ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bomb threat: ಭಟ್ಕಳ ಸ್ಫೋಟಿಸುವ ಬೆದರಿಕೆ ಹಾಕಿದ್ದ ಖಾಲಿದ್‌ ಅಲಿಯಾಸ್‌ ನಿತಿನ್‌ ಶರ್ಮಾ ಬಂಧನ

Bomb threat: ಭಟ್ಕಳ ನಗರವನ್ನು ಸ್ಫೋಟ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಭಟ್ಕಳ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಇತರ ಪ್ರಮುಖ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದರು. ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದ ಸಹಾಯದಿಂದ ತಪಾಸಣೆ ನಡೆಸಿದ್ದರು.

ಭಟ್ಕಳ ಸ್ಫೋಟದ ಬೆದರಿಕೆ ಹಾಕಿದ್ದ ಖಾಲಿದ್‌ ಅಲಿಯಾಸ್‌ ನಿತಿನ್‌ ಶರ್ಮಾ ಸೆರೆ

ಬಂಧಿತ‌ ಖಾಲಿದ್‌ ಅಲಿಯಾಸ್ ನಿತಿನ್

ಹರೀಶ್‌ ಕೇರ ಹರೀಶ್‌ ಕೇರ Jul 16, 2025 8:38 AM

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರವನ್ನು (Bhatkal city) ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಖಾಲಿದ್ ಅಲಿಯಾಸ್ ನಿತಿನ್ ಶರ್ಮಾ (Khalid alias Nitin Sharma) ಎಂಬಾತನನ್ನು ಉತ್ತರ ಕನ್ನಡ ಪೊಲೀಸರು (Uttara Kannada Police) ವಶಕ್ಕೆ ಪಡೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಭಟ್ಕಳ ನಗರವನ್ನು ಸ್ಫೋಟ (Bomb threat) ಮಾಡುವುದಾಗಿ ಆರೋಪಿ ಖಾಲಿದ್ ಭಟ್ಕಳ ಪೊಲೀಸರಿಗೆ ಇಮೇಲ್ ಮಾಡಿದ್ದ. ಈಗಾಗಲೇ ಜೈಲಿನಲ್ಲೇ ಇರುವ ಆರೋಪಿ ಖಾಲಿದ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ವೇಳೆ ಹಲವಾರು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ.

ಇದೇ ಜುಲೈ 10ರಂದು ಬೆಳಗ್ಗೆ 7.23ರ ಸುಮಾರಿಗೆ ಭಟ್ಕಳ ನಗರ ಠಾಣೆ ಪೊಲೀಸರಿಗೆ ಬೆದರಿಕೆ ಇಮೇಲ್ ಬಂದಿತ್ತು. ಭಟ್ಕಳ ನಗರವನ್ನು ಸ್ಫೋಟ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಭಟ್ಕಳ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಇತರ ಪ್ರಮುಖ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದರು. ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದ ಸಹಾಯದಿಂದ ತಪಾಸಣೆ ನಡೆಸಿದ್ದರು.

ಕಣ್ಣನ್ ಎಂಬ ಇಮೇಲ್‌ನಿಂದ ಆರೋಪಿ ಸ್ಛೋಟದ ಬೆದರಿಕೆ ಹಾಕಿದ್ದ. ಇದರ ಜಾಡು ಹಿಡಿದ ಪೊಲೀಸರು ಇಮೇಲ್ ಕಳಿಸಿದ್ದ ಮೊಬೈಲ್ ಐಎಂಇಐ ಆಧಾರದ ಮೇಲೆ ತಮಿಳುನಾಡಿನಲ್ಲಿ ಕಣ್ಣನ್ ಗುರುಸಾಮಿ ಎಂಬಾತನನ್ನು ಬಂಧಿಸಿದ್ದರು. ಈ ವೇಳೆ ಭಟ್ಕಳ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿ ಖಾಲಿದ್ ಅಲಿಯಾಸ್ ನಿತಿನ್ ಶರ್ಮಾ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕಣ್ಣನ್ ಗುರುಸ್ವಾಮಿ ಎಂಬಾತ ಯಾವುದೋ ಕೇಸ್‌ನಲ್ಲಿ ಬಂಧಿತನಾಗಿ, ಕೇರಳದ ಮುನ್ನಾರ್ ಠಾಣೆಯಲ್ಲಿದ್ದ. ಈ ವೇಳೆ ಖಾಲಿದ್ ಕೂಡ ಆರೆಸ್ಟ್ ಆಗಿದ್ದು, ಅದೇ ಠಾಣೆಗೆ ಕರೆತರಲಾಗಿತ್ತು. ಈ ವೇಳೆ ಕಣ್ಣನ್ ಗುರುಸ್ವಾಮಿ ಪರಿಚಯ ಮಾಡಿಕೊಂಡ ಖಾಲೀದ್, ಆತನ ಮೊಬೈಲ್‌ನಿಂದಲೇ ಆತನ ಇಮೇಲ್ ಮೂಲಕವೇ ಭಟ್ಕಳ ಠಾಣೆ ಪೊಲೀಸರಿಗೆ ಇಮೇಲ್ ಮಾಡಿ, ಸ್ಫೋಟದ ಬೆದರಿಕೆ ಹಾಕಿದ್ದ.

