Naxal Encounter: ತಲೆಗೆ ಒಂದು ಕೋಟಿ ರೂ. ಇನಾಮು ಹೊಂದಿದ್ದ ಮಾವೋ ನಾಯಕ ಚಲಪತಿ ಯಾರು ಗೊತ್ತೇ?
ದೇಶವನ್ನು ನಕ್ಸಲ್ ಮುಕ್ತ ಮಾಡಬೇಕೆನ್ನುವ ಕೇಂದ್ರ ಸರಕಾರದ ನಿರ್ಧಾರಕ್ಕೆ ಮತ್ತೊಂದು ಯಶಸ್ಸು ಸಿಕ್ಕಿದ್ದು, ಛತ್ತೀಸ್ ಗಢ-ಒಡಿಶಾ ಗಡಿಭಾಗದಲ್ಲಿ ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ 19 ಜನ ಮಾವೋವಾದಿಗಳು ಸಾವನ್ನಪ್ಪಿದ್ದಾರೆ.
ಭೋಪಾಲ್: ಜಯರಾಮ್ ರೆಡ್ಡಿ ಹೆಸರಿನ ಈ ವ್ಯಕ್ತಿಗೆ ಬಹಳಷ್ಟು ಆಲಿಯಾಸ್ ಹೆಸರುಗಳಿವೆ. ರಾಮಚಂದ್ರ ರೆಡ್ಡಿ, ಅಪ್ಪಾರಾವ್ ಮತ್ತು ರಾಮು ಎಂಬ ಹೆಸರಿನಿಂದ ಗುರುತಿಸಲ್ಪಡುವ ಈ ವ್ಯಕ್ತಿ ಹೆಚ್ಚಾಗಿ ಗುರುತಿಸಿಕೊಂಡಿರುವುದು ಚಲಪತಿ ಎಂಬ ಹೆಸರಿನಿಂದ. ಮಾವೋವಾದಿ ಗುಂಪಿನಲ್ಲಿ ಹಿರಿಯ ನಾಯಕನಾಗಿ ಗುರುತಿಸಿಕೊಂಡಿದ್ದಾತ ಛತ್ತೀಸ್ ಗಢದ (Chhattisgarh) ಅರಣ್ಯ ಪ್ರದೇಶದಲ್ಲಿ ರಕ್ಷಣಾ ಪಡೆಗಳೊಂದಿಗೆ ನಡೆದ ಕಾದಾಟದಲ್ಲಿ (Encounter) ಸಾವನ್ನಪ್ಪಿದ 19 ಜನ ನಕ್ಷಲ್ ಗಳಲ್ಲಿ ತಾನೂ ಒಬ್ಬನಾಗಿ ಜೀವ ತೆತ್ತಿದ್ದಾನೆ.
ಈ ಬೃಹತ್ ನಕ್ಸಲ್ ನಿಗ್ರಹ ಎನ್‌ಕೌಂಟರ್ ಕಾರ್ಯಾಚರಣೆಯಲ್ಲಿ 19 ಜನ ನಕ್ಸಲರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗುವುದರೊಂದಿಗೆ ಈ ಭಾಗದಲ್ಲಿ ಎಡಪಂಥೀಯ ತೀವ್ರಗಾಮಿ ಚಟುವಟಿಕೆಗಳಿಗೆ (LWE) ತೀವ್ರ ಹಿನ್ನಡೆಯಾದಂತಾಗಿದೆ. 60 ವರ್ಷ ಪ್ರಾಯದ ಚಲಪತಿ, ಆಂಧ್ರಪ್ರದೇಶದ (Andhra Pradesh) ಚಿತ್ತೂರಿನ (Chittoor) ಮದನಪಲ್ಲಿ (Madanapalle) ಭಾಗದವನಾಗಿದ್ದು, 10ನೇ ತರಗತಿಯವರೆಗೆ ಓದಿದ್ದಾನೆ. ಕಡಿಮೆ ವಿದ್ಯಭ್ಯಾಸದ ಹೊರತಾಗಿಯೂ ಚಲಪತಿ ಮಾವೋವಾದಿ ಹೋರಾಟದಲ್ಲಿ ಉನ್ನತ ಸ್ಥಾನಕ್ಕೇರಿದ್ದ ಹಾಗೂ ಸೆಂಟ್ರಲ್ ಕಮಿಟಿ ಮೆಂಬರ್ (CCM) ಹುದ್ದೆಗೆ ಏರಿದ್ದ. ಇದು ಮಾವೋವಾದಿ ಸಂಘಟನೆಯಲ್ಲಿ ಉನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಂಡಳಿ ಇದಾಗಿದೆ.
