Kannada Sahitya Sammelana: ಸಮ್ಮೇಳನದ ಸ್ವಾರಸ್ಯಗಳು: ಸಮಾನಾಂತರ ವೇದಿಕೆಯೂ ಕಬ್ಬಿನ ಗದ್ದೆಯೂ!
Kannada Sahitya Sammelana: ಸಮ್ಮೇಳನದ ಶೌಚಾಲಯದ ಅವ್ಯವಸ್ಥೆಯಿಂದ ರೋಸಿಹೋದ ಜನ ಗುಂಪುಗುಂಪಾಗಿ ನಿಸರ್ಗದ ಕರೆಗೆ ಓಗೊಡಲು ಕಬ್ಬಿನ ಗದ್ದೆಗೆ ನುಗ್ಗುತ್ತಿದ್ದರು. ಹೀಗಾಗಿ ಸಮಾನಾಂತರ ಗೋಷ್ಠಿಗಳ ಪ್ರೇಕ್ಷಕರು ಈ ʼಮನೋಹರ ದೃಶ್ಯʼಗಳಿಗೂ ಸಾಕ್ಷಿ ಆಗಬೇಕಾಯಿತು.
Prabhakara R
December 21, 2024
ಮಂಡ್ಯ: 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸಮಾನಾಂತರ ವೇದಿಕೆಗಳು ಇನ್ನೊಂದು ʼಬಿಕ್ಕಟ್ಟʼನ್ನು ಎದುರಿಸಿದವು. ಸಮಾನಾಂತರ ವೇದಿಕೆಗಳ ಪಕ್ಕದಲ್ಲೇ ಕಬ್ಬಿನ ಗದ್ದೆಗಳಿದ್ದವು. ಸಮ್ಮೇಳನದ ಶೌಚಾಲಯದ ಅವ್ಯವಸ್ಥೆಯಿಂದ ರೋಸಿಹೋದ ಜನ ಗುಂಪುಗುಂಪಾಗಿ ನಿಸರ್ಗದ ಕರೆಗೆ ಓಗೊಡಲು ಕಬ್ಬಿನ ಗದ್ದೆಗೆ ನುಗ್ಗುತ್ತಿದ್ದರು. ಹೀಗೆ ಹೋಗುವಾಗ ವೇದಿಕೆ ಹಾಗೂ ಪ್ರೇಕ್ಷಕರ ಗ್ಯಾಲರಿಯ ನಡುವೆಯೇ ಅವಸರವಸರದಿಂದ ನುಗ್ಗುತ್ತಿದ್ದರು. ಸಭಾಂಗಣದ ಪಕ್ಕದಲ್ಲೇ ಬೆನ್ನು ತಿರುಗಿಸಿ ನಿಲ್ಲುತ್ತಿದ್ದರು. ಹೀಗಾಗಿ ಸಮಾನಾಂತರ ಗೋಷ್ಠಿಗಳ ಪ್ರೇಕ್ಷಕರು ಈ ʼಮನೋಹರ ದೃಶ್ಯʼಗಳಿಗೂ ಸಾಕ್ಷಿ ಆಗಬೇಕಾಯಿತು. ವೇದಿಕೆ ತೀರಾ ಕಬ್ಬಿನ ಗದ್ದೆಯ ಪಕ್ಕದಲ್ಲೇ ಇದ್ದುದರಿಂದ ಕಬ್ಬಿನ ಪರಿಮಳದ ಜತೆಗೆ ಇತರ ಪರಿಮಳವನ್ನೂ ಸಂಪನ್ಮೂಲ ವ್ಯಕ್ತಿಗಳು ಅನುಭವಿಸುವಂತಾಯಿತು!
