SSLC Result 2025: ಬಿಹಾರ ಮೂಲದ ಶಿರಸಿ ವಿದ್ಯಾರ್ಥಿನಿ ಶಗುಫ್ತಾ ಅಂಜುಮ್ ರಾಜ್ಯಕ್ಕೆ ಪ್ರಥಮ, ತನುಶ್ರೀ ಜೋಶಿ ದ್ವಿತೀಯ
SSLC Result 2025: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ ಶಗುಫ್ತಾ ಅಂಜುಮ್ 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಶಿರಸಿ ನಗರದ ಶ್ರೀ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿನಿ ತನುಶ್ರೀ ಜೋಶಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ಈ ಕುರಿತ ವಿವರ ಇಲ್ಲಿದೆ.


ಶಿರಸಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ (SSLC Result 2025) ಶುಕ್ರವಾರ ಪ್ರಕಟವಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ ಶಗುಫ್ತಾ ಅಂಜುಮ್ 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅದೇ ರೀತಿಯಲ್ಲಿ ಶಿರಸಿ ನಗರದ ಶ್ರೀ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿನಿ ತನುಶ್ರೀ ಜೋಶಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ.
ತನ್ನ ಯಶಸ್ಸಿನ ಕುರಿತ ಮಾತನಾಡಿದ ವಿದ್ಯಾರ್ಥಿನಿ ಶಗುಫ್ತಾ ಅಂಜುಮ್, ನಾನು ಕಲಿಯುವುದಕ್ಕೆ ಶಾಲೆಯ ಶಿಕ್ಷಕರು ತುಂಬಾ ಸಹಕಾರ ನೀಡಿದ್ದಾರೆ. ನಾನು ಬಿಹಾರದವಳು, ನನಗೆ ಕನ್ನಡ ಬರುತ್ತಿರಲಿಲ್ಲ. ಆದರೆ ಇಲ್ಲಿ ನಾನು 9 ನೇ ತರಗತಿಗೆ ಬಂದು ಸೇರಿದವಳು. ಇಲ್ಲಿನ ಶಿಕ್ಷಣ ಉತ್ತಮವಾಗಿದ್ದುದರಿಂದ ಈ ಸಾಧನೆ ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.
ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ತನುಶ್ರೀ ಜೋಶಿ ಮಾತನಾಡಿ, ನಾನು ಯಾವುದೇ ಟ್ಯೂಷನ್‌ಗೆ ಹೋಗಿಲ್ಲ. ಇಲ್ಲಿನ ಶಿಕ್ಷಣದ ಗುಣಮಟ್ಟ ಉತ್ತಮವಾಗಿದ್ದು, ಕಲಿಕೆಗೆ ಬೇಕಾಗುವ ಎಲ್ಲ ಸೌಲಭ್ಯಗಳೂ ಈ ಶಾಲೆಯಲ್ಲಿ ಇವೆ. ಆದ್ದರಿಂದ ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.
ಸರ್ಕಾರಿ ಉರ್ದು ಶಾಲೆಯ ಮುಖ್ಯೋಪಾಧ್ಯಾಯ ಆನಂದ ಕೊರವರ ಮಾತನಾಡಿ, ನಮ್ಮ ಶಾಲೆಯಲ್ಲಿ ಉತ್ತಮ ಸಾಧನೆಯನ್ನು ಮಕ್ಕಳು ತೋರಿದ್ದು, ಶಗುಫ್ತಾ ಅಂಜುಮ್ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವುದು ನಮಗೆ ಹೆಮ್ಮೆ ತಂದಿದೆ. ಶಗುಪ್ತಾ ಅವರು ಮೂಲತಃ ಬಿಹಾರದವರು, ಕನ್ನಡದಲ್ಲಿ ನೂರಕ್ಕೆ ನೂರು ಅಂಕವನ್ನು ಕನ್ನಡದಲ್ಲಿ ಪಡೆದಿದ್ದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | SSLC Result 2025: ಎಸ್‌ಎಸ್‌ಎಲ್‌ಸಿ ಫಲಿತಾಂಶ; ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?
ಮಾರಿಕಾಂಬಾ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ರಾಜೇಶ ನಾಯ್ಕ ಮಾತನಾಡಿ, ಈ ವರ್ಷದ ಈ ಫಲಿತಾಂಶ ನಮಗೆ ಸಂತಸ ತಂದಿದೆ. ಟಾಪ್ 10 ನಲ್ಲಿ ನಮ್ಮ ಶಾಲೆಯ 14 ಮಕ್ಕಳಿದ್ದು, ಈ ಸಾಧನೆಗೆ ನಮ್ಮ ಶಿಕ್ಷಕ ವರ್ಗವೇ ಕಾರಣ ಎಂದರು.