Mysore News: ಹೊಸ ವರ್ಷಾಚರಣೆಗೆ ತಂದಿದ್ದ ಕೇಕ್ ತಿಂದು 30ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥ
Mysore News: ಹುಣಸೂರಿನ ಬೋಳನಹಳ್ಳಿಯ ಶ್ರೀ ಮಂಜುನಾಥ ವಿದ್ಯಾಸಂಸ್ಥೆಯಲ್ಲಿ ಘಟನೆ ನಡೆದಿದೆ. ಹೊಸ ವರ್ಷದ ಮೊದಲ ದಿನದಂದು ಕೇಕ್ ಕಟ್ ಮಾಡಿ ಉಳಿದಿದ್ದ ಕೇಕ್ ಅನ್ನು ಎರಡು ದಿನದ ನಂತರ ತಿಂದ ಹಿನ್ನೆಲೆಯಲ್ಲಿ ಮಕ್ಕಳು ಅಸ್ವಸ್ಥಗೊಂಡಿದ್ದಾರೆ.
Prabhakara R
January 4, 2025
ಮೈಸೂರು: ಹೊಸ ವರ್ಷಾಚರಣೆಗೆ ತಂದಿದ್ದ ಕೇಕ್ ತಿಂದು 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ ಘಟನೆ ಮೈಸೂರು (Mysore News) ಜಿಲ್ಲೆಯ ಹುಣಸೂರಿನ ಬೋಳನಹಳ್ಳಿಯ ಶ್ರೀ ಮಂಜುನಾಥ ವಿದ್ಯಾಸಂಸ್ಥೆಯಲ್ಲಿ ನಡೆದಿದೆ. ಹೊಸ ವರ್ಷದ ಮೊದಲ ದಿನದಂದು ಕೇಕ್ ಕಟ್ ಮಾಡಿ ಉಳಿದಿದ್ದ ಕೇಕ್ ಅನ್ನು ಎರಡು ದಿನದ ನಂತರ ಮಕ್ಕಳು ತಿಂದಿದ್ದ ಮಕ್ಕಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡು, ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.
ಬೋಳನಹಳ್ಳಿಯ ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ಮಕ್ಕಳನ್ನು ದಾಖಲಿಸಲಾಗಿದೆ. ಚಿಕಿತ್ಸೆ ನಂತರ ವಿದ್ಯಾರ್ಥಿಗಳು ಚೇತರಿಸಿಕೊಂಡಿದ್ದಾರೆ. ಕೇಕ್ ತಿಂದು ಅಸ್ವಸ್ಥರಾಗಿದ್ದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆಸ್ಪತ್ರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್ ಭೇಟಿ ನೀಡಿ ಮಾಹಿತಿ ಪಡೆದಿದ್ದು, ನಿರ್ಲಕ್ಷ್ಯ ವಹಿಸಿದ ಶಾಲಾ ಮುಖ್ಯೋಪಾದ್ಯಾಯ ಅಶ್ವತ್ಥ್‌ರನ್ನು ತರಾಟೆ ತೆಗೆದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ | Road Accident: ಬೆಂಗಳೂರಲ್ಲಿ ಭೀಕರ ಅಪಘಾತ; ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ಅಕ್ಕ-ತಂಗಿ ದುರ್ಮರಣ
ಟಾಟಾ ಏಸ್ ಪಲ್ಟಿಯಾಗಿ 15ಕ್ಕೂ ಹೆಚ್ಚು ಮಕ್ಕಳಿಗೆ ಗಂಭೀರ ಗಾಯ
ಕೊರಟಗೆರೆ: ಹೊರ ಸಂಚಾರ ಮುಗಿಸಿಕೊಂಡು ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಟಾಟಾ ಏಸ್ ವಾಹನ ಪಲ್ಟಿಯಾಗಿ 15ಕ್ಕೂ ಹೆಚ್ಚು ಮಕ್ಕಳಿಗೆ ಗಂಭೀರ ಗಾಯಗಳಾಗಿರುವ ಘಟನೆ (Koratagere News) ಮಾವತ್ತೂರಿನ ಸಮೀಪ ಗೌಡನ ಕುಂಟೆ ಗೇಟ್ ಬಳಿ ಘಟನೆ ನಡೆದಿದೆ. ಗಾಯಾಳು ಮಕ್ಕಳಿಗೆ ದೊಡ್ಡ ಸಾಗ್ಗೆರೆ ಆಸ್ಪತ್ರೆ ಹಾಗೂ ಕೊರಟಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
