Kannada Sahitya Sammelana: ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ತೆರೆ; 5 ನಿರ್ಣಯ ಮಂಡನೆ
Kannada Sahitya Sammelana: ಸಕ್ಕರೆಯ ನಾಡು ಎಂದು ಪ್ರಸಿದ್ದಿ ಪಡೆದಿರುವ ಮಂಡ್ಯ ಜಿಲ್ಲೆಯಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ರಾತ್ರಿ ಸಂಭ್ರಮದ ತೆರೆ ಕಂಡಿದ್ದು, ಲಕ್ಷಾಂತರ ಕನ್ನಡಾಭಿಮಾನಿಗಳು ಅಕ್ಷರ ಜಾತ್ರೆಗೆ ಸಾಕ್ಷಿಯಾದರು.
Prabhakara R
December 22, 2024
ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (Kannada Sahitya Sammelana) ಭಾನುವಾರ ರಾತ್ರಿ ಸಂಭ್ರಮದ ತೆರೆ ಕಂಡಿದ್ದು, ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಲಕ್ಷಾಂತರ ಸಾಹಿತ್ಯಾಭಿಮಾನಿಗಳು ಅಕ್ಷರ ಜಾತ್ರೆ ಯಶಸ್ಸಿಗೆ ಸಾಕ್ಷಿಯಾದರು. ಇನ್ನು ಸಮಾರೋಪದ ಸಮಾರಂಭದಲ್ಲಿ ಪ್ರಮುಖ 5 ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಎಲ್ಲಾ ಉಪ-ಬಂಧಗಳಗಳ ಜಾರಿ, ರಾಷ್ಟ್ರಕವಿಯನ್ನು ಶೀಘ್ರ ಘೋಷಿಸುವುದು ಸೇರಿ 5 ನಿರ್ಣಯಗಳನ್ನು ಜಾರಿ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು ಅವರು ನಿರ್ಣಯ ಮಂಡನೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಅವರು ಅಧ್ಯಕ್ಷತೆ ವಹಿಸಿದ್ದರು, ಸಾಹಿತ್ಯಾಭಿಮಾನಿಗಳು ನಿರ್ಣಯ ಅಂಗೀಕರಿಸಿದರು.
ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಗೊ.ರು ಚನ್ನಬಸಪ್ಪ, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಹಲವು ಸಚಿವರು, ಶಾಸಕರು ಭಾಗಿಯಾಗಲಿದ್ದಾರೆ. ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಗೊ.ರು ಚನ್ನಬಸಪ್ಪ, ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ಉಪಸ್ಥಿತರಿದ್ದರು.
ಸಮ್ಮೇಳನದ ಪ್ರಮುಖ ಆರು ನಿರ್ಣಯಗಳು
1.ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಎಲ್ಲಾ ಉಪ-ಬಂಧಗಳು ಮತ್ತು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮವು ಸಮಗ್ರವಾಗಿ ಜಾರಿಗೆ ಬರಬೇಕಿದ್ದು, ಕೂಡಲೇ ಅನುಷ್ಠಾನ ಆಗಬೇಕು. ಸ್ವಾಯತ್ತತೆ ಹೊಂದಿರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರನ್ನು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ 'ರಾಜ್ಯ ಮಟ್ಟದ ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲು ಸೂಕ್ತ ತಿದ್ದುಪಡಿ ತರಬೇಕು.
2.ರಾಜ್ಯದಲ್ಲಿರುವ ಸರ್ಕಾರದ ಎಲ್ಲಾ ಕನ್ನಡ ಶಾಲೆಗಳಿಗೆ ಕಟ್ಟಡ, ವಾಚನಾಲಯ, ಆಟದ ಮೈದಾನ ಸೇರಿ ಇತರೆ ಮೂಲಸೌಕರ್ಯಗಳನ್ನು ಒದಗಿಸುವ ಮತ್ತು ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿಯ ಕ್ರಮಕ್ಕೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು. ಕನ್ನಡೇತರ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ಕಡ್ಡಾಯವಾಗಿ ನೇಮಕ ಮಾಡಬೇಕು.
