಪೂಜೆಗಳು ಬೆಳಗ್ಗೆಯಿಂದಲೇ ನೆರವೇರಿದವು. ಸಂಜೆ ಧರ್ಮಗುರುಗಳು, ಗಣ್ಯರ ಸಮ್ಮುಖದಲ್ಲಿ ರಥವನ್ನು ಎಳೆಯಲಾಯಿತು.
ಕೊಪ್ಪಳ: ದಕ್ಷಿಣ ಭಾರತದ ಕುಂಭ ಮೇಳವೆಂದೇ ಪ್ರಸಿದ್ಧಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆ ಅಂಗವಾಗಿ ಗವಿಸಿದ್ದೇಶ್ವರ ಮಹಾರಥೋತ್ಸವವು (Koppal Gavisiddeshwara Jatre 2025) ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬುಧವಾರ ಅದ್ಧೂರಿಯಾಗಿ ನೆರವೇರಿತು.
ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ಕಳೆದ ಮೂರು ತಿಂಗಳಿನಿಂದಲೂ ನಿರಂತರ ತಯಾರಿ ನಡೆಯುತ್ತಿತ್ತು. ಬುಧವಾರ ಬೆಳಗ್ಗೆಯಿಂದಲೇ ಗವಿಮಠದ ಮಹಾರಥೋತ್ಸವ ಅಂಗವಾಗಿ ಕರ್ತೃ ಗದ್ದುಗೆಗೆ ಅಲಂಕಾರ, ವಿಶೇಷ ಪೂಜೆಗಳು ಬೆಳಗ್ಗೆಯಿಂದಲೇ ನೆರವೇರಿದವು. ಸಂಜೆ 5ಕ್ಕೆ ರಥೋತ್ಸವ ನಿಗದಿಯಾಗಿದ್ದರಿಂದ ಬೆಳಗ್ಗೆಯಿಂದಲೇ ದೂರದ ಊರುಗಳಿಂದ ಮಕ್ಕಳು, ಹಿರಿಯರೊಂದಿಗೆ ಕುಟುಂಬದ ಸದಸ್ಯರು ಆಗಮಿಸಿದ್ದರು. ಸಂಜೆ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು, ಸ್ವಾಮೀಜಿಗಳು, ಗಣ್ಯರ ಸಮ್ಮುಖದಲ್ಲಿ ರಥವನ್ನು ಎಳೆಯಲಾಯಿತು. ಈ ವೇಳೆ ಹಣ್ಣು, ಧವನ ಎಸೆದು ಜನರು ಭಕ್ತಿ ಭಾವ ಮೆರೆದರು.
ಗವಿಸಿದ್ದೇಶ್ವರ ಜಾತ್ರೆಗೆ ಆಗಮಿಸಿದ್ದರಿಂದ ಈ ಬಾರಿಯೂ ಕೊಪ್ಪಳ ಪೊಲೀಸರು ಎಲ್ಲಾ ಭಾಗಗಳಲ್ಲೂ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಟ್ಟು, ನಗರದಲ್ಲಿ ಸಂಚಾರ ದಟ್ಟಣೆ ಆಗದಂತೆ ನೋಡಿಕೊಂಡರು. ವಾಹನ ಸವಾರರು ನಗರದೊಳಗೆ ಬಾರದಂತೆ ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಅಲ್ಲದೇ ಭದ್ರತೆಗಾಗಿ ಸಾವಿರಾರು ಪೊಲೀಸರು ನಿಯೋಜನೆಗೊಂಡಿದ್ದರು.
ಕೊಪ್ಪಳದ ಗವಿ ಮಠದ ಜಾತ್ರೆಯಲ್ಲಿ ದಾಸೋಹವೂ ವಿಶೇಷ ಆಕರ್ಷಣೆಯಾಗಿದೆ. ಈ ಬಾರಿಯೂ ಭಕ್ತರಿಗೆ ರೊಟ್ಟಿ, ಮಾದಲಿ, ಜಿಲೇಬಿ, ಅನ್ನ, ಸಾಂಬಾರ್, ತರಹೇವಾರಿ ತರಕಾರಿ ಪಲ್ಯ ಸೇರಿ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಪ್ರತಿವರ್ಷವೂ ಒಂದೊಂದು ರೀತಿಯಲ್ಲಿ ಸಿಹಿ ತಿನಿಸು ಮಾಡುವ ಸಿಂಧನೂರಿನ ಸಮಾನ ಮನಸ್ಕ ಸ್ನೇಹಿತರು, ಮಠದ ಭಕ್ತರಿಗಾಗಿ ಈ ಬಾರಿ ಲಕ್ಷಾಂತರ ಜಿಲೇಬಿಗಳನ್ನು ತಯಾರಿಸಿದ್ದರು. ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರ ಸಲಹೆ ಮೇರೆಗೆ ಈ ಸಲ ಜಿಲೇಬಿ ಮಾಡಲಾಗಿದೆ.
ಈ ವರ್ಷ ವಿಶೇಷವಾಗಿ ಜಾತ್ರೆ ಅಂಗವಾಗಿ ಕ್ರೀಡೋತ್ಸವವನ್ನು ಸಂಘಸಂಸ್ಥೆಗಳು, ಜನಪ್ರತಿನಿಧಿಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಜಾತ್ರೆ ಹಿನ್ನೆಲೆ ಈಗಾಗಲೇ ಮಹಾದಾಸೋಹ ಮಂಟಪದಲ್ಲಿ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಜನವರಿ 16ರಂದು ಬಳಗಾನೂರು ಶ್ರೀಶಿವಶಾಂತವೀರ ಶರಣರ ದೀರ್ಘದಂಡ ನಮಸ್ಕಾರ, ಧಾರ್ಮಿಕ ಗೋಷ್ಠಿ, ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ. ಜನವರಿ 17 ರಂದು ಜಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಈ ವರ್ಷವೂ ಸಮಾಜಲ್ಲಿ ವಿಭಿನ್ನವಾಗಿ ಸಾಧನೆಗೈದ ಸಾಧಕರು ತಮ್ಮ ಹಿತ ನುಡಿಗಳಿಂದ ಕಲ್ಮಷ ತುಂಬಿರುವ ಮನಸ್ಸುಗಳ ಪರಿವರ್ತನೆ ಮಾಡಲಿದ್ದಾರೆ. ಅಮಾವಾಸ್ಯೆ ಮುಗಿಯುವವರೆಗೂ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಇರುತ್ತದೆ.
ಈ ಸುದ್ದಿಯನ್ನೂ ಓದಿ | Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು