Koppala News: ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ಖಂಡಿಸಿ ಇಂದು ಕೊಪ್ಪಳ ಬಂದ್
Koppala News: ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ಖಂಡಿಸಿ ಇಂದು ಕೊಪ್ಪಳ ಬಂದ್
ಹರೀಶ್ ಕೇರ
January 6, 2025
ಕೊಪ್ಪಳ: ಸಂವಿಧಾನ ನಿರ್ಮಾತೃ ಡಾ.ಬಿ.ಆರ್. ಅಂಬೇಡ್ಕರ್ (DR BR Ambedkar) ಕುರಿತು ಕೇಂದ್ರ ಸಚಿವ ಅಮಿತ್ ಶಾ (Amit Shah) ನೀಡಿರುವ ಹೇಳಿಕೆ ಖಂಡಿಸಿ ಇಂದು (ಜ.6) ಕೊಪ್ಪಳ ಬಂದ್‌ಗೆ (Koppala News) ದಲಿತ ಸಂಘಟನೆಗಳು ಕರೆ ನೀಡಿವೆ.
ಡಾ.ಬಿ.ಆರ್. ಅಂಬೇಡ್ಕರ್ ಅವರ ಕುರಿತು ನೀಡಿರುವ ಹೇಳಿಕೆ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಕ್ಷಮೆ ಯಾಚಿಸಬೇಕು. ಕೇಂದ್ರ ಸರ್ಕಾರ ಅವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿ ಕೊಪ್ಪಳ ಬಂದ್‌ಗೆ ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಕರೆ ನೀಡಿವೆ.
ಇಂದಿನ ಪ್ರತಿಭಟನೆಯ ಸಂದರ್ಭದಲ್ಲಿ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಸಂಘಟಕರು ಮನವಿ ಮಾಡಿದ್ದಾರೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಕೊಪ್ಪಳ ನಗರ ಬಂದ್ ನಡೆಯಲಿದೆ. ಭದ್ರತೆಗಾಗಿ 500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಬಂದ್ ಹಿನ್ನೆಲೆಯಲ್ಲಿ ಕೊಪ್ಪಳ ನಗರದ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಮಾದಿಗ, ಚಲವಾದಿ, ಮುಸ್ಲಿಂ, ಕ್ರಿಶ್ಚಿಯನ್, ಲಂಬಾಣಿ ಸಮಾಜ, ಲಿಂಗಾಯಿತ, ಹಾಲುಮತ, ವಾಲ್ಮೀಕಿ, ಭೋವಿ, ಭಜಂತ್ರಿ, ಮಡಿವಾಳ, ಪಂಚಮಸಾಲಿ, ಸುಡುಗಾಡು ಸಿದ್ದರು, ಚನ್ನದಾಸರು, ಶಿಳ್ಳೆಕ್ಯಾತರ, ಸವಿತಾ ಸಮಾಜ ಸೇರಿದಂತೆ ಅನೇಕ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಬಂದ್ ಹಿನ್ನೆಲೆಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಕೈಗೊಳ್ಳಲಾಗಿದೆ. ಆಟೋ, ಬೈಕುಗಳ ಮೂಲಕ ಸಂಘಟನೆಗಳ ಪ್ರತಿಭಟನೆ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡ ಹನುಮೇಶ್ ಕಡೆಮನಿ ಹೇಳಿದ್ದಾರೆ.