3.ಕನ್ನಡ ಅನ್ನದ ಭಾಷೆಯಾಗಲು ಕನ್ನಡಿಗರ ಉದ್ಯೋಗಕ್ಕೆ ತಡೆಯಾಗಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸರ್ಕಾರ ಸಮರ್ಪಕವಾಗಿ ಎದುರಿಸಬೇಕು. ಸರೋಜಿನಿ ಮಹಿಷಿ ಮರದಿಯನ್ನು ಶಾಸನಬದ್ಧಗೊಳಿಸಿ ಅನುಷ್ಠಾನಗೊಳಿಸಬೇಕು.
4. ದಾವಣಗೆರೆಯಲ್ಲಿ ನಡೆಯಬೇಕಿರುವ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಅತಿ ಶೀಘ್ರದಲ್ಲಿ ನಡೆಸಬೇಕು
5. ಕರ್ನಾಟಕ ಸರ್ಕಾರವು ರಾಷ್ಟ್ರಕವಿಯನ್ನು ಅತಿ ಶೀಘ್ರದಲ್ಲಿ ಘೋಷಿಸಬೇಕು.
ಈ ಸುದಿಯನ್ನೂ ಓದಿ | Kannada Sahitya Sammelana: ಮರ್ಯಾದಾ ಹತ್ಯೆ ಪರಶುರಾಮ ಸಂಸ್ಕೃತಿ: ತಾರಿಣಿ ಶುಭದಾಯಿನಿ
ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ; ಕಸಾಪ ಸಭೆಯಲ್ಲಿ ತೀರ್ಮಾನ
ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (Kannada Sahitya Sammelana) ನಡೆಯುತ್ತಿದೆ. ಮೂರನೇ ದಿನವಾದ ಭಾನುವಾರ (ಡಿ. 22) ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬೀಳಲಿದೆ. ಈ ನಡುವೆ ಮುಂದಿನ ಬಾರಿಯ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ಆಯೋಜಿಸಲು ಶನಿವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ದೆಹಲಿ ಸೇರಿ ಮೂರು ಸ್ಥಳಗಳ ಹೆಸರು ಚರ್ಚೆಗೆ ಬಂದಿತು. ಅಂತಿಮವಾಗಿ ಗಡಿನಾಡು ಬಳ್ಳಾರಿಗೆ ಕನ್ನಡ ಸಾಹಿತ್ಯ ಜಾತ್ರೆ ನಡೆಸುವ ಅವಕಾಶ ಸಿಕ್ಕಿದೆ.
ಶನಿವಾರ ಮಂಡ್ಯದ ಖಾಸಗಿ ಹೋಟೆಲ್‌ನಲ್ಲಿ ನಡೆದ ಎಲ್ಲಾ ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ ಪ್ರತಿನಿಧಿಗಳ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳವನ್ನು ನಿಗದಿ ಮಾಡಲಾಗಿದೆ. ಆದರೆ ದಿನಾಂಕವನ್ನು ಇನ್ನೂ ಅಂತಿಮಗೊಳಿಸಿಲ್ಲ. ಈ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಚಿಕ್ಕಮಗಳೂರು, ನವದೆಹಲಿ ಮತ್ತು ಬಳ್ಳಾರಿಯ ಹೆಸರುಗಳು ಕೇಳಿ ಬಂದವು. ವಿವರವಾಗಿ ಚರ್ಚಿಸಿದ ಬಳಿಕ ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ.
88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆತಿಥ್ಯ ಪಡೆಯುವ ಮೂಲಕ ಬಳ್ಳಾರಿ 68 ವರ್ಷಗಳ ಬಳಿಕ ಕನ್ನಡ ಸಾಹಿತ್ಯ ಜಾತ್ರೆಯ ಸಾರಥ್ಯ ವಹಿಸಲಿದೆ. 1926, 1938 ಮತ್ತು 1958ರಲ್ಲಿ ಬಳ್ಳಾರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. 1958ರಲ್ಲಿ ಬಳ್ಳಾರಿ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿ. ಕೃ. ಗೋಕಾಕ್ ಅಧ್ಯಕ್ಷರಾಗಿದ್ದರು. ಈಗ 68 ವರ್ಷಗಳ ಬಳಿಕ ಪುನಃ ಬಳ್ಳಾರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಮಂಡ್ಯದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.