ಇಂತಹ ಪ್ರಮುಖ ಹುದ್ದೆಯಲ್ಲಿದ್ದ ಕಾರಣ, ಈ ನಿಷೇಧಿತ ಸಂಘಟನೆಯ ಸೂಕ್ಷ್ಮ ಕಾರ್ಯಚರಣೆಯಲ್ಲಿ ತನ್ನನ್ನು ಪಾಲ್ಗೊಳ್ಳುವಂತೆ ಮಾಡಿದ್ದರಿಂದ ಈತನ ಮೇಲೆ 1 ಕೋಟಿ ರೂಪಾಯಿಗಳ ಬಹುಮಾನವನ್ನು ಘೋಷಿಸಲಾಗಿತ್ತು. ಈತನ ತಲೆಗೆ ಘೋಷಿಸಲಾಗಿದ್ದ ಬೃಹತ್ ಮೊತ್ತವೇ ಈತ ಆಳುವ ವರ್ಗಕ್ಕೆ ಎಷ್ಟು ತಲೆನೊವಾಗಿದ್ದ ಎಂಬುದು ಇದರಿಂದಲೇ ತಿಳಿದುಬರುತ್ತದೆ.
ಚಲಪತಿ ಬಸ್ತಾರ್ ನ (Bastar) ದಟ್ಟ ಅರಣ್ಯ ಪ್ರದೇಶದ ಸಂಪೂರ್ಣ ಮಾಹಿತಿ ಹೊಂದಿದ್ದು, ಈ ದಟ್ಟ ಅರಣ್ಯ ಆತನಿಗೆ ಚಿರಪರಿಚಿತವಾಗಿತ್ತು. ಈತನ ಸುತ್ತಲೂ 8-10 ಜನರ ಖಾಸಗಿ ಅಂಗರಕ್ಷಕ ಪಡೆ ಇರುತ್ತಿತ್ತು. ಇದು ಮಾವೋವಾದಿ ಸಂಘಟನೆಯಲ್ಲಿ ಈತನಿಗಿದ್ದ ಪ್ರಾಮುಖ್ಯತೆಗೆ ಸಾಕ್ಷಿಯಾಗಿತ್ತು.
ಎಕ್-47 (AK 47), ಎಸ್.ಎಲ್.ಆರ್. ರೈಫಲ್ ಗಳಂತಹ (SLR rifles) ಅತ್ಯಾಧುನಿಕ ಆಯುಧಗಳನ್ನು ಹೊಂದಿದ್ದ ಚಲಪತಿ, ನಾಯಕನ ಸ್ಥಾನದಲ್ಲಿದ್ದುಕೊಂಡು ಕಾರ್ಯತಂತ್ರಗಳನ್ನು ಹೆಣೆಯುವುದರಲ್ಲಿ ಹಾಗೂ ಬಹುಮುಖ್ಯ ಕಾರ್ಯಾಚರಣೆಯನ್ನು ನಡೆಸುವುದರಲ್ಲಿ ಮುಂಚೂಣಿಯಲ್ಲಿದ್ದ.
ಈತನ ಕಾರ್ಯ ನೈಪುಣ್ಯತೆ, ನಾಯಕತ್ವ ಗುಣಗಳು ಮತ್ತು ಸವಾಲಿನ ಪ್ರದೇಶಗಳಿಗೆ ನಕ್ಸಲ್ ತಂಡಗಳ ನಿಯೋಜನೆಯಲ್ಲಿ ಎತ್ತಿದ ಕೈಯಾಗಿದ್ದ ಚಲಪತಿಯ ಈ ಎಲ್ಲಾ ವೈಶಿಷ್ಟ್ಯಗಳು ಈತನನ್ನು ಈ ಭಾಗದಲ್ಲಿ ಬಹುನಿರೀಕ್ಷಿತ ಮಾವೋ ನಾಯಕನನ್ನಾಗಿ ಮಾಡಿತ್ತು.
