Chinmoy Krishna Das: ಚಿನ್ಮಯ್ ಕೃಷ್ಣ ದಾಸ್ ಅನುಯಾಯಿಗಳ ವಿರುದ್ಧ ಮತ್ತೆ ಪ್ರಕರಣ ದಾಖಲು
Chinmoy Krishna Das : ಚಿನ್ಮಯ್ ಕೃಷ್ಣ ದಾಸ್ ಅನುಯಾಯಿಗಳ ವಿರುದ್ಧ ಮತ್ತೊಂದು ಗಂಭೀರ ಪ್ರಕರಣ ದಾಖಲಾಗಿದೆ.

ಢಾಕಾ: ಬಾಂಗ್ಲಾದೇಶದ ಚಿತ್ತಗಾಂಗ್‌ನ(Chittagong) ನ್ಯಾಯಾಲಯದ ಆವರಣದಲ್ಲಿ ಪೊಲೀಸರು ಮತ್ತು ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್(Chinmoy Krishna Das) ಅವರ ಅನುಯಾಯಿಗಳ ನಡುವೆ ಭಾನುವಾರ (ಡಿ. 8) ಭಾರೀ ಘರ್ಷಣೆ ನಡೆದಿದೆ.
ನ. 25ರಂದು ಢಾಕಾ (Dhaka) ವಿಮಾನ ನಿಲ್ದಾಣದಲ್ಲಿ ಪ್ರಮುಖ ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಪ್ರಭು ಅವರನ್ನು ಬಂಧಿಸಲಾಗಿತ್ತು. ಅವರನ್ನು ಬಿಡುಗಡೆಗೊಳಿಸುವಂತೆ ಬಾಂಗ್ಲಾದಲ್ಲಿ ಹಲವು ಹಿಂದೂ ಪ್ರಮುಖರು ಮತ್ತು ಇಸ್ಕಾನ್(Iskcon) ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ(Sheikh Hasina) ಅವರು ಕೂಡ ಚಿನ್ಮಯ್ ಅವರ ಬಂಧನವನ್ನು ತೀವ್ರವಾಗಿ ವಿರೋಧಿಸಿದ್ದಾರೆ. ದೇಶದ್ರೋಹದ ಆರೋಪದ ಪ್ರಕರಣದಲ್ಲಿ ಹಿಂದೂ ನಾಯಕ ಚಿನ್ಮಯ್ ಅವರನ್ನು ಪ್ರಮುಖ ಆರೋಪಿ ಎಂದು ಗುರುತಿಸಿ ಬಂಧಿಸಲಾಗಿದೆ.
ಈ ನಡುವೆ ಬಾಂಗ್ಲಾದೇಶದ ಉದ್ಯಮಿ ಮತ್ತು ಹೆಫಾಜತ್-ಎ-ಇಸ್ಲಾಂ ಕಾರ್ಯಕರ್ತ ಇನಾಮುಲ್ ಹಕ್ ಎಂಬ ವ್ಯಕ್ತಿಯೊಬ್ಬರು ಚಿತ್ತಗಾಂಗ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್(Metropolitan Magistrate) ನ್ಯಾಯಾಲಯದಲ್ಲಿ ಚಿನ್ಮಯ್ ಕೃಷ್ಣ ದಾಸ್ ಅವರ ಅನುಯಾಯಿಗಳ ವಿರುದ್ಧ ಮತ್ತೊಂದು ದೂರು ದಾಖಲಿಸಿದ್ದಾರೆ. ನ. 26ರಂದು ನ್ಯಾಯಾಲಯದಲ್ಲಿ ಭೂ ದಾಖಲಾತಿಗೆ ಸಂಬಂಧಪಟ್ಟ ಕೆಲಸ ಮುಗಿಸಿ ಮನೆಗೆ ಹಿಂತಿರುಗಿತ್ತಿದ್ದಾಗ ಚಿನ್ಮಯ್ ಕೃಷ್ಣ ದಾಸ್ ಅವರ ಅನುಯಾಯಿಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹಕ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ ಎಂಬ ಮಾಹಿತಿಯಿದೆ.
ಪಂಜಾಬಿ ಕುರ್ತಾ ಮತ್ತು ಕ್ಯಾಪ್ ಧರಿಸಿದ್ದಕ್ಕಾಗಿ ತನ್ನನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಉದ್ಯಮಿ ಹೇಳಿದ್ದು, ತನ್ನ ಬಲಗೈ ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದವು ಎಂದು ತಿಳಿಸಿದ್ದಾರೆ. ಅವರನ್ನು ಪಕ್ಕದಲ್ಲಿದ್ದವರು ಕೂಡಲೇ ರಕ್ಷಿಸಿ ಚಿತ್ತಗಾಂಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು. ಹಲ್ಲೆಯಿಂದಾಗಿ ತುಂಬಾ ದಿನಗಳು ಆರೋಗ್ಯದಲ್ಲಿ ಏರುಪೇರಾಗಿದ್ದು, ಪ್ರಕರಣ ದಾಖಲಿಸುವುದು ತಡವಾಯಿತು ಎಂದು ಹಕ್ ಹೇಳಿದ್ದಾರೆ.
ನ. 26ರಂದು ನ್ಯಾಯಾಲಯದ ಆವರಣದಲ್ಲಿ ಚಿನ್ಮಯ್ ಕೃಷ್ಣ ಅವರ ಅನುಯಾಯಿಗಳು ಹಕ್ ಅವರ ಮೇಲೆ ಹಲ್ಲೆ ನಡೆಸಿದ್ದು, ಅವರ ಬಲಗೈ ಮುರಿದಿದ್ದು, ಅವರ ತಲೆಗೆ ಗಂಭೀರ ಗಾಯವಾಗಿತ್ತು. ಪ್ರಕರಣದಲ್ಲಿ 164 ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಚಿನ್ಮಯ್ ಕೃಷ್ಣ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಹಕ್ ಪರ ವಕೀಲರು ಉಲ್ಲೇಖಿಸಿದ್ದಾರೆ.
ಈ ಘಟನೆಯು ಕೂಡ ಬಾಂಗ್ಲಾದೇಶದ ಸನಾತನಿ ಜಾಗರಣಾ ವೇದಿಕೆಯ ವಕ್ತಾರ ಚಿನ್ಮಯ್ ಕೃಷ್ಣ ಅವರ ಸೆರೆವಾಸಕ್ಕೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ. ಈ ಹಿಂದೆ ನ. 27ರಂದು ಪೊಲೀಸರು ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ಇದೇ ರೀತಿಯ ಘಟನೆಗಳ ಸಂಬಂಧ ಮೂರು ಪ್ರಕರಣಗಳನ್ನು ದಾಖಲಿಸಿದ್ದರು. ಹಲವಾರು ವ್ಯಕ್ತಿಗಳು ಮತ್ತು ನೂರಾರು ಅಪರಿಚಿತರು ಕಾನೂನು ಜಾರಿ ಮೇಲೆ ದಾಳಿ ನಡೆಸಿದ್ದರು ಎಂದು ತಿಳಿದು ಬಂದಿತ್ತು.
ನ. 26ರಂದು ರಂಗಂ ಸಿನಿಮಾ ಹಾಲ್ ಬಳಿ ಗುಂಪೊಂದು ಹಲ್ಲೆ ನಡೆಸಿದೆ ಎಂದು ಆರೋಪಿಸಿ ಉದ್ಯಮಿಯೊಬ್ಬರು ಮತ್ತೊಂದು ಪ್ರಕರಣವನ್ನು ದಾಖಲಿಸಿದ್ದರು. ದೂರಿನಲ್ಲಿ ರಾಜಕೀಯ ಸಂಘಟನೆಗಳು ಮತ್ತು ಇಸ್ಕಾನ್ (ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್) ಸದಸ್ಯರು ಸೇರಿದಂತೆ 29 ವ್ಯಕ್ತಿಗಳ ಜೊತೆಗೆ 40 ರಿಂದ 50 ಅಪರಿಚಿತ ವ್ಯಕ್ತಿಗಳನ್ನು ಗುರುತಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಆ. 5ರಂದು ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಯಿಂದಾಗಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ದೇಶದಿಂದ ಪಲಾಯನ ಮಾಡಿದ ನಂತರ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸದ್ಯ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧಗಳು ಹದಗೆಟ್ಟಿವೆ.
ನ. 25ರಂದು ಢಾಕಾದ ಹಜರತ್ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶದ್ರೋಹ ಪ್ರಕರಣದಲ್ಲಿ ಚಿನ್ಮಯ್ ಕೃಷ್ಣ ದಾಸ್ ಬಂಧಸಿದ್ದರಿಂದ ಸನ್ಯಾಸಿಯ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ನ. 26ರಂದು ಚಿನ್ಮಯ್ ಜಾಮೀನು ನಿರಾಕರಿಸಿದ ನಂತರ ಚಟ್ಟೋಗ್ರಾಮ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಸೈಫುಲ್ ಇಸ್ಲಾಮ್ ಅಲಿಫ್ ಎಂಬ ವ್ಯಕ್ತಿ ಸಾವನ್ನಪ್ಪಿದರು.
ಡಿ. 3ರಂದು ಬಾಂಗ್ಲಾದೇಶದ ನ್ಯಾಯಾಲಯವು ಚಿನ್ಮಯ್ ಕೃಷ್ಣ ಅವರ ಪರವಾಗಿ ಯಾವುದೇ ವಕೀಲರು ಹಾಜರಾಗದ ಕಾರಣ ಸರ್ಕಾರದ ಮನವಿಯ ಮೇರೆಗೆ ಜಾಮೀನು ಅರ್ಜಿ ವಿಚಾರಣೆಯನ್ನು ಜ. 2ಕ್ಕೆ ಮುಂದೂಡಿತು.
ಈ ಸುದ್ದಿಯನ್ನೂ ಓದಿ: Bangladesh Unrest: ಬಾಂಗ್ಲಾದೇಶದಲ್ಲಿ ಹಿಂದೂ ಸಂತ ಚಿನ್ಮಯ್ ಕೃಷ್ಣ ದಾಸ್ ಅರೆಸ್ಟ್ ಆಗಿದ್ದೇಕೆ?