Sunday, 8th September 2024

ಪ್ರತಿಷ್ಠೆಗೆ ಜಯಂತಿ ಮಾಡದಿರಿ

ಇದು ತೀರಾ ವಿಚಿತ್ರ ಅನಿಸುತ್ತಿದೆ. ಸರ್ಕಾರಗಳು ಯಾವ ಉದ್ದೇಶಕ್ಕಾಗಿ ಜಾತಿಗೊಂದು, ಉಪಜಾತಿಗೊಂದು ಎಂಬಂತೆ ಗತಿಸಿದ ಒಬ್ಬೊಬ್ಬ ಮಹನಿಯರನ್ನು ಸೀಮಿತಗೊಳಿಸಿ, ಅವರ ಹೆಸರಿನಲ್ಲಿ ಜಯಂತಿಗಳನ್ನು ಸೃಷ್ಟಿಸಿ ಸರಕಾರಿ ಆಚರಣೆಗಳನ್ನು ಘೋಷಿಸುತ್ತಿದೆ.

ವಿಭಿನ್ನ ಜಾತಿಗಳ ಹೆರಿನಲ್ಲಿ ಶರಣರು, ಸಂತರ, ಮಹನೀಯರ ಜಯಂತಿ ಆಚರಣೆ ಹೇರಿಕೆಯಿಂದಾಗಿ ಸಮಾಜದಲ್ಲಿ ಒಡಕು ಮೂಡುತ್ತಿದೆ. ಉಳಿದ ಜಾತಿಗಳ ಮಹನೀಯರ ಸೇವೆಯನ್ನು ಗೌಣ ಮಾಡುವುದರ ಜತೆಗೆ ಉಳಿದವರಿಗೆ ಅವರ ಬಗ್ಗೆ ಪ್ರತ್ಯೇಕ ಭಾವನೆ ಬರೋ ಹಾಗೆ ಆಗಿದೆ. ಮಾಥ್ರವಲ್ಲ ಅಂಥವರೆಲ್ಲ ಒಂದು ಜಾತಿಗೆ, ಒಂದು ಪಕ್ಷಕ್ಕೆ ಸೀಮಿತ ಅನ್ನೋ ಪ್ರತ್ಯೇಕ ಭಾವನೆ ಬರೋ ಹಾಗೆ ಆಗಿದೆ. ಪಕ್ಷಗಳು ಒಲೈಕೆ ರಾಜಕಾರಣಕ್ಕೆ ಇಳಿದು ಸಮಾಜದಲ್ಲಿನ ಐಕ್ಯ ಭಾವನೆ ಒಡೆಯುವ ಸನ್ನಿವೇಶ ಸೃಷ್ಟಿಸು ತ್ತಿವೆ.

ಶಾಲಾ ಮಕ್ಕಳ ಮನಸ್ಸಿನಲ್ಲಿ ಇದರಿಂದಲೇ ಜಾತಿ ಭಾವನೆ ಮೊಳೆಯುತ್ತಿದೆ. ಇದರ ಬದಲು, ಸಮಾಜದ ಎಲ್ಲ ವರ್ಗಗಳ ಸಂತರು, ಶರಣರು, ಸಮಾಜ ಸುಧಾರಕರು ದೇಶ ಕ್ಕಾಗಿ ಹೋರಾಡಿದ ಮಹನೀಯರ ಬಗೆಗೆ ಕೈಪಿಡಿಗಳನ್ನು ಹೊರತಂದು ಎಲ್ಲೆಡೆ ಪ್ರಸರಣಕ್ಕೆ ವ್ಯವಸ್ಥೆ ಮಾಡುವ ಜತೆಗೆ ಶಾಲೆಗಳಲ್ಲೂ ಮಕ್ಕಳಿಗೆ ಅವರ ಕೊಡುಗೆ, ಬದುಕಿನ ಮೌಲಗಳನ್ನುತಿಳಿಸುವ ವ್ಯವಸ್ಥೆ ಮಾಡಲಿ. ಇಷ್ಟೆಲ್ಲಾ ಯಾಕೆ? ಹೇಳಿದೆ ಅಂದರೆ ಮೊನ್ನೆ ನಮ್ಮ ಊರಲ್ಲೆ ಹಜರತ್ ಟಿಪ್ಪು ಸುಲ್ತಾನರ 271ನೇ ಜನ್ಮದಿನೋತ್ಸವ ಹಾಗೂ ಸನ್ಮಾನ ಸಮಾರಂಭದಲ್ಲಿ ಮುಖ್ಯಸ್ವಲ್ಪ ಹೊತ್ತಿನವರೆಗೂ ತ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು. ನಾಯಕರ ಸ್ವಪ್ರತಿಷ್ಠೆಗಾಗಿ ಇಂಥ ಜಯಂತಿಗಳು ಬಳಕೆಯಾಗುವ ಬದಲು, ಎಲ್ಲ ಜಯಂತಿ ಗಳನ್ನೂ ನಿಲ್ಲಿಸುವುದೊಳಿತು.
– ಪ್ರೊ. ಗಜೇಂದ್ರಗಡ ಗದಗ

ಸಹಜೀವನ ಛೇದಿಸದಿರಿ
ಪಶ್ಚಿಮ ಘಟ್ಟಗಳಲ್ಲಿ ಪರಿಸರ ಸೂಕ್ಷ್ಮ ವಲಯ ಘೋಷಣೆಗೆ ಸಂಬಂಧಿಸಿದ ಡಾ.ಕೆ. ಕಸ್ತೂರಿ ರಂಗನ್ ವರದಿಯ ಅನುಷ್ಠಾನವನ್ನು ರಾಜ್ಯ ಸರಕಾಋ ವಿರೋಧಿಸಿದೆ.

‘ಉಪಗ್ರಹ’ ಚಿತ್ರಗಳ ಆಧಾರದ ಮೇಲೆ ವರದಿ ತಯಾರಿಸಲಾಗಿದ್ದು, ಈ ಆಧಾರದಲ್ಲಿ‘ಪರಿಸರ ಸೂಕ್ಷ್ಮ’ ವಲಯಗಳನ್ನು ಗುರುತಿಸಿ ದರೆ ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದು ಆ ಭಾಗದ ಜನ ಹಾಗೂ ಜನಪ್ರತಿನಿಧಿಗಳ ವಾದ. ಪಶ್ಚಿಮ ಘಟ್ಟಗಳಲ್ಲಿ ಈಗಾಗಲೇ ಕಟ್ಟುನಿಟ್ಟಿನ ಅರಣ್ಯ ಸಂರಕ್ಷಣಾ ಕಾಯಿದೆ ಸೇರಿದಂತೆ ಹಲವಾರು ಸೂಕ್ಷ್ಮ ಕಾನೂನುಗಳು ಜಾರಿಯ ಲ್ಲಿದ್ದು, ಈ ಕಾನೂನುಗಳ ಪಾಲನೆಯಾಗಬೇಕಷ್ಟೆ. ಇಲ್ಲಿನ ನಿವಾಸಿಗಳು ತಮ್ಮ ಪೂರ್ವಜರ ಪರಂಪರೆಯಲ್ಲಿ ನಡೆದು ಅರಣ್ಯ ದೊಂದಿಗೆ, ತಮ್ಮ ಸಹಜೀವನೋಪಾಯ ಕಂಡುಕೊಂಡಿದ್ದಾರೆ.

ಕಾನೂನಿನ ಚೌಕಟ್ಟಿನಲ್ಲಿ ಪರಿಸರಕ್ಕೆ ತೊಂದರೆಯಾಗದಂತೆ ಜೀವನ ಸಾಗಿಸುತ್ತಿzರೆ. ವಾಸ್ತವಕ್ಕೆ ದೂರವಾದ ವರದಿಯು ಜಾರಿ ಯಾದರೆ. ಈ ಪ್ರದೇಶದ ಜನರ ಜೀವನ ಇನ್ನಷ್ಟು ಕಾನೂನಿನ ಸಂಕೋಲೆಯ ಬಲೆಗೆ ಸಿಕ್ಕು, ಸ್ವತಂತ್ರ, ಸ್ವಚ್ಛಂದ ನೈಸರ್ಗಿಕ ಬದುಕು ಕಳೆದುಕೊಂಡು ಅತಂತ್ರರಾಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರದ ಕಳಕಳಿಯ ನಿರ್ಧಾರವು ಇಲ್ಲಿನ ಜನರ ನೆಮ್ಮದಿ ಕಾಯುವ ನಿಟ್ಟಿನಲ್ಲಿ ತೆಗೆದುಕೊಂಡ ದಿಟ್ಟ ನಿಲುವು ಸ್ವಾಗತಾರ್ಹ, ಹಾಗೆ ಸೂಕ್ತ ನಿರ್ಧಾರವಾಗಿದೆ.
– ಆರ್‌ಬಿಜಿ ಘಂಟಿ ಬಾಗಲಕೋಟೆ