ಇದನ್ನೂ ಓದಿ: Yaduveer Wadiyar: ಪೌರಕಾರ್ಮಿಕರು, ದಲಿತರ ಜತೆ ಸಂಸದ ಯದುವೀರ್ ಸಹಪಂಕ್ತಿ ಭೋಜನ
ಅಬುಝ್ ಮದ್ ನಲ್ಲಿ ಹೆಚ್ಚುತ್ತಿದ್ದ ಎನ್ ಕೌಂಟರ್ ಗಳ ಕಾರಣದಿಂದ ಚಲಪತಿ ಇತ್ತೀಚೆಗಷ್ಟೇ ತನ್ನ ನೆಲೆಯನ್ನು ಕೆಲ ತಿಂಗಳುಗಳ ಹಿಂದೆಯಷ್ಟೇ ಗರಿಯಾಬಂದ್-ಒಡಿಸ್ಸಾ ಗಡಿಭಾಗಕ್ಕೆ ಸ್ಥಳಾಂತರಿಸಿದ್ದ. ಇದು ನಕ್ಸಲ್ ಚಟುವಟಿಕೆಗಳಿಗೆ ಸುರಕ್ಷಿತ ತಾಣವೆಂದೇ ಹೇಳಲಾಗುತ್ತಿತ್ತು.
ಎನ್‌ಕೌಂಟರ್
ಚಲಪತಿ ಮತ್ತು ಆತನ ಜೊತೆಗಾರರು, ಜಿಲ್ಲಾ ಮೀಸಲು ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ, ಛತ್ತೀಸ್ ಗಢದ ಕೋಬ್ರಾ ಕಮಾಂಡೋಗಳು ಹಾಗೂ ಒಡಿಸ್ಸಾದ ವಿಶೇಷ ಕಾರ್ಯಾಚರಣಾ ತಂಡಗಳ ಜೊತೆಗಿನ ಮುಖಾಮುಖಿಯಲ್ಲಿ ಸಾವನ್ನಪ್ಪಿದ್ದಾರೆ.
ಛತ್ತೀಸ್ ಗಢದ ಕುಲಾರಿಘಾಟ್ ನಲ್ಲಿ ನಕ್ಸಲರು ಬೀಡುಬಿಟ್ಟಿದ್ದಾರೆ ಎಂಬ ಗುಪ್ತಚರ ಮಾಹಿತಿಯನ್ನಾಧರಿಸಿ ಭದ್ರತಾ ಪಡೆಗಳು ಈ ಜಂಟಿ ಕಾರ್ಯಾಚರಣೆಯನ್ನು ಕೈಗೊಂಡಿದ್ದವು. ಎನ್ ಕೌಂಟರ್ ನಡೆದಿರುವ ಈ ಪ್ರದೇಶ ಒಡಿಶಾ ಗಡಿಯಿಂದ ಕೇವಲ 5 ಕಿಲೋ ಮೀಟರ್ ಗಳಷ್ಟು ದೂರದಲ್ಲಿದೆ.
ದೇಶದಲ್ಲಿ ಮಾವೋವಾದಿ ಚಟುವಟಿಕೆಗಳಿಗೆ ಅಂತ್ಯ ಹಾಡಲು ಕೇಂದ್ರ ಗೃಹಸಚಿವ ಅಮಿತ್ ಶಾ ನಿರ್ಧರಿಸಿರುವ ಬಳಿಕ ಕಳೆದ ವರ್ಷವೊಂದರಲ್ಲೇ 219 ಮಾವೊವಾದಿಗಳು ಹತರಾಗಿದ್ದಾರೆ, ಇವರಲ್ಲಿ 217 ಮಾವೋವಾದಿಗಳು ಬಸ್ತಾರ್ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಈ ಪ್ರದೇಶ ಬಸ್ತಾರ್, ಕಂಕೇರ್, ಬಿಜಾಪುರ್, ದಾಂತೇವಾಡ, ನಾರಾಯಣಪುರ, ಕೊಂಡಗಾಂವ್ ಮತ್ತು ಸುಕ್ಮಾ ಜಿಲ್ಲೆಗಳನ್ನು ಒಳಗೊಂಡಿದೆ.