ಖಾಲಿದ್‌ನ ಮೂಲ ಹೆಸರು ನಿತಿನ್ ಶರ್ಮಾ. ಈ ಹಿಂದೆ ಹಿಂದೂವಾಗಿದ್ದ ನಿತಿನ್ ಶರ್ಮಾ, ಬಳಿಕ ಧರ್ಮ ಬದಲಾಯಿಸಿಕೊಂಡು, ಖಾಲಿದ್ ಎಂದು ಹೆಸರು ಬದಲಾಯಿಸಿಕೊಂಡಿದ್ದ. ಈತ ಈಗಾಗಲೇ 16 ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಕೇರಳ, ಪುದುಚೇರಿ, ದೆಹಲಿ, ಮಧ್ಯಪ್ರದೇಶ, ಒಡಿಶಾ, ಆಂಧ್ರಪ್ರದೇಶ, ಉತ್ತರಾಖಂಡ್ ಮತ್ತು ಕರ್ನಾಟಕದಲ್ಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಈತನ ಮೇಲೆ ವಿವಿಧ ಪ್ರಕರಣಗಳು ದಾಖಲಾಗಿವೆ.

2016-17ರಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿ ಒಂದು ವರ್ಷ ಕಾಲ ಶಿಕ್ಷೆಯನ್ನೂ ಅನುಭವಿಸಿದ್ದಾನೆ. ಸದ್ಯ ಖಾಲಿದ್‌ನನ್ನು ವಶಕ್ಕೆ ಪಡೆಯುವಲ್ಲಿ ಭಟ್ಕಳ ಪೊಲೀಸರು ಮತ್ತು ಸೈಬರ್ ತನಿಖಾ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರು ಈಗಾಗಲೇ ಕಣ್ಣನ್ ಗುರುಸ್ವಾಮಿಯನ್ನು ವಿಚಾರಣೆ ನಡೆಸಿದ್ದು, ಬಾಂಬ್ ಬೆದರಿಕೆ ಹಾಕಿದ್ದ ಆರೋಪಿ ಖಾಲಿದ್ ಬಗ್ಗೆ ವಿಚಾರಿಸಿದ್ದಾರೆ. ಆತ ಕಣ್ಣನ್‌ ಗುರುಸ್ವಾಮಿಯಿಂದ ಮೊಬೈಲ್ ಹೇಗೆ ಪಡೆದುಕೊಂಡ ಎಂಬುದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಅಲ್ಲದೆ, ಕಣ್ಣನ್ ಮತ್ತು ಬಾಂಬ್​ ಬೆದರಿಕೆ ಹಾಕಿದ್ದ ಆರೋಪಿಯ ನಡುವಿನ ಭೇಟಿಯ ಕುರಿತು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:Murder Case: ವಿಜಯಪುರದಲ್ಲಿ ಬಾಗಪ್ಪ ಹರಿಜನ ಆಪ್ತನ ಹತ್ಯೆ, ಗುಂಡು ಹಾರಿಸಿ ಆರೋಪಿಗಳ ಸೆರೆ