ಸಾಹಿತ್ಯದಲ್ಲಿ ರಾಜಕೀಯʼಸಾಹಿತ್ಯದಲ್ಲಿ ರಾಜಕೀಯ, ರಾಜಕೀಯದಲ್ಲಿ ಸಾಹಿತ್ಯʼ ಗೋಷ್ಠಿಗೆ ನಿರೀಕ್ಷಿಸಿದಂತೆ ಸಿ.ಟಿ ರವಿ ಹಾಜರಾಗಲಿಲ್ಲ. ಎಚ್.ಕೆ ಪಾಟೀಲ ಅವರು ಅರ್ಧ ಗಂಟೆ ತಡವಾಗಿ ಗೋಷ್ಠಿಗೆ ಹಾಜರಾದರು. ಆಗ ಮಾತನಾಡುತ್ತಿದ್ದವರ ಮಾತನ್ನು ನಿಲ್ಲಿಸಿ ಎಚ್‌ಕೆ ಪಾಟೀಲರಿಗೆ ಸ್ವಾಗತ ಕೋರಲಾಯಿತು. ನಂತರ ಭಾಷಣಕಾರರು ಭಾಷಣ ಮುಂದುವರಿಸಿದರು. ಇದೂ ಕೂಡ ಸಾಹಿತ್ಯದಲ್ಲಿ ರಾಜಕೀಯದ ಉದಾಹರಣೆಯಾಗಿ ನಿಂತಿತು.
ಶಾಲಾ ಮಕ್ಕಳ ಆಗಮನಎರಡನೇ ದಿನ ಶಾಲಾ ಮಕ್ಕಳು ಬಹುಸಂಖ್ಯೆಯಲ್ಲಿ ಕಂಡುಬಂದರು. ಮಂಡ್ಯ ಹಾಗೂ ಮದ್ದೂರಿನ ಹಲವು ಶಾಲಾ ಮಕ್ಕಳನ್ನು ಕರೆತರಲಾಗಿತ್ತು. ಪ್ರಧಾನ ಗೋಷ್ಠಿಯ ವೇದಿಕೆಯ ಗೋಷ್ಠಿಗಳಿಗೆ ಇವರನ್ನು ಒತ್ತಾಯಪೂರ್ವಕವಾಗಿ ಕೂರಿಸಲಾಗಿತ್ತು. ಮಕ್ಕಳು ಆಕಳಿಸಿ ನಿದ್ದೆಹೋದರು ಅಥವಾ ಅಲ್ಲಲ್ಲೇ ಹರಟೆ ಹೊಡೆದರು. ನಂತರ ಇವರನ್ನು ಕರೆದುಕೊಂಡು ಶಿಕ್ಷಕರು ಪುಸ್ತಕದ ಸ್ಟಾಲ್‌ಗಳಿಗೆ ಲಗ್ಗೆಯಿಟ್ಟರು. ಪುಸ್ತಕಗಳನ್ನು ಕಂಡು ಖುಷಿಪಟ್ಟರಾದರೂ ಅವುಗಳನ್ನು ಕೊಂಡುಕೊಳ್ಳಲು ಅವರ ಬಳಿ ಹಣವಿರಲಿಲ್ಲ.
ಸೆಲ್ಪಿ ಕ್ರೇಜಿಗೆ ಬಾಲಣ್ಣ ವೈಲೆಂಟ್!ಪ್ರಧಾನ ವೇದಿಕೆಯಲ್ಲಿ ಗೋಷ್ಠಿಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಗಣ್ಯರ ಬಳಿ ಕೆಲವರು ವೇದಿಕೆ ಮೇಲೆ ಸೆಲ್ಪಿ ತೆಗೆದುಕೊಳ್ಳುತ್ತಿದ್ದರಿಂದ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ಗೋಷ್ಠಿ ನಡೆಯಬೇಕಾದರೆ ಸಾವಧಾನವಾಗಿ ಕೇಳಿಸಿಕೊಳ್ಳಬೇಕು. ವೇದಿಕೆ ಪಾವಿತ್ರ್ಯತೆ ಕಾಪಾಡಬೇಕು. ಅದು ಬಿಟ್ಟು ಸೆಲ್ಪಿ ಫೋಟೊ ವೇದಿಕೆ ಕ್ಲಿಕ್ಕಿಸಿಕೊಳ್ಲುವುದು ಸರಿಯಾದ ಕ್ರಮವಲ್ಲ ಎಂದು ಕಿಡಿಕಾರಿದರು.
