Shankar Mahadevan: ಎಐ ಮೂಲಕ ಗೀತೆ ರಚನೆ; ಸಂಗೀತ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆದ ಶಂಕರ್ ಮಹಾದೇವನ್
Shankar Mahadevan: ಪ್ರಖ್ಯಾತ ಗಾಯಕ ಶಂಕರ್ ಮಹಾದೇವನ್ ಕೃತಕ ಬುದ್ಧಿಮತ್ತೆಬಳಸಿ ಸಂಗೀತ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ ಅವರು ಗೂಗಲ್‌ನ ಲಿರಿಯಾ ಎಐ ಮ್ಯೂಸಿಕ್ ಜನರೇಟರ್ ಸಾಧನದ ಸಹಕಾರದಿಂದ ಒಂದು ಹಾಡನ್ನು ರಚಿಸಿದ್ದಾರೆ.

ಶಂಕರ್ ಮಹಾದೇವನ್

ಮುಂಬೈ: ಪ್ರಖ್ಯಾತ ಗಾಯಕ ಶಂಕರ್ ಮಹಾದೇವನ್ (Shankar Mahadevan) ಕೃತಕ ಬುದ್ಧಿಮತ್ತೆ (Artificial Intelligence) ಬಳಸಿ ಸಂಗೀತ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ ಅವರು ಗೂಗಲ್‌ನ (Google) ಲಿರಿಯಾ ಎಐ (Lyria AI ) ಮ್ಯೂಸಿಕ್ ಜನರೇಟರ್ ಸಾಧನದ ಸಹಕಾರದಿಂದ ಒಂದು ಹಾಡನ್ನು ರಚಿಸಿದ್ದಾರೆ. ಶಂಕರ್ ಮಹಾದೇವನ್ ಮೇ 20 ರಂದು ಅಮೆರಿಕದ ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂನಲ್ಲಿ ನಡೆದ ಗೂಗಲ್‌ನ ವಾರ್ಷಿಕ I/O ಡೆವಲಪರ್ ಸಮ್ಮೇಳನದಲ್ಲಿ ವರ್ಚುವಲ್ ಆಗಿ ಕಾಣಿಸಿಕೊಂಡರು. ಈ ಸಮ್ಮೇಳನದಲ್ಲಿ, ಗೂಗಲ್ ತಾವು ಅಭಿವೃದ್ಧಿಪಡಿಸುತ್ತಿರುವ ಹೊಸ ಎಐ ಉತ್ಪನ್ನಗಳ ಬಗ್ಗೆ ಮಾಹಿತಿ ಹಂಚಿಕೊಂಡಿತು, ಇದರಲ್ಲಿ ಚಲನಚಿತ್ರ ನಿರ್ಮಾಣಕ್ಕಾಗಿ ಒಂದು ಎಐ ಸಾಧನ ಮತ್ತು ಸಂಗೀತ ಉತ್ಪಾದನೆಗೆ ಸಂಬಂಧಿಸಿದ ಸಾಧನವೂ ಸೇರಿವೆ.
ಲಿರಿಯಾ 2ರ ಪರಿಚಯದ ವೇಳೆ, ಗೂಗಲ್ ಸಂಶೋಧನಾ ವಿಜ್ಞಾನಿ ಜೇಸನ್ ಬಾಲ್ಡ್‌ರಿಡ್ಜ್, "ನಾವು ಸಂಗೀತಗಾರರೊಂದಿಗೆ ಕೆಲಸ ಮಾಡಿ ಒಂದು ಸಂಗೀತ ಎಐ ಸ್ಯಾಂಡ್‌ಬಾಕ್ಸ್ ಅನ್ನು ಅಭಿವೃದ್ಧಿಪಡಿಸಿದ್ದೇವೆ. ಇದು ವೃತ್ತಿಪರರಿಗೆ ನಮ್ಮ ಜನರೇಟಿವ್ ಸಂಗೀತ ಮಾದರಿಯಾದ ಲಿರಿಯಾದ ಸಾಧ್ಯತೆಗಳನ್ನು ಅನ್ವೇಷಿಸಲು ಸಹಾಯ ಮಾಡುವ ಸಾಧನವಾಗಿದೆ. ಖ್ಯಾತ ಗಾಯಕ ಮತ್ತು ಸಂಗೀತ ಸಂಯೋಜಕ ಶಂಕರ್ ಮಹಾದೇವನ್ ಮ್ಯೂಸಿಕ್ ಎಐ ಸ್ಯಾಂಡ್‌ಬಾಕ್ಸ್ ಮತ್ತು ಲಿರಿಯಾವನ್ನು ಬಳಸಿರುವ ಕ್ಲಿಪ್‌ನ್ನು ವೀಕ್ಷಿಸೋಣ" ಎಂದು ಭಾರತೀಯ ಗಾಯಕನನ್ನು ಪರಿಚಯಿಸಿದರು.
