Self Harming: ಮೊಬೈಲ್ ಜಾಸ್ತಿ ನೋಡಬೇಡ ಎಂದಿದ್ದಕ್ಕೆ ವಿಷ ಸೇವಿಸಿ ಯುವತಿ ಆತ್ಮಹತ್ಯೆ!
Self Harming: ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೊಬೈಲ್ ಹೆಚ್ಚು ಬಳಸಬೇಡ ಎಂದಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Prabhakara R
December 26, 2024
ಶಿವಮೊಗ್ಗ: ಮೊಬೈಲ್ ಜಾಸ್ತಿ ನೋಡಬೇಡ ಎಂದು ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ (Self Harming) ಶಿವಮೊಗ್ಗದ ಹಾರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಯುವತಿಯನ್ನು ಧನುಶ್ರೀ (20) ಎಂದು ಗುರುತಿಸಲಾಗಿದೆ.
ಈಕೆ ಶಿವಮೊಗ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಮೊಬೈಲ್ ಜಾಸ್ತಿ ಬಳಸುತ್ತಿದ್ದ ಹಿನ್ನೆಲೆಯಲ್ಲಿ ಮೊಬೈಲ್ ಹೆಚ್ಚು ಬಳಸಬೇಡ, ಓದಿನ ಕಡೆ ಗಮನ ಕೊಡು ಎಂದು ಪೋಷಕರು ಬುದ್ಧಿವಾದ ಹೇಳಿದ್ದರು.
ಇದೇ ವಿಚಾರಕ್ಕೆ ಮನನೊಂದ ಯುವತಿ ಕಳೆದ 3 ದಿನದ ಹಿಂದೆ ಮನೆಯಲ್ಲಿ ವಿಷ ಸೇವಿಸಿದ್ದಳು. ಯುವತಿಯನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಯುವತಿ ಮೃತಪಟ್ಟಿದ್ದಾಳೆ.
ಈ ಸುದ್ದಿಯನ್ನೂ ಓದಿ | Masood Azhar : ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ಗೆ ಹೃದಯಾಘಾತ
ಕಾರು ರಿವರ್ಸ್ ತೆಗೆಯುವಾಗ ಚಕ್ರಕ್ಕೆ ಸಿಲುಕಿ ಅಸುನೀಗಿದ 2 ವರ್ಷದ ಮಗು
ಬೆಳಗಾವಿ: ಬೆಳಗಾವಿಯಲ್ಲಿ (Belagavi news) ಘೋರ ದುರಂತವೊಂದು ನಡೆದಿದ್ದು, ಕಾರು ರಿವರ್ಸ್ ತೆಗೆದುಕೊಳ್ಳುವಾಗ ಕಾರಿನ ಚಕ್ರಕ್ಕೆ ಸಿಲುಕಿ 2 ವರ್ಷದ ಮಗುವೊಂದು ಸಾವನ್ನಪ್ಪಿರುವ (Child death) ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಜಗೌಡನಟ್ಟಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ಕಾರು ರಿವರ್ಸ್ ತೆಗೆದುಕೊಳ್ಳುವಾಗ ಕಾರಿನ ಗಾಲಿಗೆ ಸಿಲುಕಿ 2 ವರ್ಷದ ಮಗು ಸಾವನ್ನಪ್ಪಿದೆ. ಖಜಗೌಡನಟ್ಟಿ ಗ್ರಾಮದ ಮಂಜುನಾಥ್ ಖೋತ ಎಂಬುವರು ಕಾರು ರಿವರ್ಸ್ ತೆಗೆದುಕೊಳ್ಳುವಾಗ ಮಗು ಆಕಸ್ಮಿಕವಾಗಿ ಕಾರಿನ ಹಿಂದಿನ ಚಕ್ರಕ್ಕೆ ಸಿಲುಕಿ ಮೃತಪಟ್ಟಿದೆ. ಅನುಶ್ರೀ ರಾಮಕೃಷ್ಣ ಖೋತ(2) ಮೃತಪಟ್ಟ ಮಗು. ಪೊಲೀಸರು ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Train Accident: ಬೆಂಗಳೂರಿನಲ್ಲಿ ರೈಲಿಗೆ ಸಿಲುಕಿ ಇಬ್ಬರು ಯುವಕರು ದಾರುಣ ಸಾವು
ಬೆಂಗಳೂರು: ಬೆಂಗಳೂರಿನಲ್ಲಿ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ತಡರಾತ್ರಿ ಈ ದಾರುಣ ಘಟನೆ ಸಂಭವಿಸಿದೆ. ರೈಲ್ವೆ ಟ್ರ್ಯಾಕ್‌ನಲ್ಲಿ ಇವರು ಕುಳಿತಿದ್ದರು ಎಂದು ತಿಳಿಯಲಾಗಿದೆ.
ಬೆಂಗಳೂರಿನ ಮಾಗಡಿ ರಸ್ತೆಯ ರೈಲ್ವೇ ಗೇಟ್ ಬಳಿ ರೈಲಿಗೆ ಸಿಲುಕಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಯುವಕರನ್ನು ಸೂರ್ಯ, ಶರತ್ ಎಂದು ಗುರುತಿಸಲಾಗಿದೆ. ರಾತ್ರಿ 10:30ರ ವೇಳೆಗೆ ಇವರು ಟ್ರ್ಯಾಕ್ ಮೇಲೆ ಕೂತಿದ್ದಾಗ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ರೈಲಿಗೆ ಸಿಲುಕಿ ಸೂರ್ಯ ಹಾಗೂ ಶರತ್ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರೂ ಹಳಿಯ ಮೇಲೆ ಕುಳಿತು ಪಾರ್ಟಿ ಮಾಡುತ್ತಿದ್ದಿರಬಹುದು ಅಥವಾ ಕಿವಿಗೆ ಇಯರ್ ಫೋನ್ ಹಾಕಿಕೊಂಡಿದ್ದರಿಂದ ರೈಲು ಆಗಮನದ ಸದ್ದು ಇಬ್ಬರಿಗೂ ಕೇಳಿಸಿಲ್ಲ ಎಂದು ಶಂಕಿಸಲಾಗಿದೆ.