ಅಣ್ಣಾವ್ರ ಪೋಸ್ಟರ್‌ಗಳುಪುಸ್ತಕ ಮಳಿಗೆ ಸಿ ಬ್ಲಾಕ್‌ನ ಆರಂಭದಲ್ಲಿ ಇಡಲಾಗಿದ್ದ ಅಣ್ಣಾವ್ರ ಚಿತ್ರಗಳ ಕಾರ್ಟೂನ್‌ಗಳು ಗಮನ ಸೆಳೆದವು. ಮಂಡ್ಯದ ನರಸಿಂಹಾಚಾರ್ ಎಂಬ ಚಿತ್ರಕಲಾ ಶಿಕ್ಷಕರು ರಾಜ್‌ಕುಮಾರ್ ಅವರ ನೂರಾರು ಚಲನಚಿತ್ರಗಳ ಪೋಸ್ಟರ್‌ಗಳನ್ನು ಚಿತ್ರಿಸಿ ಪ್ರದರ್ಶಿಸಿದರು. ಇವು ಚಿತ್ರರಸಿಕರ ಮತ್ತು ಅಣ್ಣಾವ್ರ ಅಭಿಮಾನಿಗಳ ಕಣ್ಣಿಗೆ ಹಬ್ಬ ಎನಿಸಿದವು. ಹಲವರು ಸೆಲ್ಫಿ ತೆಗೆದುಕೊಂಡರು.
ಬೆಳಗ್ಗೆ ಖಾಲಿ, ರಾತ್ರಿ ಜಾಲಿ ಜಾಲಿಕನ್ನಡ ಸಾಹಿತ್ಯ ಸಮ್ಮೇಳನ ಎಂದರೆ ಪುಸ್ತಕದ್ದೆ ಕಾರುಬಾರು ಎಂಬುದು ನೆಪಕ್ಕಷ್ಟೆ. ಸದರಲ್ಲೂ ಗೋಷ್ಠಿಗಳಿಗಂತೂ ಜನ ಆಸಕ್ತಿ ತೋರಲಿಲ್ಲ. ಆದರೆ ರಾತ್ರಿ ನಡೆಯುವ ಸಂಗೀತ ಕಾರ್ಯಕ್ರಮಕ್ಕೆ ಮಾತ್ರ ಇಡೀ ವೇದಿಕೆ ಹೌಸ್ ಪುಲ್. ಸಮ್ಮೇಳನದಲ್ಲಿ ಅರ್ಥಪೂರ್ಣ ಗೋಷ್ಠಿಗಳಿದ್ದರೂ ಕೇಳುವವರೆ ಇಲ್ಲವಾಗಿದೆ. ಖಾಲಿ ಖುರ್ಚಿಗಳಿಗೆ ಗೋಷ್ಠಿ ಮಾಡುವ ವಂತಿತ್ತು. ಮಧ್ಯಾಹ್ನದ ಬಳಿಕ ಜನ ಸಮಾಧಾನಕ್ಕೆ ಬಂದರೂ ಬೆಳಗ್ಗಿನ ಗೋಷ್ಠಿಗರ ಜನರೆ ಇರಲಿಲ್ಲ. ಶುಕ್ರವಾರ ರಾತ್ರಿ ನಡೆದ ಸಂಗೀತ ಕಾರ್ಯಕ್ರಮಕ್ಕೆ ಮಾತ್ರ ಜನಸ್ತೋಮವೇ ಬಂದಿತ್ತು. ಅಲ್ಲದೆ ಹಾಡುಗಾರರಾದ ಸಾಧುಕೋಕಿಲ ಹಾಗೂ ರಾಜೇಶ್ ಕೃಷ್ಣನ್ ಅವರು ಹಾಡುಗಳನ್ನು ಕೇಳಲು ಜನ ಬಂದಿದ್ದರು. ಜನ ಸಾಹಿತ್ಯಕ್ಕೆ ಕಡಿಮೆ ಆಸಕ್ತಿ ತೋರಿರುವುದು ಸಾಬೀತಾಗಿದೆ.
