Road Accident: ಕೂಲಿ ಅರಸಿ ಹೊರಟವರು ಮಸಣ ಸೇರಿದರು; ಲಾರಿಗೆ ಕ್ರೂಸರ್ ಡಿಕ್ಕಿಯಾಗಿ ಇಬ್ಬರ ದುರ್ಮರಣ
Road Accident: ಚಾಲಕನ ನಿಯಂತ್ರಣ ತಪ್ಪಿ ಹಿಂಬದಿಯಿಂದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿಯಾಗಿ ದುರ್ಘಟನೆ ನಡೆದಿದೆ. ಮೃತರನ್ನು ರಾಯಚೂರು ಜಿಲ್ಲೆಯ ಮಾನ್ವಿ ಮೂಲದವರು ಎಂದು ಗುರುತಿಸಲಾಗಿದೆ.
Prabhakara R
January 12, 2025
ಶಿರಾ: ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ವಾಹನ ಲಾರಿಗೆ ಡಿಕ್ಕಿ ಆಗಿ, ಕ್ರೂಸರ್ ಚಾಲಕ ಸೇರಿ ಇಬ್ಬರು ಮೃತಪಟ್ಟು, ನಾಲ್ವರಿಗೆ ತೀವ್ರ ಗಾಯಗಳಾಗಿರುವ ಘಟನೆ (Road accident) ರಾಷ್ಟ್ರೀಯ ಹೆದ್ದಾರಿ 48 ರಲ್ಲಿರುವ ಎಮ್ಮೇರಹಳ್ಳಿ ಬ್ರಿಡ್ಜ್ ಬಳಿ ನಡೆದಿದೆ.
ಚಾಲಕ ಬಸವರಾಜು (40), ಸುರೇಶ್ (28) ಮೃತ ದುರ್ದೈವಿಗಳು. ಮೃತರನ್ನು ರಾಯಚೂರು ಜಿಲ್ಲೆಯ ಮಾನ್ವಿ ಮೂಲದವರು ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಆನಂದ್, ವೀರೇಶ್, ಆದೆಪ್ಪ, ನಾಗಮ್ಮ ತೀವ್ರ ಗಾಯಗೊಂಡಿದ್ದು, ಶಿರಾ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಕೂಲಿ ಕೆಲಸ ಮಾಡಲು ಬೆಂಗಳೂರಿನತ್ತ ಕ್ರೂಸರ್ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹಿಂಬದಿಯಿಂದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಕ್ರೂಸರ್ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನೆ ಸಂಬಂಧ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Fraud Case: ಸಚಿವ ಖಂಡ್ರೆ ಆಪ್ತನೆಂದು ಹೇಳಿ ಸರ್ಕಾರಿ ನೌಕರಿ ಕೊಡಿಸುವುದಾಗಿ 6 ಲಕ್ಷ ವಂಚನೆ; ಕೇಸ್ ದಾಖಲು
ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ್ದ ಆನಂದ್ ಪುತ್ರಿ ಸಾವು
ತಿಪಟೂರು ತಾಲೂಕಿನ ರಂಗಾಪುರ ಸಮೀಪದ ಚಿಕ್ಕಕೊಟ್ಟಿಗೇನಹಳ್ಳಿ ಆನಂದ್ ಪುತ್ರಿ, 13 ವರ್ಷದ ಕವನ ಉಸಿರಾಟದ ಸಮಸ್ಯೆಯಿಂದ ಶನಿವಾರ ಸಂಜೆ ಮೃತಪಟ್ಟಿದ್ದಾಳೆ. ಬಾಲಕಿಯು ಶ್ರೀ ಪರದೇಶಿ ವಿದ್ಯಾ ಸಂಸ್ಥೆಯಲ್ಲಿ 8 ತರಗತಿ ವ್ಯಾಸಂಗ ಮಾಡುತ್ತಿದ್ದಳು.
ಉಸಿರಾಟದ ಸಮಸ್ಯೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆಗೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಸಂಜೆ 6 ಗಂಟೆಯ ಸಮಯದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ವತ್ರೆಗೆ ಹೋಗುವಂತೆ ತಿಳಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೊರಟಾಗ ತಿಪಟೂರಿನಲ್ಲಿ 7.24 ರ ಸಮಯದಲ್ಲಿ ಮಗು ಸಾವನ್ನಪ್ಪಿದೆ.
ಇತ್ತೀಚೆಗೆ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆಯನ್ನು ಹಿಡಿಯಲು ಅರಣ್ಯ ಸಿಬ್ಬಂದಿ ಪರದಾಡುತ್ತಿದ್ದಾಗ ಆನಂದ್, ಚಿರತೆಯ ಬಾಲ ಹಿಡಿದು ಬೋನಿಗೆ ಹಾಕಿದ್ದರು. 5 ವರ್ಷದ ಚಿರತೆಯನ್ನು ಹಿಡಿದ ಆನಂದ್ ಅವರ ಧೈರ್ಯ, ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಇದೀಗ ಆನಂದ್ ಅವರ ಒಬ್ಬಳೇ ಮಗಳಾದ ಕವನ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದು, ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಆನಂದ್ ಎಂಬ ಯುವಕ ಚಿರತೆಯನ್ನು ಹಿಡಿದಿದ್ದು, ಆತನ ಚಾಕಚಕ್ಯತೆ ಮತ್ತು ಧೈರ್ಯ, ಸಾಹಸಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿರತೆಯೊಂದು ಹಲವು ದಿನಗಳಿಂದ ರಂಗಾಪುರ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು.ಅದನ್ನು ಸೆರೆ ಹಿಡಿಯಲು ಸತತ ಪ್ರಯತ್ನ ನಡೆದಿತ್ತು. ಈ ನಡುವೆ ಪುರಲೇಹಳ್ಳಿ ರಸ್ತೆಯಲ್ಲಿರುವ ಕುಮಾರ್ ಎಂಬವರ ಮನೆ ಬಳಿ ಚಿರತೆ ಕಾಣಿಸಿಕೊಂಡಿದೆ.
ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬಿಟ್ಟು ಚಿರತೆ ಸೆರೆಹಿಡಿಯುವ ಸಲುವಾಗಿ ಆಗಮಿಸಿದ್ದರು. ಆದರೆ ಚಿರತೆ ಸೆರೆಹಿಡಿಯಲಾಗದೇ ಕೈಚೆಲ್ಲಿ ಕುಳಿತರು. ಈ ವೇಳೆ ಅಲ್ಲಿಗೆ ಬಂದ ಆನಂದ ಚಿರತೆ ನೋಡಿ ಹಿಡಿಯಲು ಮುಂದಾಗಿ ಚಲಬಿಡದೆ ಕೊನೆಗೆ ಅದರ ಬಾಲ ಹಿಡಿದು ಬೋನಿಗೆ ಹಾಕಿದ್ದಾನೆ. ಯುವಕನ ನೋಡುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಶಾಕ್ ಆಗಿದ್ದಾರೆ. ಕೊನೆಗೆ ಸುಮಾರು 5 ವರ್ಷದ ಚಿರತೆಯನ್ನು ಹಿಡಿದ ಆನಂದ್ ಅವರ ಸಾಹಸವನ್ನು ಕೊಂಡಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | Jharkhand Horror: 100 ವಿದ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿ ಬರೀ ಬ್ಲೇಸರ್ಸ್‌ನಲ್ಲಿ ಮನೆಗೆ ಕಳಿಸಿದ ಪ್ರಿನ್ಸಿಪಾಲ್