Tulsi Gowda: ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ತುಳಸಿ ಗೌಡ ಇನ್ನಿಲ್ಲ
Tulsi Gowda: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪರಿಸರ ಪ್ರೇಮಿ ತುಳಸಿಗೌಡ ಅವರು ಸೋಮವಾರ ಸಂಜೆ ನಿಧನರಾದರು ಎಂದು ತಿಳಿದುಬಂದಿದೆ.
Prabhakara R
December 16, 2024
ಕಾರವಾರ: ಸಾಲು ಮರದ ತಿಮ್ಮಕ್ಕ ಅವರಂತೆಯೇ ಸಾವಿರಾರು ಮರಗಳನ್ನು ಬೆಳೆಸಿ ʼವೃಕ್ಷಮಾತೆʼ ಎಂದೇ ಖ್ಯಾತರಾಗಿರುವ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ (86) (Tulsi Gowda) ಅವರು ವಯೋ ಸಹಜ ಕಾಯಿಲೆಯಿಂದ ಸ್ವಗೃಹದಲ್ಲಿ ಸೋಮವಾರ ನಿಧನರಾದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪರಿಸರ ಪ್ರೇಮಿ ತುಳಸಿಗೌಡ ಅವರು ಇಂದು ಸಂಜೆ ನಿಧನರಾದರು ಎಂದು ತಿಳಿದುಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಇವರು ತಮ್ಮ ಜೀವಿತಾವಧಿಯಲ್ಲಿ ವರ್ಷಕ್ಕೆ 30 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿ ವೃಕ್ಷಮಾತೆ ಎಂದು ಖ್ಯಾತವಾಗಿದ್ದರು.
ಕಳೆದ 14 ಕ್ಕೂ ಹೆಚ್ಚು ವರ್ಷಗಳಿಂದ ಗಿಡಗಳನ್ನು ನೆಟ್ಟು ಬೆಳೆಸುವ ಕಾಯಕದಲ್ಲಿ ಇವರು ತೊಡಗಿದ್ದರು. ಮನೆಯಲ್ಲಿ ತೀರಾ ಬಡತನವಿದ್ದೂ ಕುಟುಂಬಕ್ಕಾಗಿ ಕೂಲಿ ಕೆಲಸವನ್ನು ಮಾಡುತ್ತಲೇ ಹಸಿರು ಕ್ರಾಂತಿ ಮಾಡಿದ್ದ ಪರಿಸರ ಪ್ರೇಮಿ ತುಳಸಿಗೌಡ ಅವರ ಪರಿಸರ ಪ್ರೇಮವನ್ನು ಪರಿಗಣಿಸಿ ಭಾರತ ಸರ್ಕಾದರದಿಂದ 2020ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇವರಿಗೆ ಸುಬ್ರಾಯ ಮತ್ತು ಸೋನಿ ಎಂಬ ಇಬ್ಬರು ಮಕ್ಕಳು ಇದ್ದಾರೆ.
ಈ ಸುದ್ದಿಯನ್ನೂ ಓದಿ | Kerala Commando: ರಜೆ ಕೊಡಲಿಲ್ಲವೆಂದು ಗುಂಡು ಹಾರಿಸಿಕೊಂಡು ಪೊಲೀಸ್ ಕಮಾಂಡೋ ಆತ್ಮಹತ್ಯೆ
ಪದ್ಮಶ್ರೀ ಸುಕ್ರಿ ಬೊಮ್ಮು ಗೌಡ ಅವರ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ತಮ್ಮದೇ ವಿಶಿಷ್ಟ ಸಾಧನೆಯ ಮೂಲಕ ಗಮನ ಸೆಳೆದ ಮಹಿಳಾ ಸಾಧಕಿ ತುಳಸಿ ಗೌಡ ಅವರು ಅತಿ ದೊಡ್ಡ ಪರಿಸರ ಪ್ರೇಮಿಯಾಗಿದ್ದರು. ಲಕ್ಷಕ್ಕೂ ಹೆಚ್ಚು ಮರ ಬೆಳೆಸಿದ್ದ ತುಳಸಿ ಅವರು ಕಟ್ಟಿಗೆ ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಮತ್ತಿಘಟ್ಟ ಅರಣ್ಯ ನರ್ಸರಿಯಲ್ಲಿ ಸೇವೆ ಮಾಡಿ ನಿವೃತ್ತರಾಗಿದ್ದರು. ಯುವ ಜನಾಂಗಕ್ಕೆ ನಿರಂತರ ತರಬೇತಿ, ಮಾರ್ಗದರ್ಶನ ನೀಡುವ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿದ್ದರು. ಹಾಲಕ್ಕಿ ಸಮುದಾಯದ ಜಾನಪದ ಕಲಾವಿದೆಯೂ ಆಗಿದ್ದ ತುಳಸಿ ಗೌಡ ಅವರ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ, ರಾಜ್ಯೋತ್ಸವ ಪ್ರಶಸ್ತಿ ,ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ ಸೇರಿ ಅನೇಕ ಸಮ್ಮಾನಗಳು ಸಂದಿದ್ದವು.
ಪರಿಸರದ ಜೊತೆ ಉತ್ತಮ ಒಡನಾಟವನ್ನು ಹೊಂದಿರುವ ಇವರು ಅಪರೂಪದ ಬೀಜ, ಗಿಡ, ಬಳ್ಳಿಗಳನ್ನು ಸಂಗ್ರಹಿಸಿ ಬಿತ್ತಿ ಬೆಳೆಸಿರುವದಷ್ಟೇ ಅಲ್ಲದೆ ರಸ್ತೆ ಬದಿಯಲ್ಲಿ ಸಾವಿರಾರು ಮರ ಗಿಡಗಳನ್ನು ನೆಟ್ಟು ಪ್ರೀತಿಸಿ ಪೋಷಿಸಿದವರು. ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೇ ಸೇವೆ ಸಲ್ಲಿಸಿದ್ದರು.