ದಲಿತ ಸಾಹಿತ್ಯ ನೆಲೆಗಳು ಕುರಿತ ಗೋಷ್ಠಿ ನಡುವೆ ಕೆಲವರಿಂದ ಪ್ರತಿಭಟನೆಇತ್ತೀಚಿನ ದಿನಗಳಲ್ಲಿ ಹಿಂದಿ ಭಾಷೆ ಕನ್ನಡ ಮೇಲೆ ಸವಾರಿ ಮಾಡುತ್ತಿದೆ. ಪರಿಣಾಮ, ಕನ್ನಡ ಭಾಷೆಯ ಕಡೆಗಣನೆ ಹೆಚ್ಚಾಗುತ್ತಿದೆ. ಈ ಸಾಹಿತ್ಯ ಸಮ್ಮೇಳನದಲ್ಲಿ ಈ ಕುರಿತು ಖಡಕ್ ನಿರ್ಧಾರ ತಳೆಯಲೇಬೇಕು ಎಂದು ಕೆಲವರು ಒತ್ತಾಯಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ವೇದಿಕೆಯ ನಿರ್ವಹಣಾಕಾರರು ಎಲ್ಲರನ್ನೂ ಸಮಾಧಾನಗೊಳಿಸಿ ಗೋಷ್ಠಿ ಮುಂದುವರೆಯಲು ಅನುವು ಮಾಡಿಕೊಟ್ಟರು.
ಈ ಸುದ್ದಿಯನ್ನೂ ಓದಿ | Kannada Sahitya Sammelana: ಅವ್ಯವಸ್ಥೆಗಳು ಸರಿಯಾಗಲಿಲ್ಲ, ಸಮಾನಾಂತರಕ್ಕೆ ಜನ ಬರಲಿಲ್ಲ
'ಸ್ವರಚಿತ ಕವನ ಓದಿ - ಉಚಿತ ಸಸ್ಯ ಕಾಣಿಕೆ ಪಡೆಯಿರಿ'
ಸಾಹಿತ್ಯ ಸಮ್ಮೇಳನದ ವಸ್ತು ಪ್ರದರ್ಶನ ಮಳಿಗೆಯೊಂದರಲ್ಲಿ 'ಸ್ವರಚಿತ ಕವನ ಓದಿ - ಉಚಿತ ಸಸ್ಯ ಕಾಣಿಕೆ ಪಡೆಯಿರಿ' ಎಂಬ ವಿನೂತನ ಕಾರ್ಯಕ್ರಮ ಸಾಹಿತ್ಯಾಸಕ್ತರ ಗಮನ ಸೆಳೆಯುತ್ತಿದೆ. ಸಾಹಿತ್ಯದ ಜತೆಗೆ ಪರಿಸರ ಸಂರಕ್ಷಣೆ ಅರಿವಿಗೆ ಒತ್ತು ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ವಸ್ತು ಪ್ರದರ್ಶನ ಮಳಿಗೆಯ ಸಂಖ್ಯೆ 76ರಲ್ಲಿ 'ಸ್ವರಚಿತ ಕವನ ಓದಿ - ಉಚಿತ ಸಸ್ಯ ಕಾಣಿಕೆ ಪಡೆಯಿರಿ' ಎಂಬ ವಿನೂತನ ಕಾರ್ಯಕ್ರಮ ನಡೆಯುತ್ತಿದೆ. ಸಾಹಿತ್ಯಾಭಿಮಾನಿಗಳ ಪ್ರತಿಕ್ರಿಯೆಯೂ ಉತ್ತಮವಾಗಿತ್ತು. ಬೆಂಗಳೂರಿನ ಸಸ್ಯಯಜ್ಞ ತಂಡವು ಜಿಲ್ಲಾ ಯುವ ಬರಹಗಾರರ ಬಳಗದ ಸಹಯೋಗದಲ್ಲಿ ಈ ಅಭಿಯಾನ ಹಮ್ಮಿಕೊಂಡಿದೆ. ನಾಡಿನ ವಿವಿಧ ಭಾಗದಿಂದ ಬಂದಿದ್ದ ಸುಮಾರು 290 ಕವಿ-ಕವಯತ್ರಿಯರು ಸ್ವರಚಿತ ಕವನ ವಾಚಿಸಿ 'ಔಷಧೀಯ' ಸಸ್ಯಗಳನ್ನು ಕಾಣಿಕೆಯಾಗಿ ಪಡೆದ ಸಂಭ್ರಮಿಸಿದ್ದಾರೆ.