Yadgiri News: ಯಾದಗಿರಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಕಿಡಿಗೇಡಿಗಳಿಂದ ಬೆಂಕಿ; ಸುಟ್ಟು ಕರಕಲಾಯ್ತು ಪೀಠೋಪಕರಣ
Crime News: ಯಾದಗಿರಿ ನಗರದ ಕನಕ ವೃತ್ತದ ಬಳಿಯಿರುವ ಕಾಂಗ್ರೆಸ್ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಘಟನೆಯಲ್ಲಿ ಸೋಫಾ, ಎಸಿ ಸುಟ್ಟು ಭಸ್ಮವಾಗಿದ್ದು, ಪೊಲೀಸರು, ಬೆರಳಚ್ಚು ತಜ್ಞರು ಸ್ಥಳಕ್ಕೆ ತನಿಖೆ ಕೈಗೆತ್ತಿಕೊಂಡಿದ್ದಾರೆ.


ಯಾದಗಿರಿ: ಯಾದಗಿರಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಕಿಡಿಗೇಡಿಗಳು ಬೆಂಕಿಯಿಟ್ಟ ಘಟನೆ ನಡೆದಿದೆ. ರಾತ್ರೋರಾತ್ರಿ ಕಾಂಗ್ರೆಸ್ ಕಚೇರಿಗೆ ಕಿಡಿಗೇಡಿಗಳು ಬೆಂಕಿಯಿಟ್ಟು ಪರಾರಿಯಾಗಿದ್ದಾರೆ (Yadgiri News). ʼʼಪೆಟ್ರೋಲ್ ಸುರಿದು ಕಾಂಗ್ರೆಸ್ ಕಚೇರಿಗೆ ಬೆಂಕಿ ಹಚ್ಚಿದ್ದು, ಘಟನೆಯಲ್ಲಿ ಸೋಫಾ, ಎಸಿ ಎಲ್ಲವೂ ಸುಟ್ಟು ಭಸ್ಮವಾಗಿದೆʼʼ ಎಂದು ಪೊಲೀಸರು ತಿಳಿಸಿದ್ದಾರೆ (Crime News). ಯಾದಗಿರಿ ನಗರದ ಕನಕ ವೃತ್ತದ ಬಳಿಯಿರುವ ಕಾಂಗ್ರೆಸ್ ಕಚೇರಿಯಲ್ಲಿ ಈ ಘಟನೆ ನಡೆದಿದೆ.
ಮಾಹಿತಿ ತಿಳಿದ ಕೂಡಲೇ ಕಾಂಗ್ರೆಸ್ ಕಚೇರಿಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಡಾಗ್ ಸ್ಕ್ವಾಡ್, ಬೆರಳಚ್ಚು ತಜ್ಞರು ಸ್ಥಳಕ್ಕೆ ಧಾವಿಸಿದ್ದಾರೆ. ಕಾಂಗ್ರೆಸ್ ಕಚೇರಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು ಪೆಟ್ರೋಲ್ ಕ್ಯಾನ್ ಅಲ್ಲೇ ಬಿಸಾಕಿ ಹೋಗಿದ್ದಾರೆ. ಘಟನೆ ಬಳಿಕ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದರು. ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚುವಂತೆ ಆಗ್ರಹಿಸಿದರು.
ಈ ಸುದ್ದಿಯನ್ನೂ ಓದಿ: Fire Accident: ಆಕಸ್ಮಿಕ ಬೆಂಕಿ ತಗುಲಿ ಕರು, ಹಸುಗಳ ಸಜೀವ ದಹನ
ಆಳಂದದಲ್ಲಿ ಪುಸ್ತಕ ಗೋದಾಮಿಗೆ ಬೆಂಕಿ
ಕಲಬುರಗಿ: ಶಿಕ್ಷಣ ಇಲಾಖೆಯ ಪುಸ್ತಕ ಗೋದಾಮಿಗೆ ಬೆಂಕಿ ತಗುಲಿ, ಕೋಟ್ಯಂತರ ರೂಪಾಯಿ ಮೌಲ್ಯದ ಪಠ್ಯ ಪುಸಕ್ತಗಳು ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿತ್ತು. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರು. 4ರಿಂದ 8ನೇ ತರಗತಿವರೆಗೆ ವಿವಿಧ ಶಾಲೆಗಳಿಗೆ ವಿತರಣೆಗಾಗಿ ದಾಸ್ತಾನು ಮಾಡಿದ್ದ ಪುಸ್ತಕ ಕೋಣೆಗೆ ಬೆಂಕಿ ತಗುಲಿ ನಷ್ಟವಾಗಿತ್ತು.
ಅವಘಡದಲ್ಲಿ ಒಂದು ಕೋಣೆಯಲ್ಲಿನ ಸುಮಾರು 2 ಲಕ್ಷಕ್ಕೂ ಅಧಿಕ ಪುಸ್ತಕಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಒಟ್ಟು 1 ಕೋಟಿ ರೂಪಾಯಿಗೂ ಹೆಚ್ಚಿನ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಇನ್ನೊಂದು ಕೋಣೆಯಲ್ಲಿ ಪುಸ್ತಕಗಳು ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದರು.
ಗೋದಾಮಿನಲ್ಲಿ ಇಡಲಾಗಿದ್ದ ಶಾಲೆಗಳಿಗೆ ವಿತರಣೆಯಾಗಬೇಕಿದ್ದ ಪಠ್ಯ ಪುಸ್ತಕಗಳು, ಕಲಿಕಾ ಸಾಮಗ್ರಿ ಮತ್ತು ಇತರ ಶೈಕ್ಷಣಿಕ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ ಎನ್ನಲಾಗಿವೆ. ಘಟನಾ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ರಂಗಸ್ವಾಮಿ ಶೆಟ್ಟಿ, ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮರೆಪ್ಪ ಬಡಿಗೇರ, ಬಿಆರ್ಸಿ ಅಣ್ಣಪ್ಪ ಹಾದಿಮನಿ, ಇಸಿಒ ಶ್ರೀಮಂತ ಪಾಟೀಲ ಅವರು ಆಗಮಿಸಿ ಪರಿಶೀಲನೆ ನಡೆಸಿದರು.
ಬೆಂಕಿಗೆ ಕಾರಣ ತಿಳಿದುಬಂದಿಲ್ಲವಾದರೂ, ಶಾರ್ಟ್ ಸರ್ಕ್ಯೂಟ್ ಅಥವಾ ಬೇರೆ ಯಾವ ಕಾರಣದಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ.