ಕೃಷಿ ಸಬ್ಸಿಡಿಗೆ ರೈತರು ಬಿಟ್ಟು ಉಳಿದವರೆಲ್ಲ ಫಲಾನುಭವಿಗಳು!
ಕರ್ನಾಟಕದಲ್ಲಿ 45 ಕೆಜಿ ಚೀಲದ 267 ರೂ. ಬೆಲೆಯ 'ಸಬ್ಸಿಡಿ' ಯೂರಿಯಾ 3,000 ರೂ. ಬೆಲೆಗೆ ಮಾರಾಟವಾಗುತ್ತಿದೆ. ರೈತರ ಕೃಷಿ ಚಟುವಟಿಕೆಯನ್ನು ಉತ್ತೇಜಿಸಲು ವಿನಿಯೋಗಿಸುವ ಸರಕಾರದ ಕೋಟಿ ಕೋಟಿ ಹಣ ರೈತರನ್ನು ತಲುಪುವುದೇ ಇಲ್ಲ. ಸರ್ಕಾರ ಮತ್ತು ರೈತರ ಮಧ್ಯೆ ಇರುವ ಉತ್ಪಾದಕರು, ಜನ ಪ್ರತಿನಿಧಿಗಳು, ಮಧ್ಯವರ್ತಿಗಳು, ವ್ಯಾಪಾರಿಗಳು, ಇಲಾಖಾ ಅಧಿಕಾರಿಗಳು ಈ ಸಬ್ಸಿಡಿಯ ನಿಜವಾದ ಫಲಾನುಭವಿಗಳು.
-ಅರವಿಂದ ಸಿಗದಾಳ್, ಮೇಲುಕೊಪ್ಪ
ಬೆಂಗಳೂರು: ಕೃಷಿ ಪರಿಕರಗಳ, ಯಂತ್ರೋಪಕರಣಗಳ ಸಬ್ಸಿಡಿ ವಿಚಾರದಲ್ಲಿ ದೊಡ್ಡ ಮಟ್ಟದ ಲಾಬಿ, ದಂಧೆ ನಡೆಯುತ್ತಿರುವುದು ಎಲ್ಲ ರೈತರಿಗೂ ಗೊತ್ತಿರುವ ಓಪನ್ ಸೀಕ್ರೇಟ್ ಸತ್ಯ! ಬಜೆಟ್‌ನಲ್ಲಿ ಕೃಷಿಗೆ 'ಇಷ್ಟು ವ್ಯಯ' ಎಂದು ನಾಣ್ಯದ ಗ್ರಾಫ್ ಹಾಕಿ, ಹಸಿರು ಬಣ್ಣ ತುಂಬಿ ತೋರಿಸುವ ಪರ್ಸಂಟೇಜ್ ಖರ್ಚಿನಲ್ಲಿ ಬಹುತೇಕ ಹಣವನ್ಬು, ರೈತರಿಗೆ ಕೊಡುವುದೆಂದು ತೋರಿಸುವ ಸಬ್ಸಿಡಿಗೆ ವಿನಿಯೋಗ ಆಗುತ್ತದೆ. ಆದರೆ ರೈತರ ದೌರ್ಭಾಗ್ಯ ನೋಡಿ! ರೈತರ ಕೃಷಿ ಚಟುವಟಿಕೆಯನ್ನು ಉತ್ತೇಜಿಸಲು ವಿನಿಯೋಗಿಸುವ ಸರಕಾರದ ಕೋಟಿ ಕೋಟಿ ಹಣ ರೈತರನ್ನು ತಲುಪುವುದೇ ಇಲ್ಲ. ಸರ್ಕಾರ ಮತ್ತು ರೈತರ ಮಧ್ಯೆ ಇರುವ ಉತ್ಪಾದಕರು, ಜನ ಪ್ರತಿನಿಧಿಗಳು, ಮಧ್ಯವರ್ತಿಗಳು, ವ್ಯಾಪಾರಿಗಳು, ಇಲಾಖಾ ಅಧಿಕಾರಗಳು ಈ ಸಬ್ಸಿಡಿಯ ನಿಜವಾದ ಫಲಾನುಭವಿಗಳು.
