Kannada Sahitya Sammelana: ಪ್ರತಿ ವರ್ಷ ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿ: ಲೇಖಕ ಕಿರಣ್ ಉಪಾಧ್ಯಾಯ
Kannada Sahitya Sammelana: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಿದ್ದ "ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ" ಗೋಷ್ಠಿಯಲ್ಲಿ ಬಹ್ರೈನ್‌ನ ಅಂಕಣಕಾರ, ಲೇಖಕ ಕಿರಣ್ ಉಪಾಧ್ಯಾಯ ಅವರು ಮಾತನಾಡಿದ್ದಾರೆ.
Prabhakara R
December 22, 2024
ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಂತೆ ವರ್ಷಕ್ಕೊಮ್ಮೆ ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಮುಖಾಂತರ ವಿದೇಶದಲ್ಲಿ ಕನ್ನಡದ ಕಂಪು ಹರಡಬೇಕು ಎಂದು ಬಹ್ರೈನ್‌ನ ಅಂಕಣಕಾರ, ಲೇಖಕ ಕಿರಣ್ ಉಪಾಧ್ಯಾಯ ಹೇಳಿದರು. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ (Kannada Sahitya Sammelana) ರಾಜಮಾತೆ ಕೆಂಪನಂಜಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆಯಲ್ಲಿ ಆಯೋಜಿಸಿದ್ದ "ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ" ಗೋಷ್ಠಿಯಲ್ಲಿ ಅವರು ಆಶಯ ನುಡಿಗಳನ್ನಾಡಿದರು.
ವಿದೇಶದಲ್ಲಿರುವ ಕನ್ನಡಿಗರನ್ನು ಅನ್ಯರಂತೆ ಭಾವಿಸಬೇಡಿ. ಜಗತ್ತಿನ 175 ದೇಶಗಳಲ್ಲಿ ಕನ್ನಡ ಸಂಘಟನೆಗಳು ಬಹಳ ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ವಿಶೇಷವೆಂದರೆ ಬಹ್ರೈನ್‌ನಲ್ಲಿ ಸ್ವಂತ ಕನ್ನಡ ಭವನದ ಕಟ್ಟಡವಿದೆ. ಅದರಲ್ಲಿ ಸಭಾಂಗಣ, ವಾಚನಾಲಯ, ಸಭಾಭವನ ಒಳಗೊಂಡಿದ್ದು, ಅಲ್ಲಿ ಕನ್ನಡದ ತರಗತಿಗಳು ಕೂಡ ನಡೆಯುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಮೆರಿಕ ಕನ್ನಡ ಕೂಟ (ಅಕ್ಕ)ದ ಅಧ್ಯಕ್ಷ ಅಮರನಾಥ ಗೌಡ ಅವರು, ವಿದೇಶದಲ್ಲಿ 40 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದು ಅವರಲ್ಲಿ 5 ಲಕ್ಷಕ್ಕೂ ಅಧಿಕ ಕನ್ನಡಿಗರು ಅಮೆರಿಕಾದಲ್ಲೇ ಇದ್ದಾರೆ. ಅಕ್ಕ ಸಮೇಳನದ ಮೂಲಕ ವಿದೇಶದಲ್ಲಿ ಕನ್ನಡ ಕಟ್ಟುವ ಕೆಲಸ ಮಾಡಲಾಗುತ್ತಿದೆ. ವಿದೇಶದಲ್ಲಿ ಕನ್ನಡ ಕಟ್ಟುವುದು ಸವಾಲಿನ ಕೆಲಸ. ಆದರೂ ಕನ್ನಡತನವನ್ನು ಗಟ್ಟಿಗೊಳಿಸುವ ಕನ್ನಡದ ಲಿಪಿ ಉಳಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ವಿದೇಶದಲ್ಲಿರುವ ಕನ್ನಡಿಗರ ಸಮಸ್ಯೆಗಳು, ಪರಿಹಾರಗಳು ವಿಷಯದ ಬಗ್ಗೆ ಮಾತನಾಡಿದ ಕತಾರ್‌ನ ಎಚ್. ಕೆ. ಮಧು ಅವರು, ಶ್ರಮಿಕ ವರ್ಗ ಹಾಗೂ ಅವರ ಕುಟುಂಬ ವರ್ಗದ ಸ್ಣತಿಗತಿಗಳ ಬಗ್ಗೆ ವಿವರಿಸಿದರು. ಶ್ರಮಿಕ ವರ್ಗದವರಿಗೆ ಸಾಮಾಜಿಕ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಜಗತ್ತಿನ ರಾಷ್ಟ್ರಗಳಲ್ಲಿ ಮಾತೃಭಾಷೆಯನ್ನು ನೋಡುವ ಕ್ರಮ ವಿಷಯದ ಬಗ್ಗೆ ಮಾತನಾಡಿದ ಇಂಗ್ಲೆಂಡ್‌ನ ಅಶ್ವಿನ್ ಶೇಷಾದ್ರಿ, ಫ್ರಾನ್ಸ್, ಜರ್ಮನಿ, ಚೀನಾದವರು ಎಂದಿಗೂ ಮಾತೃಭಾಷೆಯನ್ನು ಬಿಟ್ಟುಕೊಡುವುದಿಲ್ಲ. ಅವರು ಅವರ ಭಾಷೆ ಬಿಟ್ಟು ಅನ್ಯ ಭಾಷೆ ಮಾತನಾಡುವುದಿಲ್ಲ. ಹೀಗಾಗಿ ಅನ್ಯಭಾಷಿಕರು ಅವರ ಭಾಷೆ ಕಲಿಯುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ನಾವು ಕೂಡ ನಮ್ಮ ಭಾಷೆ ಬಗ್ಗೆ ಅಭಿಮಾನ ಹೊಂದಿರಬೇಕು ಎಂದರು.
ಹೊರನಾಡಿನಲ್ಲಿ ಕನ್ನಡದ ಅಸ್ತಿತ್ವ, ಸವಾಲುಗಳು ವಿಷಯದ ಬಗ್ಗೆ ಮಹಾರಾಷ್ಟ್ರದ ಕಮಲಾಕರ ಕಡವೆ ಮಾತನಾಡಿ, ಬ್ಯಾಂಕಿಂಗ್, ಐಟಿ, ಹೋಟೆಲ್, ಶಿಕ್ಷಣ ಕ್ಷೇತ್ರಗಳಲ್ಲಿ ಬಹುತೇಕ ಕನ್ನಡಿಗರೇ ಕಾಣುತ್ತಾರೆ. ಹೊರರಾಜ್ಯ, ಹೊರದೇಶದ ಸಂಸ್ಕೃತಿ, ಭಾಷೆ ಜೊತೆಗೆ ವಿಲೀನಗೊಂಡು ಹೊಂದಿಕೊಳ್ಳುವ ಶಕ್ತಿ ಕನ್ನಡಿಗರಿಗಿದೆ ಎಂದು ಹೇಳಿದರು.
ವಿದೇಶದಲ್ಲಿರುವ ಕನ್ನಡ ಶಾಲೆಗಳ ಸ್ಥಿತಿಗತಿಗಳು ವಿಷಯದ ಬಗ್ಗೆ ಮಾತನಾಡಿದ ಯುಎಇನ ಶಶಿಧರ ನಾಗರಾಜಪ್ಪ ಅವರು, ಅಮೆರಿಕ, ಅರಬ್ ದೇಶಗಳು, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ನಾನಾ ರಾಷ್ಟ್ರಗಳಲ್ಲಿ 5866 ವಿದ್ಯಾರ್ಥಿಗಳಿಗೆ 704 ಶಿಕ್ಷಕರು ಕನ್ನಡ ಕಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು. ಜರ್ಮನಿಯ ರಶ್ಮಿ ನಾಗರಾಜ್ ಅವರು ಮಾತನಾಡಿ, ಜರ್ಮನಿಯಲ್ಲೂ ನಲಿ ಕಲಿ ಮಾದರಿಯಲ್ಲಿ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಈ ಸುದ್ದಿಯನ್ನೂ ಓದಿ | Kannada Sahitya Sammelana: ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ತೆರೆ; 5 ನಿರ್ಣಯ ಮಂಡನೆ