ಇನ್ನೂ ಬಯಲಿಗೇ ಹೋಗುವುದೇಕೆ?
ಸರಕಾರ ಸ್ವಚ್ಛತೆ ಮತ್ತು ನೈರ್ಮಲೀಕರಣಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಬಹಳಷ್ಟು ಸಾರ್ವ ಜನಿಕ ಶೌಚಾಲಯಗಳನ್ನ ನಿರ್ಮಾಣ ಮಾಡುತ್ತಿದೆ. ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಂಡವರಿಗೂ ಸ್ವಚ್ಛ ಭಾರತ ಮಿಶನ್ ಅಡಿಯಲ್ಲಿ ಪ್ರೋತ್ಸಾಹ ಧನ ಮಂಜೂರು ಮಾಡುತ್ತದೆ. ಆದರೂ ಬಯಲು ಬಹಿರ್ದೆಸೆ ಪದ್ಧತಿ ನಿಲ್ಲುತ್ತಿಲ್ಲ ಏಕೆ? ಅದರಲ್ಲೂ ಬಹಳಷ್ಟು ಹಳ್ಳಿಗಳಲ್ಲಿ ಜನರು, ಹೆಣ್ಣು ಮಕ್ಕಳು ಶೌಚಾಲಯಕ್ಕಾಗಿ ಗ್ರಾಮ ರಸ್ತೆಗಳು, ಜಮೀನುಗಳಿಗೆ ತೆರಳುವ ರಸ್ತೆಗಳು ಜಿ ಮತ್ತು ರಾಜ್ಯ ಹೆದ್ದಾರಿಗಳನ್ನೇ ನೆಚ್ಚಿಕೊಂಡಿದ್ದಾರೆ. ಹೆಣ್ಣು ಮಕ್ಕಳ ಪರಿಸ್ಥಿತಿಯಂತೂ ಹೆಳತಿರದು. ರಸ್ತೆಯ ಪಕ್ಕದಲ್ಲೇ ಬಹಿರ್ದೆಸೆಗೆ ಕೂರುತ್ತಾರೆ.

ಇಲ್ಲಿ ವಾಹನಗಳ ಓಡಾಟದ ಸಂದರ್ಭ ಎದ್ದು ನಿಲ್ಲಬೇಕಾಗುವುದರಿಂದ ಬಹಳಷ್ಟು ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಆ ರಸ್ತೆಗಳಲ್ಲಿ ತೆರಳುವ ಸಾರ್ವಜನಿಕರಿಗೂ ತಪ್ಪಿತಸ್ಥ ಮನೋಭಾವ ಉಂಟಾಗುತ್ತದೆ. ಹಳ್ಳಿಗಳು ಮೊದಲು ಅಭಿವೃದ್ಧಿಯಾಗಬೇಕು. ಹಳ್ಳಿಗಳು ಉದ್ಧಾರವಾದರೆ ದೇಶ ಅಭಿವೃದ್ಧಿ ಆಗುತ್ತದೆ ಎಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದು ಇಂದಿಗೂ ಪ್ರಸ್ತುತ.

ಹಳ್ಳಿಗಳ ಮಟ್ಟದಲ್ಲಿ ಗ್ರಾಮ ಪಂಚಾಯಿತಿಗಳಿಗೂ ಕೋಟ್ಯಂತರ ರು. ಅನುದಾನ ದೊರಕುತ್ತಿದೆ. ಆದರೂ ಸ್ವಚ್ಛ ಭಾರತ ಮತ್ತು
ನಿರ್ಮಲ ಗ್ರಾಮ ಪುರಸ್ಕಾರದಂತಹ ಯೋಜನೆಗಳು ಕೇವಲ ಸರಕಾರದ ದಾಖಲೆಗಳಲ್ಲಿ ದಾಖಲಾಗುತ್ತಿವೆ ವಿನಃ ಪ್ರಾಯೋಗಿಕ ವಾಗಿ ಪರಿಣಾಮಕಾರಿ ಜಾರಿಯಾಗುತ್ತಿಲ್ಲ. ಸಂಬಂಧಿಸಿದ ಇಲಾಖೆಯವರು ಇದರತ್ತ ಗಮನ ಹರಿಸಲಿ.
-ಗುರುರಾಜ ಪಾಟೀಲ ಇಂಡಿ

ಒಂದು ಮೊಟ್ಟೆಯ ಕತೆ
ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ, ರಕ್ತಹೀನತೆ ಹಾಗೂ ಪೋಷಕಾಂಶಗಳ ಕೊರತೆಯನ್ನು ದೂರ ಮಾಡಲು ಸರ್ಕಾರ ಒಂದರಿಂದ ಎಂಟನೇ ತರಗತಿಯ ಮಕ್ಕಳಿಗೆ ತಿಂಗಳಿಗೆ ತಲಾ ೧೨ ಮೊಟ್ಟೆ, ಬಾಳೆಹಣ್ಣು ವಿತರಿಸುವಂತೆ ಆದೇಶಿಸಿದೆ.

ಈ ಆದೇಶಕ್ಕೆ ಪರ, ವಿರೋಧ ಪ್ರತಿಕ್ರಿಯೆಗಳು ಪುಂಖಾನುಪುಂಖವಾಗಿ ಹೊರಹೊಮ್ಮುತ್ತಿವೆ. ಮೊಟ್ಟೆ ವಿರೋಧಿ ಸಸ್ಯಾಹಾರಿಗಳು ಮೊಟ್ಟೆ ರಾಸಾಯನಿಕದಿಂದ ಕೂಡಿದ್ದು ಮಾಂಸಾಹಾರಿ ಎಂದು ವಾದಿಸಿದರೆ, ಪರವಾದಿಗಳು ಮೊಟ್ಟೆ ಅತ್ಯುತ್ತಮ ಪೌಷ್ಟಿಕ ಆಹಾರ, ಮಕ್ಕಳಿಗೆ ಕೊಡುವುದನ್ನು ನಿಲ್ಲಿಸಬೇಡಿ ಎಂದಿದ್ದಾರೆ. ಧಾರವಾಡದ ಅಕ್ಕಮಹಾದೇವಿ ಅನುಭಾವ ಪೀಠದಲ್ಲಿ ೬ ಪೀಠಾಧಿಪತಿಗಳ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಸ್ವಾಮೀಜಿಗಳು ಸಭೆ ಸೇರಿ ಸರ್ಕಾರಕ್ಕೆ ಈ ನಿರ್ಧಾರ ಕೈಬಿಡಿ, ಮಕ್ಕಳಲ್ಲಿ ಸಸ್ಯಾಹಾರಿ, ಮಾಂಸಾಹಾರಿ ಎಂಬ ಭೇಧಭಾವ ಬೆಳೆಸಬೇಡಿ.

ಬದಲಾಗಿ ಸಾರ್ವತ್ರಿಕವಾಗಿ ಹೇರಳ ಪೌಷ್ಟಿಕಾಂಶ ಹೊಂದಿರುವ ಹಣ್ಣು, ಹಾಲು, ಕಾಳು, ಜೀರಿಗೆ ಕೊತ್ತಂಬರಿ ಕಷಾಯ ಕೊಡಿ.
ಇಲ್ಲವಾದರೆ ನಾವು ಹೋರಾಟ ನಡೆಸಬೇಕಾದ ಪ್ರಮೇಯ ಬರುತ್ತದೆ ಎಂದು ಎಚ್ಚರಿಸಿzರೆ. ಮೂಡಬಿದರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕರ ಸ್ವಾಮೀಜಿಗಳು, ಭಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದದೇವರು ಆದಿಯಾಗಿ ಹಲವು ಮಠಾಧೀಶರು ಮೊಟ್ಟೆಗೆ ಕೆಂಪು ಬಾವುಟ ತೋರಿದ್ದಾರೆ.

ಇನ್ನೊಂದೆಡೆ ವಿರೋಧ ಪಕ್ಷಗಳು, ವಾಮಪಂಥೀಯರು, ರಾಜ್ಯ ಎಸ್‌ಡಿಎಂಸಿ ಸಮನ್ವಯ ಸಮಿತಿ ಮತ್ತಿತರ ಸಂಘಟನೆಯವರು ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿದರೆ ಉಗ್ರ ಹೋರಾಟ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುರ್ಮಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೊಟ್ಟೆ ಬೇಡವೆಂದು ರಾಜ್ಯ ಸರಕಾರ ಮನುಸ್ಮೃತಿ ರಾಜಕಾರಣ ಮಾಡುತ್ತಿದೆ. ಈ ಸರ್ಕಾರ ಬೇಕಾದರೆ ಜುಟ್ಟು ಬಿಟ್ಟುಕೊಂಡು ಗಂಟೆ ಹಿಡಿದು ಹೋಗಲಿ ಎಂದು ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.

ಒಟ್ಟಾರೆ ಈ ಒಂದು ಮೊಟ್ಟೆಯ ಕತೆ ಮಾನ್ಯ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಬಾಣಲೆಯೋ, ಬೆಂಕಿಯೋ ತಿಳಿಯ ದಂತಾಗಿದೆ!
-ಕೆ. ಶ್ರೀನಿವಾಸ ರಾವ್. ಹರಪನಹಳ್ಳಿ

error: Content is protected !!