50ಕ್ಕೂ ಹೆಚ್ಚು ಮಕ್ಕಳನ್ನು ಶೈಕ್ಷಣಿಕ ಪ್ರವಾಸದಿಂದ ವಾಪಸ್ ಕರೆದೊಯ್ಯುತ್ತಿದ್ದ ಟಾಟಾ ಏಸ್ ವಾಹನ, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದರಿಂದ 15ಕ್ಕೂ ಹೆಚ್ಚು ಮಕ್ಕಳಿಗೆ ತಲೆ, ಕೈಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಅಪಘಾತ ನಡೆದ ತಕ್ಷಣ ಸ್ಥಳಕ್ಕೆ ಕೋಳಾಲ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಯೋಗೇಶ್ ಮತ್ತು ತಂಡ ಭೇಟಿ ನೀಡಿ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಮಂಜುನಾಥ್, ಸರ್ಕಲ್ ಇನ್ಸ್ಪೆಕ್ಟರ್ ಅನಿಲ್ ಕೊಳಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಲಾ ಮಕ್ಕಳು ತೆರಳುತ್ತಿದ್ದ ವಾಹನ ಅಪಘಾತಕ್ಕೀಡಾದ ವಿಷಯ ತಿಳಿದ ತಕ್ಷಣ ಕೊರಟಗೆರೆ ಸರ್ಕಾರಿ ಆಸ್ಪತ್ರೆ ವೈದ್ಯರು ಅಲರ್ಟ್ ಆಗಿದ್ದು, ಮಕ್ಕಳು ಆಸ್ಪತ್ರೆಗೆ ಬಂದ ತಕ್ಷಣ ಚಿಕಿತ್ಸೆ ನೀಡಲಾಗಿದೆ. ಆತಂಕಗೊಂಡ ಪೋಷಕರು ಸರ್ಕಾರಿ ಆಸ್ಪತ್ರೆಗೆ ಧಾವಿಸಿದ್ದಾರೆ. 4 ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಕ್ಕಳಿಗೆ ತುರ್ತು ಚಿಕಿತ್ಸೆ ಕೊಡಿಸಲು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಶುಭಕಲ್ಯಾಣ್ ಆಸ್ಪತ್ರಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.
ಮಕ್ಕಳ ಜೀವದ ಜತೆ ಶಿಕ್ಷಕ ಚೆಲ್ಲಾಟವಾಡಿದ್ದು, 50ಕ್ಕೂ ಹೆಚ್ಚು ಮಕ್ಕಳನ್ನು ಟಾಟಾ ಏಸ್‌ನಲ್ಲಿ ಕರೆದುಕೊಂಡು ಹೋಗಲು ಅನುಮತಿ ಕೊಟ್ಟವರು ಯಾರು? ಕೊರಟಗೆರೆ ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷವೇ ಇಂತಹ ಅನಾಹುತಗಳಿಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಸೂಕ್ತ ವ್ಯವಸ್ಥೆ ಇಲ್ಲದೆ ಮಕ್ಕಳನ್ನು ಖಾಸಗಿ ವಾಹನದಲ್ಲಿ ಕರೆದೊಯ್ದ ಶಿಕ್ಷಕನ ವಿರುದ್ಧ ಕ್ರಮ ಆಗ್ರಹ ಕೇಳಿಬಂದಿದೆ. ಅಪಘಾತವಾದ ಸಮಯದಲ್ಲಿ ಶಾಲಾ ಶಿಕ್ಷಕನೇ ಟಾಟಾ ಏಸ್ ಅನ್ನು ಚಾಲನೆ ಮಾಡುತ್ತಿದ್ದರು ಎನ್ನಲಾಗಿದೆ.