ಮೇಲ್ನೋಟಕ್ಕೆ ರೈತರಿಗೆ ಲಭಿಸಿದಂತೆ ಕಾಣುವ ಈ ಸಬ್ಸಿಡಿಯ ಮರೀಚಿಕೆ, ನಿಜವಾಗಿ ರೈತರನ್ನು ಮುಟ್ಟುವುದೇ ಇಲ್ಲ.
ಒಂದು ಸಣ್ಣ ಉದಾಹರಣೆ ನೋಡುವುದಾದರೆ: ₹ 60,000 ಬೆಲೆಯ ಗೋಟು ಸುಲಿಯುವ ಯಂತ್ರಕ್ಕೆ ₹ 90,000 ಬಿಲ್ ಮಾಡಿ 40% ಸಬ್ಸಿಡಿ ಅಂತ ತೋರಿಸಿ ₹ 54,000ಕ್ಕೆ ಕೊಡ್ತಾರೆ. ಸಬ್ಸಿಡಿ ಬೇಡ, ಡಿಸ್ಕೌಂಟ್ ಕೊಡಿ ಅಂತ ಚೌಕಾಸಿ ಮಾಡಿದರೆ, ಅದೇ ವ್ಯಾಪಾರಸ್ಥರು, ಅದೇ ₹ 60,000 ಯಂತ್ರವನ್ನು ₹ 55,000ಕ್ಕೆ ಕೊಡ್ತಾರೆ! ಸಬ್ಸಿಡಿ ವ್ಯವಹಾರದಲ್ಲಿ ರೈತರಿಗೆ ಸಿಕ್ಕಿದ್ದು ₹.1,000! ವ್ಯಾಪಾರಸ್ಥರ/ತೋಟಗಾರಿಕೆ ಇಲಾಖೆ/ಸರಕಾರದ ಲೆಕ್ಕದಲ್ಲಿ 32,000 ಸಬ್ಸಿಡಿ ಕೊಟ್ಟ ಲೆಕ್ಕ ದಾಖಲೆಯಾಗಿರುತ್ತದೆ. 40% ಎಲ್ಲಿ ಹರಿಯುತ್ತದೆ ದೇವರೇ ಬಲ್ಲ! ಸಬ್ಸಿಡಿಯನ್ನು ನೇರ DBT ಸಿಸ್ಟಮ್‌ಗೆ ತಂದರೂ ಇದಕ್ಕೆ ಪರಿಹಾರ ಕಾಣಲಾರದು.
2022ರಲ್ಲಿ ಅಡಿಕೆ ಎಲೆ ಚುಕ್ಕಿ ರೋಗಕ್ಕೆ ಒಂದು ತಜ್ಞ ಸಮಿತಿ ರಚನೆಯಾಗಿ, ಮಲೆನಾಡು-ಕರಾವಳಿ ಪ್ರದೇಶಕ್ಕೆ ಭೇಟಿ ನೀಡಿತ್ತು ಆ ಸಂದರ್ಭದಲ್ಲಿ ಪ್ರಾರಂಭಿಕ ಸಲಹೆಯಾಗಿ ತಜ್ಞ ಸಮಿತಿ, ಅಡಿಕೆ ಕೊನೆ ದೋಟಿಗೆ ಸಬ್ಸಿಡಿ ಸಲಹೆ ನೀಡಿತು. ಇಲಾಖೆ ಅಧಿಕಾರಗಳು, ಜನ ಪ್ರತಿನಿಧಿಗಳು ಅಡಿಕೆ ಎಲೆ ಚುಕ್ಕಿ ರೋಗಕ್ಕೆ ಒಂದು ಪರಿಹಾರ ಮಾರ್ಗವಾಗಿ ''ಅಡಿಕೆಗೆ ಔಷಧಿ ಹೊಡೆಯಲು ಸ್ಪ್ರೇ ಮಾಡಲು 40% ಸಬ್ಸಿಡಿ ದರದಲ್ಲಿ ದೋಟಿ ಕೊಡಲಾಗುತ್ತದೆ'' ಅಂತ ಪ್ರಚಾರವನ್ನೂ ಮಾಡಿದರು! ತಮಾಷೆ ಅಂದರೆ, ತಜ್ಞ ಸಮಿತಿ ರಚನೆಯಾಗಿ, ಮಲೆನಾಡು-ಕರಾವಳಿ ಪ್ರದೇಶಕ್ಕೆ ಭೇಟಿ ನೀಡುವ ಕೆಲವು ಸಮಯ ಮೊದಲೇ 40% ಸಬ್ಸಿಡಿಯಲ್ಲಿ ಕೊಪ್ಪದ ಕೃಷಿ ಉಪಕರಣಗಳ ವರ್ತಕರು ಈ ದೋಟಿಯನ್ನು ರೈತರಿಗೆ ವಿತರಣೆ ಮಾಡುವ ಜಾಹಿರಾತು ನೀಡಿದ್ದರು ಮತ್ತು ಸಬ್ಸಿಡಿಯಲ್ಲಿ ದೋಟಿ ವಿತರಣೆಯನ್ನೂ ಮಾಡಿದ್ದರು. ತಜ್ಞ ಸಮಿತಿ ಸಲಹೆ ಕೊಡುವ ಮೊದಲೇ, ಜನ ಪ್ರತಿನಿಧಿಗಳು ರೈತರ ಕಿವಿಯ ಮೇಲೆ ಹೂವಿಡುವ ಮೊದಲೇ ರೈತರಿಗೆ ಕೊಡಲ್ಪಟ್ಟಂತೆ ಭ್ರಮೆ ಹುಟ್ಟಿಸುವ ಸಬ್ಸಿಡಿ ದಂದೆಯ ಲಾಬಿ ಅಡಿಕೆ ಮರದಷ್ಟು ಎತ್ತರ ಬೆಳೆದು ನಿಂತು, ರೈತರ ಹೊರೆತಾಗಿ ಉಳಿದೆಲ್ಲರಿಗೂ ಫಲ ಕೊಡ್ತಾ ಇತ್ತು. ಈಗಲೂ ಕೊಡ್ತಾ ಇದೆ. ಸಬ್ಸಿಡಿ ಫಲಾನುಭವಿಗಳಿಗೆ ಎಲೆ ಚುಕ್ಕಿ ರೋಗ ಇಲ್ಲ!
ಸಬ್ಸಿಡಿ ಹೆಸರಲ್ಲಿ ಕಳಪೆ ದೋಟಿ ವಿತರಣೆ ಆದ ಪ್ರಕರಣಗಳೂ ಇವೆ: ಇದೆಲ್ಲದರ ಮಧ್ಯೆ ರಸಗೊಬ್ಬರಗಳಿಗೆ ನೇರವಾಗಿ ಸಬ್ಸಿಡಿ ನೀಡಿ, ಸಬ್ಸಿಡಿ ಮೊತ್ತವನ್ನು ಕಳೆದು, ಉಳಿದ ಹಣಕ್ಕೆ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡುವ ಒಂದು ಲಾಬಿ ರಹಿತ ವ್ಯವಸ್ಥೆ ಇತ್ತು. ಇದರಿಂದ ರೈತರೇ ನೇರ ಮತ್ತು ಪೂರ್ಣ ಪ್ರಮಾಣದಲ್ಲಿ ಸಬ್ಸಿಡಿ ಫಲಾನುಭವಿಗಳಾಗುತ್ತಿದ್ದರು. ಈಗಲೂ ಈ ರಸಗೊಬ್ಬರ ಸಬ್ಸಿಡಿ, ಅದರಲ್ಲೂ ರಿಯಾಯ್ತಿ ಯೂರಿಯ (ನೈಟ್ರೋಜನ್) ರೈತರಿಗೊಂದು ವರದಾನವಾಗಿದೆ.
ಯೂರಿಯಾ ಸಬ್ಸಿಡಿ ಯೋಜನೆಯಡಿ, 45 ಕೆಜಿ ಬ್ಯಾಗಿನ ₹ 1,667 ಬೆಲೆಯ ಯೂರಿಯಾವನ್ನು ಕೇಂದ್ರ ಸರಕಾರವು ದೊಡ್ಡ ಮಟ್ಟದ 84% ಸಬ್ಸಿಡಿಯೊಂದಿಗೆ, ಪ್ರಸ್ತುತ ರೈತರಿಗೆ ₹ 267ರಲ್ಲಿ ನೀಡಲಾಗುತ್ತಿದೆ. 84% (ಪ್ರತೀ ಚೀಲಕ್ಕೆ ₹ 1,400) ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಭರಿಸುತ್ತಿದೆ.