ಈ ಸುದ್ದಿಯನ್ನು ಓದಿ: Viral News: ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ- ನೆಟ್ಟಿಗರಿಂದ ಫುಲ್ ಟ್ರೋಲ್!
ವಿಶ್ವಮಟ್ಟದಲ್ಲಿ ಭಾರತೀಯ ಸಂಗೀತ
ವಿಡಿಯೋದಲ್ಲಿ ಶಂಕರ್ ತಮ್ಮ ಸ್ಟುಡಿಯೋದಲ್ಲಿ ಕುಳಿತಿರುವುದನ್ನು ತೋರಿಸಲಾಗಿದೆ. ಅವರು, "ನಾನು ಸಂಗೀತ ಸಂಯೋಜಕ, ಗಾಯಕ, ನಿರ್ಮಾಪಕ. ಸ್ಯಾಂಡ್‌ಬಾಕ್ಸ್‌ನೊಂದಿಗೆ ಕೆಲಸ ಮಾಡುವುದು ತುಂಬಾ ಒಳ್ಳೆಯ ಅನುಭವ. ನಾವು ನಮ್ಮ ಅಗತ್ಯಗಳನ್ನು ನೀಡಿದೆವು, ಅದು ನಮಗೆ ಒಂದು ಬೇಸ್‌ಲೈನ್ ನೀಡಿತು. ಆ ಬೇಸ್‌ಲೈನ್ ಬಳಸಿ ನಾವು 'ರೂಬಾರೊ' ಎಂಬ ಹಾಡನ್ನು ರಚಿಸಿದೆವು" ಎಂದು ಹೇಳಿದರು.
ವಿಡಿಯೋದಲ್ಲಿ ಶಂಕರ್ ಮತ್ತು ಅವರ ತಂಡವು ಸ್ಟುಡಿಯೋದಲ್ಲಿ 'ರೂಬಾರೊ' ಹಾಡನ್ನು ರಚಿಸುವ ಕ್ಷಣಗಳನ್ನು ತೋರಿಸಲಾಗಿದೆ. ಸೂಕ್ತ ಬೀಟ್‌ಗಳ ಆಯ್ಕೆಯಿಂದ ಹಿಡಿದು ಪಿಚ್‌ನ ಸೂಕ್ಷ್ಮ ಸರಿಪಡಿಸುವಿಕೆಯವರೆಗೆ ಈ ಹಾಡಿನ ರಚನಾ ಪ್ರಕ್ರಿಯೆಯನ್ನು ವಿಡಿಯೋದಲ್ಲಿ ಕಾಣಬಹುದು. ಹಾಡು ರಚನೆಯ ಬಗ್ಗೆ ಮಾತನಾಡುತ್ತಾ,"ಸಂಗೀತಗಾರನಿಗೆ ಇದು ತುಂಬಾ ಪ್ರೇರಕ ಸಾಧನ. ನೀವು ಒಂದು ಬಾಗಿಲನ್ನು ತೆರೆದರೆ, ಅಲ್ಲಿ ಇನ್ನೊಂದು ಕೊಠಡಿ ಕಾಣುತ್ತದೆ. ಮತ್ತೊಂದು ಕೊಠಡಿಯನ್ನು ತೆರೆದರೆ, ಇನ್ನೊಂದು ಬಾಗಿಲು ಕಾಣುತ್ತದೆ ಎಐ ಇದನ್ನೇ ಮಾಡುತ್ತದೆ" ಎಂದು ಶಂಕರ್ ಮಹಾದೇವನ್ ಹೇಳಿದರು.
ಶಂಕರ್ ಮಹಾದೇವನ್ ಬಾಲಿವುಡ್, ಭಕ್ತಿಗೀತೆಗಳು ಮತ್ತು ಶಾಸ್ತ್ರೀಯ ಸಂಗೀತದಲ್ಲಿ ತಮ್ಮ ಬಹುಮುಖಿ ಸಂಗೀತ ಶೈಲಿಗೆ ಹೆಸರಾಗಿದ್ದಾರೆ. 'ಮಾ', 'ದಿಲ್ ಚಾಹತಾ ಹೈ', 'ಕಲ್ ಹೋ ನಾ ಹೋ', 'ದೇಸಿ ಗರ್ಲ್', 'ಕಜರಾ ರೇ' ಮತ್ತು 'ಉಫ್ ತೇರಿ ಅದಾ' ಇತ್ಯಾದಿ ಜನಪ್ರಿಯ ಹಾಡುಗಳಿಗೆ ಅವರು ಕೆಲಸ ಮಾಡಿದ್ದಾರೆ.