ಯಾವಾಗ ಸಬ್ಸಿಡಿ ಕಳೆದು, 16% ಬೆಲೆಯಲ್ಲಿ ಯೂರಿಯಾ ರೈತರಿಗೆ ಸಿಗುವಂತಾಯ್ತೋ, ರಾಜ್ಯದಲ್ಲಿ ಯೂರಿಯಾದಲ್ಲಿ ಲಾಬಿ ಮಾಡುವ ಮಾಫಿಯ ಜಗತ್ತು ಯೂರಿಯ ಮಾರುಕಟ್ಟೆಯ ದಂಧೆಗೆ ಇಳಿದಿದೆ!
ಕೃಷಿಗೆ ಮಾತ್ರ ಬಳಸಬೇಕಾದ ರಿಯಾಯಿತಿ ಕೃಷಿ ಯೂರಿಯಾವನ್ನು ಕೃಷಿಗಿಂತ ಹೆಚ್ಚಾಗಿ ಕೈಗಾರಿಕೆಗಳಲ್ಲಿ ಬಳಸಲಾಗುತ್ತಿದೆ ಎಂದು ದಿನ ಪತ್ರಿಕೆಗಳಲ್ಲಿ ಮುಖಪುಟ ಸುದ್ಧಿಯಾಗುತ್ತಿದೆ. ಮುಖಪುಟದ ದೊಡ್ಡ ಸುದ್ಧಿಯಾದರೂ, ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದೆ.
ಈ ಸುದ್ದಿಯನ್ನೂ ಓದಿ: NITI Aayog: 179 ಸಮುದಾಯಗಳನ್ನು ಎಸ್ಸಿ, ಎಸ್ಟಿ, ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿದ ನೀತಿ ಆಯೋಗದ ಸಮಿತಿ
ಕೃಷಿಗೆ ಮಾತ್ರ ಬಳಸಬೇಕಾದ ಯೂರಿಯಾವನ್ನು ಪ್ಲೈವುಡ್-ಗಮ್-ಜವಳಿ ಕೈಗಾರಿಕೆಗಳಿಗೆ, ಪಶುಗಳ ಆಹಾರ ತಯಾರಿಸುವ ಕೈಗಾರಿಕೆಗಳಿಗೆ, ಹಾಲಿನ ಡೇರಿಗೆ, ಸೇದುವ ಸಿಗರೇಟ್ ಕಂಪನಿಗೆ, ಕ್ಲೀನಿಂಗ್ ಏಜೆಂಟ್ ತಯಾರಿಸುವ ಉತ್ಪಾದಕರಿಗೆ, ನೈಟ್ರೋಜನ್ ಪ್ರಿಸರ್ವೇಟಿವ್ ಆಗಿ ಬಳಸುವ ಫ್ಯಾಕ್ಟರಿಗಳಿಗೆ ₹ 267 ಬೆಲೆಯ ಸಬ್ಸಿಡಿ ಯೂರಿಯವನ್ನು ₹ 3,000ಕ್ಕೆ ಮಾರಲಾಗುತ್ತಿದೆ! ಫಲಾನುಭವಿ ದೋಖಾ ಮಧ್ಯವರ್ತಿಗಳಿಗೆ ಬರೋಬರಿ 900% ಲಾಭ!
ಇನ್ನು ಮುಂದೆ, ರೈತರು ರಸಗೊಬ್ಬರದ ಅಂಗಡಿಯಲ್ಲಿ 'ಸಬ್ಸಿಡಿ' ಯೂರಿಯಾ ಸಿಗಲಿಲ್ಲ ಅಂದರೆ ಡೇರಿ ಹಾಲು, ಸಿಗರೇಟ್, ಕ್ಲೀನಿಂಗ್ ಏಜಂಟ್‌ಗಳನ್ನು ಮಿಶ್ರ ಮಾಡಿ ಅಡಿಕೆ ಮರದ ಬುಡಕ್ಕೆ ಹಾಕಿ! ಅದರಲ್ಲೆಲ್ಲ ಯೂರಿಯ 'ರಿಚ್' ಆಗಿ ಇರಬಹುದು!